Indian Railwasy: ದೀರ್ಘ ಕಾಲದಿಂದಲೂ ಭಾರತೀಯ ರೈಲ್ವೇ ಹಳಿಗಳನ್ನು ಕಡೆಗಣಿಸುತ್ತಾ ಬರಲಾಗಿದೆ. ಅವುಗಳನ್ನು ದೇಶಾದ್ಯಂತ ಸಂಚರಿಸುವ ವೇಗದ ರೈಲುಗಳಿಗೆ ಪೂರಕವಾಗಿರುವಂತೆ ನಿರ್ಮಿಸಲಾಗಿಲ್ಲ. ಭಾರತ ಸರ್ಕಾರ ರೈಲ್ವೇ ಓಡಾಟ ಮತ್ತು ಹಳಿಗಳ ನಿರ್ವಹಣೆಯನ್ನು ಪರಿಶೀಲಿಸಲು ಒಂದು ಸ್ವಯಂಚಾಲಿತ ವ್ಯವಸ್ಥೆಯನ್ನು ಅತ್ಯಂತ ಆದ್ಯತೆ ನೀಡಿ ಜಾರಿಗೆ ತರಬೇಕಿದೆ.
300 ಜನರ ಸಾವಿಗೆ ಕಾರಣವಾದ ಭೀಕರ ರೈಲು ಅಪಘಾತ ಭಾರತೀಯ ರೈಲ್ವೇಯ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯತೆಗೆ ಹಿಡಿದಿರುವ ಕೈಗನ್ನಡಿಯಾಗಿದೆ. ಪ್ರತಿದಿನವೂ ಮಿಲಿಯನ್‌ಗಟ್ಟಲೆ ಭಾರತೀಯರು ಬ್ರಿಟಿಷ್ ಸಾಮ್ರಾಜ್ಯದ ಪಳೆಯುಳಿಕೆಯಾದ ಭಾರತೀಯ ರೈಲ್ವೆಯ ಮೇಲೆ ಅವಲಂಬಿತರಾಗಿದ್ದಾರೆ. ಇಷ್ಟಾದರೂ, ರೈಲ್ವೇ ಸುರಕ್ಷತೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆ ಇಲ್ಲಿಯ ತನಕ ನಡೆಸಲಾಗಿಲ್ಲ.
ಶುಕ್ರವಾರ ಒಡಿಶಾ ರಾಜ್ಯದಲ್ಲಿ ನಡೆದ ದುರಂತಮಯ ರೈಲು ಅಪಘಾತದಲ್ಲಿ 275 ಜನರು ಸಾವಿಗೀಡಾಗಿದ್ದು, 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೋರಮಂಡಲ್ ಶಾಲಿಮಾರ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲು ಬಾಲಾಸೋರ್ ಬಳಿ ಹಳಿ ತಪ್ಪಿತು. ಅದಕ್ಕೆ ವೇಗವಾಗಿ ಬಂದ ಯಶವಂತಪುರ - ಹೌರಾ ಸೂಪರ್‌ಫಾಸ್ಟ್ ರೈಲು ಡಿಕ್ಕಿ ಹೊಡೆಯಿತು. ಆಂತರಿಕ ವರದಿಯೊಂದರ ಪ್ರಕಾರ, ಸಿಗ್ನಲ್ ವೈಫಲ್ಯದಿಂದಾಗಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ- ಭಾರತವನ್ನು ನಾಶ ಮಾಡುವ ಮೊದಲೇ ಭ್ರಷ್ಟಾಚಾರ ಕೊನೆಗೊಳಿಸೋಣ!
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತಗಾರರು ನಿರ್ಮಿಸಿರುವ ಭಾರತೀಯ ರೈಲ್ವೆ ಜಗತ್ತಿನ ಅತ್ಯಂತ ಹಳೆಯ ರೈಲ್ವೇಗಳಲ್ಲಿ ಒಂದಾಗಿದೆ. ಪ್ರತಿದಿನವೂ ಈ ರೈಲ್ವೆ ಬಹುತೇಕ 25 ಮಿಲಿಯನ್ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. 7,000 ರೈಲ್ವೇ ಸ್ಟೇಷನ್‌ಗಳ ಮೂಲಕ ಅಂದಾಜು 19,000 ರೈಲುಗಳು ಸಂಚರಿಸುತ್ತವೆ. ಸರ್ಕಾರ ರೈಲುಗಳ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಇಂದಿಗೂ ಪ್ರತಿವರ್ಷ ನೂರಾರು ರೈಲು ಅಪಘಾತಗಳು ಸಂಭವಿಸುತ್ತವೆ.
ಪ್ರಸ್ತುತ ಇರುವ ರೈಲ್ವೇ ಮೂಲಭೂತ ವ್ಯವಸ್ಥೆಯ ಸುಧಾರಣೆಗೆ ಹೆಚ್ಚಿನ ಹಣಕಾಸು ಹೂಡಿಕೆ ಮಾಡದಿರುವುದು ರೈಲ್ವೇ ಈಗಾಗಲೇ ಎದುರಿಸುತ್ತಿರುವ ಸಂಕಷ್ಟಕ್ಕೆ ಇನ್ನಷ್ಟು ಸೇರ್ಪಡೆಯಾಗುವಂತೆ ಮಾಡಿದೆ.
ಕಳೆದ 18 ವರ್ಷಗಳ ಕಾಲ ರೈಲು ಸಲಹೆಗಾರರಾಗಿದ್ದ ಲಲಿತ್ ಚಂದ್ರ ತ್ರಿವೇದಿಯವರು ಭಾರತೀಯ ರೈಲ್ವೇ ವ್ಯವಸ್ಥೆಗೆ ಸಾಕಷ್ಟು ಹೂಡಿಕೆ ಮಾಡದಿರುವುದರ ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ.
ತ್ರಿವೇದಿಯವರು ಭಾರತದಲ್ಲಿರುವ ರೈಲ್ವೇ ಮೂಲಭೂತ ವ್ಯವಸ್ಥೆಗಳು ಪ್ರತಿ ಗಂಟೆಗೆ 110 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ರೈಲುಗಳಿಗೆ ಪೂರಕವಾಗಿಲ್ಲ ಎಂದು ವರದಿ ಮಾಡಿದ್ದು, 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ರೈಲುಗಳ ಪೂರ್ಣ ಸಾಮರ್ಥ್ಯವನ್ನು ಭಾರತದಲ್ಲಿ ಬಳಸಲು ಸಾಧ್ಯವಿಲ್ಲ ಎಂದಿದ್ದಾರೆ. ಅದರೊಡನೆ, ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರ್‌ಗಳು ಭಾರತೀಯ ರೈಲ್ವೆಗೆ ಸೇರ್ಪಡೆಯಾಗದಿರುವುದರ ಕುರಿತೂ ಅವರು ಕಳವಳ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ- ಆಗಸದಲ್ಲಿನ ಅಪಾಯಗಳು: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯುವುದು ಯಾಕೆ ಗಂಭೀರ ತೊಂದರೆ?
ಭಾರತೀಯ ರೈಲ್ವೇ ಕಾಲ ಕಾಲಕ್ಕೆ ಹೊಸ ರೈಲುಗಳನ್ನು ಪಡೆದುಕೊಂಡಿದೆ, ಮತ್ತು ಪ್ರಯಾಣಿಕರಿಗೆ ಸಬ್ಸಿಡಿ ದರದಲ್ಲಿ ಟಿಕೆಟ್ ಒದಗಿಸುತ್ತಾ ಬಂದಿದೆ. ಆದರೆ ಅತಿ ದೀರ್ಘಾವಧಿಯಿಂದಲೂ ಭಾರತದಲ್ಲಿನ ರೈಲ್ವೇ ಹಳಿಗಳು ನಿರ್ವಹಣೆಯ ಕೊರತೆಯನ್ನು ಅನುಭವಿಸುತ್ತಾ, ನಿರ್ಲಕ್ಷ್ಯಕ್ಕೊಳಗಾಗಿವೆ.
ತಾಪಮಾನಕ್ಕೆ ತಕ್ಕಂತೆ ಹಿಗ್ಗುವ ಅಥವಾ ಕುಗ್ಗುವ ರೈಲ್ವೇ ಹಳಿಗಳು ದೇಶಾದ್ಯಂತ ಸಂಚರಿಸುವ, ಆಧುನಿಕ, ವೇಗದ ರೈಲುಗಳಿಗೆ ಖಂಡಿತವಾಗಿಯೂ ಪೂರಕವಾಗಿಲ್ಲ. ಹಲವಾರು ರೈಲ್ವೇ ಸೇತುವೆಗಳು ಮತ್ತು ಸುರಂಗಗಳು ದುರ್ಬಲವಾಗಿದ್ದು, ಅವುಗಳ ಪುನರ್ ನಿರ್ಮಾಣದ ಅಗತ್ಯವಿದೆ.
ಭಾರತೀಯ ರೈಲ್ವೇ ಜಾಲದ ಜವಾಬ್ದಾರಿ ಹೊಂದಿರುವ ಭಾರತೀಯ ರೈಲ್ವೇ ಇಲಾಖೆ, ಹಳಿಗಳ ದೋಷದಿಂದಾಗಿ ರೈಲು ಹಳಿ ತಪ್ಪುವುದನ್ನು ತಪ್ಪಿಸಲು, ಸ್ವಯಂ ಚಾಲಿತ ಅಲ್ಟ್ರಾಸೌಂಡ್ ಪತ್ತೆ ವ್ಯವಸ್ಥೆಯನ್ನು ಅಳವಡಿಸಲು ಕರೆ ನೀಡಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿರುವ ಹಳಿಗಳಲ್ಲಿ ಏನಾದರೂ ದೋಷ ಉಂಟಾಗಿದೆಯೇ ಎಂದು ಪತ್ತೆ ಹಚ್ಚಲು ಕಾರ್ಮಿಕರೇ ತೆರಳುವ ಅವಶ್ಯಕತೆಯಿದೆ.
2021ರಲ್ಲಿ ಮಹಾಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ - ಸಿಎಜಿ) ವರದಿಯ ಪ್ರಕಾರ, ರೈಲುಗಳು ಪ್ರಾಥಮಿಕವಾಗಿ ಹಳಿಗಳ ನಿರ್ವಹಣೆಯ ಕೊರತೆಯ ಕಾರಣದಿಂದಾಗಿ ಹಳಿ ತಪ್ಪುತ್ತವೆ. ಯಾಂತ್ರಿಕ ದೋಷಗಳು ಮತ್ತು ರೈಲು ಬಂಡಿಯ ದೋಷಗಳು ಇನ್ನಿತರ ಕಾರಣಗಳಾಗಿವೆ.
ಇದನ್ನೂ ಓದಿ- ಎನ್‌ವಿಎಸ್-01 ಉಪಗ್ರಹ ಉಡಾವಣೆ : ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ತರಲಿದೆ ಕ್ರಾಂತಿಕಾರಿ ಬದಲಾವಣೆ
ಐಐಎಂ ಇಂದೋರಿನಲ್ಲಿ ಕಾರ್ಯತಂತ್ರ ನಿರ್ವಹಣಾ ಉಪನ್ಯಾಸಕರಾಗಿರುವ ಸ್ವಪ್ನಿಲ್ ಗಾರ್ಗ್ ಅವರು ಬಿಹಾರದಲ್ಲಿ ನಡೆದ ಅಪಘಾತ ವ್ಯವಸ್ಥೆಯ ದೋಷದಿಂದ ಸಂಭವಿಸಿದ್ದು, ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೆ ಅದನ್ನು ತಪ್ಪಿಸಲು ಸಾಧ್ಯವಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಅಪಘಾತಕ್ಕೀಡಾದ ಎರಡು ರೈಲುಗಳು ಒಂದೇ ಹಳಿಯಲ್ಲಿ ಇರುವ ಅವಶ್ಯಕತೆಯೇ ಇರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಮುಂದುವರಿದು, ಈಗ ತೆಗೆದುಕೊಳ್ಳಬಹುದಾದ ಅತ್ಯಂತ ಸೂಕ್ತ ನಿರ್ಣಯವೆಂದರೆ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 60 ಕಿಲೋಮೀಟರ್‌ಗಳಿಗೆ ತಗ್ಗಿಸುವುದು ಮತ್ತು ಎರಡು ರೈಲುಗಳು ಒಂದಕ್ಕೊಂದು ಸನಿಹದಲ್ಲಿದ್ದರೆ, ಅವುಗಳ ವೇಗವನ್ನು 20 ಕಿಲೋಮೀಟರ್‌ಗಳಿಗೆ ಇಳಿಸುವುದು.
ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವೇಳೆ ಸಂಭವಿಸಿರುವ ಅವಘಡ:
ಭಾನುವಾರ, ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಈ ಅವಘಡ ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವೇಳೆ ನಡೆದ ಬದಲಾವಣೆಯ ಕಾರಣದಿಂದ ಸಂಭವಿಸಿದೆ ಎಂದಿದ್ದಾರೆ. ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಎನ್ನುವುದು ಒಂದು ಸಂಕೀರ್ಣವಾದ ಸಿಗ್ನಲ್ ವ್ಯವಸ್ಥೆಯಾಗಿದ್ದು, ಇದನ್ನು ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸಿ, ಅವುಗಳನ್ನು ಸರಿಯಾದ ಹಳಿಯಲ್ಲಿ ಸಂಚರಿಸುವಂತೆ ಮಾಡಲು ರೂಪಿಸಲಾಗಿದೆ.
ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ಸಂಸ್ಥೆಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದ ಉಪನ್ಯಾಸಕರಾಗಿರುವ ದೆಬೋಲಿನಾ ಕುಂಡು ಅವರು ಭಾರತ ಸರ್ಕಾರ ರೈಲ್ವೇ ಓಡಾಟದ ಮೇಲೆ ಕಣ್ಣಿಡಲು ಒಂದು ಸ್ವಯಂಚಾಲಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಹಳಿಗಳ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ- ಪೈಲಟ್ ಸೀಟಿನಡಿ ಕೇಪ್ ಕೋಬ್ರಾ ಹಾವು?! ಹೈಟೆಕ್ ಸ್ಪರ್ಶ ಪಡೆಯುತ್ತಿದೆ ಕಾಕ್‌ಪಿಟ್ ಆಸನ
ಕವಚ್- ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆ:
2022ರಲ್ಲಿ ಭಾರತೀಯ ರೈಲ್ವೇ ಕವಚ್ ಎಂಬ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿತು. ಇದನ್ನು ಚಾಲಕರು ಸಿಗ್ನಲ್ ಅನ್ನು ತಪ್ಪಿಸಿಕೊಂಡರೆ ನಡೆಯಬಹುದಾದ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಅಭಿವೃದ್ಧಿ ಪಡಿಸಲಾಗಿದೆ. ಒಂದು ವೇಳೆ ವಿರುದ್ಧ ದಿಕ್ಕಿನಿಂದ ಯಾವುದಾದರೂ ರೈಲು ಆಗಮಿಸುತ್ತಿದ್ದರೆ, ಕವಚ್ ಅವುಗಳನ್ನು ತಾನೇ ನಿಲುಗಡೆಗೆ ತರಬಲ್ಲದು. ಆದರೆ ಕವಚ್ ವ್ಯವಸ್ಥೆಯ ಯಶಸ್ವಿ ಪ್ರಾಯೋಗಿಕ ಪರೀಕ್ಷೆಗಳ ಬಳಿಕ ಇದನ್ನು ಕೇವಲ 1,445 ಕಿಲೋಮೀಟರ್ ವ್ಯಾಪ್ತಿಯ ಹಳಿಗಳಿಗೆ ಮಾತ್ರವೇ ಅಳವಡಿಸಲಾಗಿದೆ. ಇನ್ನೂ ಬಹುಪಾಲು ಹಳಿಗಳಿಗೆ ಇದನ್ನು ಅಳವಡಿಸುವ ಕೆಲಸ ಇನ್ನೂ ನಡೆಯಬೇಕಿದೆ.
ತ್ರಿವೇದಿಯವರು ಭಾರತೀಯ ರೈಲ್ವೆಯಲ್ಲಿ ಲೋಕೋ ಪೈಲಟ್, ಸಿಗ್ನಲಿಂಗ್ ಸಿಬ್ಬಂದಿ ಸೇರಿದಂತೆ ಅಗತ್ಯ ಸಿಬ್ಬಂದಿಗಳ ಕೊರತೆಯಿದ್ದು, ಪ್ರಸ್ತುತ ಇರುವ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಮತ್ತು ಕೌಶಲಗಳನ್ನು ಒದಗಿಸುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.
ಗರ್ಗ್ ಅವರು ರೈಲ್ವೇ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದನ್ನು ಆಗ್ರಹಿಸಿ, ನಿಯಮಿತವಾಗಿ ಹಳಿಗಳ ಪರಿಶೀಲನೆ ನಡೆಸಬೇಕೆಂದು ಹೇಳಿದ್ದಾರೆ.
2021ರ ವರದಿಯಲ್ಲಿ, ರೈಲು ಹಳಿ ತಪ್ಪಲು ಹೊಸ ಚಾಲಕರ ಕೊರತೆಯ ಪರಿಣಾಮವಾಗಿ, ಇರುವ ರೈಲು ಚಾಲಕರು ಅತಿ ದೀರ್ಘಕಾಲ ವಿಶ್ರಾಂತಿ ರಹಿತರಾಗಿ ಕೆಲಸ ನಡೆಸುವುದೂ ಸಹ ಕಾರಣವಾಗಿರಬಹುದು ಎನ್ನಲಾಗಿದೆ.
ಸರ್ಕಾರ ಈಗಾಗಲೇ ಅಭಿವೃದ್ಧಿಗಾಗಿ ಸಾಕಷ್ಟು ಹಣ ಮೀಸಲಿಟ್ಟಿರುವುದರಿಂದ, ಪರಿಮಿತ ಸಂಪನ್ಮೂಲ ಹೊಂದಿದ್ದೇವೆ ಎಂಬ ಧೋರಣೆಯಿಂದ ಭಾರತ ಮುಂದೆ ಸಾಗಬೇಕು ಎಂದು ಗರ್ಗ್ ಅಭಿಪ್ರಾಯ ಪಟ್ಟಿದ್ದಾರೆ. 2017-18ರಲ್ಲಿ ರೈಲು ಸುರಕ್ಷತಾ ನಿಧಿಯನ್ನು ಸ್ಥಾಪಿಸಲಾಗಿದ್ದರೂ, ಹಳಿಗಳ ನವೀಕರಣಕ್ಕೆ ಮೀಸಲಿಡಲಾದ ಹಣವನ್ನು ಪೂರ್ಣವಾಗಿ ಬಳಕೆ ಮಾಡಲಾಗಿಲ್ಲ.
ಗರ್ಗ್ ಅವರು ಭಾರತೀಯ ರೈಲ್ವೇ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದಿದ್ದಾರೆ. ಇತ್ತೀಚಿನ ರೈಲ್ವೆ ಆಧುನೀಕರಣ ಮತ್ತು ಹೆಚ್ಚಿನ ಸುರಕ್ಷತಾ ನಿಯಮಗಳ ಪರಿಣಾಮವಾಗಿ, ನಾವು ರೈಲ್ವೇ ವ್ಯವಸ್ಥೆಯ ಕುರಿತು ನಿರ್ಧಾರಕ್ಕೆ ಬರುವ ಮುನ್ನ ಕಾದು ನೋಡುವಂತೆ ಮಾಡಿದೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ