ದುಬೈ: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಪದಾರ್ಪಣೆ ಮಾಡಿದ್ದ 18ರ ಹರೆಯದ ಪೃಥ್ವಿ ಶಾ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಶತಕ ಸಿಡಿಸಿ ಸಾಧನೆ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮುಂಬೈನ ಪೃಥ್ವಿ 'ಶಾ'ನ್‌ದಾರ್ ಶತಕ ಸಿಡಿಸಿ ಎಲ್ಲರ ಉಬ್ಬೇರಿಸಿದ್ದರು.
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಅಂತ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ನೂತನ ರ‍್ಯಾಂಕ್ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಪೃಥ್ವಿ ಶಾ ಭಾರಿ ಜಿಗಿತವನ್ನೇ ಕಂಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್‌ಮನ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪೃಥ್ವಿ ಶಾ 23 ಸ್ಥಾನ ಬಡ್ತಿಹೊಂದಿದ್ದು 60ನೇ ಸ್ಥಾನ ತಲುಪಿದ್ದಾರೆ. ಜೊತೆಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 62ನೇ ಸ್ಥಾನ ಗಿಟ್ಟಿಸಿದ್ದಾರೆ. ಅಜಿಂಕ್ಯ ರಹಾನೆ 4 ಸ್ಥಾನ ಜಿಗಿದು 18ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಪದಾರ್ಪಣೆ ಮಾಡಿರುವ ಪೃಥ್ವಿ ಶಾ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಪೃಥ್ವಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕೇವಲ 3 ಗಂಟೆಗಳಲ್ಲಿ ಡಜನ್'ಗಟ್ಟಲೆ ದಾಖಲೆಗಳನ್ನು ಮುರಿದಿದ್ದರು. ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್ ಚೊಚ್ಚಲ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಕ್ರಿಕೆಟಿಗ ಪೃಥ್ವಿ ಶಾ. ಮೊದಲ ರಣಜಿ ಪಂದ್ಯದಲ್ಲಿ 120 ರನ್ಗಳನ್ನು ಮತ್ತು ಮೊದಲ ದುಲೀಪ್ ಟ್ರೋಫಿಯಲ್ಲಿ 154 ರನ್ ಗಳಿಸಿದರು. ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿದ ಮೂರನೆಯ ವೇಗದ ಕ್ರಿಕೆಟಿಗ ಪೃಥ್ವಿ ಶಾ. ಇವರು 99 ಎಸೆತಗಳಲ್ಲಿ ಶತಕ ಸಿಡಿಸಿದರು. ಕಿರಿಯ ವಯಸ್ಸಿನ ಶತಕ ಸಿಡಿಸಿದವರಲ್ಲಿ ಪೃಥ್ವಿ ಏಳನೇ ಸ್ಥಾನದಲ್ಲಿದ್ದಾರೆ.