ಅತ್ಯಂತ ಕಡಿಮೆ ವಯಸ್ಸಿನಲ್ಲಿ ಹೆಚ್ಚು ದಾಖಲೆ ನಿರ್ಮಿಸಿರುವ ಪಂಕಜ್ ಅಡ್ವಾಣಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಹಲವಾರು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿರುವ ಪ್ರತಿಭಾನ್ವಿತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಕರ್ನಾಟಕದ ಪ್ರತಿಭೆ ಎನ್ನುವುದು ಕನ್ನಡ ನಾಡಿನ ಹೆಮ್ಮೆ. ಇದೀಗ ಇವರು 'ಪದ್ಮ ಭೂಷಣ' ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ.
ಜುಲೈ 24, 1985ರಲ್ಲಿ ಭಾರತದ ಪುಣೆಯಲ್ಲಿ ಜನಿಸಿದ ಪಂಕಜ್ ಅಡ್ವಾಣಿ ತಮ್ಮ ಆರಂಭಿಕ ಜೀವನವನ್ನು ಕುವೈತ್ ನಲ್ಲಿ ಕಳೆದರು. ನಂತರ ಬೆಂಗಳೂರಿಗೆ ತೆರಳಿ ತಮ್ಮ ಫ್ರಾಂಕ್ ಅಂಥೋನಿ ಪ್ರೌಢ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಮಹಾವೀರ್ ಜೈನ್ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದರು.
ಹತ್ತನೇ ವಯಸ್ಸಿನಲ್ಲಿ ಅವರಿಗೆ ಸ್ನೂಕರ್ ನಲ್ಲಿ ಆಸಕ್ತಿ ಉಂಟಾಯಿತು. ನಂತರ ಮಾಜಿ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್ ಅರವಿಂದ್ ಸಾವರ್ ಅವರ ಬಳಿ ತರಬೇತಿ ಪಡೆದ ಪಂಕಜ್ ತಮ್ಮ ಹನ್ನೆರಡನೆ ವಯಸ್ಸಿನಲ್ಲಿ ತಮ್ಮ ಮೊದಲ ಪ್ರಶಸ್ತಿ ಪಡೆದರು. 2000 ಇಸವಿಯಲ್ಲಿ ಇಂಡಿಯನ್ ಜೂನಿಯರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ವಿಜೇತ ಎಂಬ ಕೀರ್ತಿಗೆ ಭಾಜನರಾದರು.
ಕಿರಿಯ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದ ಅಡ್ವಾಣಿ 2003ರ ಇಂಡಿಯಾ ಜೂನಿಯರ್ ಸ್ನೂಕರ್ ಚಾಂಪಿಯನ್ ಶಿಪ್ ವಿಜೇತ. ಸ್ನೂಕರ್ ಮತ್ತು ಬಿಲಿಯರ್ಡ್ಸ್ ನಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿ ಹಲವಾರು ದಾಖಲೆ ನಿರ್ಮಿಸಿರುವ ಅಡ್ವಾಣಿ, ಏಷ್ಯನ್ ಗೇಮ್ಸ್ ನಲ್ಲಿ ಎರಡು ಬಾರಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ ಹಾಗೂ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್.