CE-20 Cryogenic Engine : ಇತ್ತೀಚೆಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಸಿಇ-20 ಕ್ರಯೋಜೆನಿಕ್ ಇಂಜಿನ್ನಿನ ಫ್ಲೈಟ್ ಅಕ್ಸೆಪ್ಟೆನ್ಸ್ ಹಾಟ್ ಟೆಸ್ಟ್ ಅನ್ನು ಯಶಸ್ವಿಯಾಗಿ ನೆರವೇರಿಸಿತು. ಈ ಸಿಇ-20 ಇಂಜಿನ್ ಎಲ್‌ವಿಎಂ3 ಚಂದ್ರಯಾನ್-3 ಯೋಜನೆಯ ಉಡಾವಣಾ ವಾಹನದ ಕ್ರಯೋಜೆನಿಕ್ ಅಪ್ಪರ್ ಸ್ಟೇಜ್‌ಗೆ ಶಕ್ತಿ ನೀಡಲಿದೆ. ಈ ಕುರಿತು ಮಾಹಿತಿ ನೀಡಿದ ಇಸ್ರೋ, ಪರೀಕ್ಷೆಯು ಫೆಬ್ರವರಿ 24ರಂದು ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನೆರವೇರಿತು ಎಂದಿದೆ.
ಹಾಟ್ ಟೆಸ್ಟ್ ಅನ್ನು ಮೊದಲೇ ಉದ್ದೇಶಿಸಿದಂತೆ 25 ಸೆಕೆಂಡುಗಳ ಕಾಲ ಹೈ ಆಲ್ಟಿಟ್ಯೂಡ್ ಟೆಸ್ಟ್ ವ್ಯವಸ್ಥೆಯಲ್ಲಿ ನೆರವೇರಿಸಲಾಯಿತು. ಪರೀಕ್ಷೆಯ ಸಂದರ್ಭದಲ್ಲಿ ಎಲ್ಲ ಪ್ರೊಪಲ್ಷನ್ ನಿಯತಾಂಕಗಳು ಸಮಾಧಾನಕರವಾಗಿ ಕಂಡುಬಂದಿದ್ದು, ನಿರೀಕ್ಷಿತ ಫಲಿತಾಂಶಕ್ಕೆ ಹತ್ತಿರವಾಗಿತ್ತು. ಈ ಕ್ರಯೋಜೆನಿಕ್ ಇಂಜಿನ್ ಅನ್ನು ಪ್ರೊಪೆಲ್ಲೆಂಟ್ ಟ್ಯಾಂಕ್‌ಗಳು, ಸ್ಟೇಜ್ ಸ್ಟ್ರಕ್ಚರ್‌ಗಳು ಹಾಗೂ ಸಂಬಂಧಿತ ಫ್ಲಯಿಡ್ ಲೈನ್‌ಗಳ ಜೊತೆ ಮತ್ತಷ್ಟು ಸಂಯೋಜಿಸಿ, ಆ ಮೂಲಕ ಕ್ರಯೋಜೆನಿಕ್ ಹಂತದ ಸಂಪೂರ್ಣ ಹಾರಾಟದ ಕುರಿತು ತಿಳಿಯಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಮೂರು ಪ್ರಮುಖ ಮಾಡ್ಯುಲ್‌ಗಳು : ಸಿಇ-20 ಕ್ರಯೋಜೆನಿಕ್ ಇಂಜಿನ್ನಿನ ಹಾರಾಟ ಅನುಮತಿಯ ಪರೀಕ್ಷೆಯನ್ನು ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಚಂದ್ರಯಾನ್-3ರ ಲ್ಯಾಂಡರ್‌ನ ಪ್ರಮುಖ ಇಎಂಐ-ಇಎಂಸಿ (ಇಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್ಫರೆನ್ಸ್ / ಇಲೆಕ್ಟ್ರೋಮ್ಯಾಗ್ನೆಟಿಕ್ ಕಂಪ್ಯಾಟಬಿಲಿಟಿ) ಪರೀಕ್ಷೆ ನಡೆಸಿದ ಒಂದು ದಿನದ ಬಳಿಕ ನಡೆಸಲಾಯಿತು.
ಚಂದ್ರಯಾನ್-3 ಅಂತರಗ್ರಹ ಯೋಜನೆಯು ಮೂರು ಪ್ರಮುಖ ಘಟಕಗಳನ್ನು ಹೊಂದಿದೆ. ಅವುಗಳನ್ನು ಪ್ರೊಪಲ್ಷನ್ ಮಾಡ್ಯುಲ್, ಲ್ಯಾಂಡರ್ ಮಾಡ್ಯುಲ್ ಹಾಗೂ ರೋವರ್ ಎಂದು ಗುರುತಿಸಲಾಗುತ್ತದೆ. ಈ ಯೋಜನೆಯ ಸಂಕೀರ್ಣತೆಯ ಕಾರಣದಿಂದ ಮೂರೂ ಘಟಕಗಳ ಮಧ್ಯ ರೇಡಿಯೋ ಫ್ರೀಕ್ವೆನ್ಸಿ (ಆರ್‌ಎಫ್) ಸಂವಹನವನ್ನು ಏರ್ಪಡಿಸಲಾಗುತ್ತದೆ.
ಇದನ್ನೂ ಓದಿ: 7 ಮತ್ತು 9 ಸೀಟರ್ ಆಯ್ಕೆಗಳೊಂದಿಗೆ ಮಹೀಂದ್ರ ಹೊರ ತರುತ್ತಿದೆ ಮತ್ತೊಂದು ಸ್ಕಾರ್ಪಿಯೋ!
ಚಂದ್ರಯಾನ್-3 ಯೋಜನೆ ಭಾರತದ ಮೂರನೇ ಚಂದ್ರನ ಮೇಲಿನ ಕಾರ್ಯಾಚರಣೆಯಾಗಿದ್ದು, ಇದು ಚಂದ್ರಯಾನ್-2ರಂತೆ ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿದು, ಅಲ್ಲಿ ಚಲಿಸುವ ಸಾಮರ್ಥ್ಯ ಪ್ರದರ್ಶಿಸುತ್ತದೆ. ಈ ಯೋಜನೆ ಈ ವರ್ಷದಲ್ಲಿ ನೆರವೇರಲಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್ಎಂವಿ3) ಮೂಲಕ ಚಂದ್ರಯಾನ್-3 ಉಡಾವಣೆಗೊಳ್ಳಲಿದೆ.
ಇಸ್ರೋ ಈಗಾಗಲೇ ಚಂದ್ರಯಾನ್-3 ಯೋಜನೆಯ, ಎಲ್ಎಂವಿ-3 ಉಡಾವಣಾ ವಾಹನದ ಕ್ರಯೋಜನಿಕ್ ಮೇಲು ಹಂತಗಳಿಗೆ ಶಕ್ತಿ ನೀಡುವ ಸಿಇ-20 ಕ್ರಯೋಜೆನಿಕ್ ಇಂಜಿನ್ನಿನ ಫ್ಲೈಟ್ ಅಕ್ಸೆಪ್ಟೆನ್ಸ್ ಹಾಟ್ ಟೆಸ್ಟ್ ಅನ್ನು ಯಶಸ್ವಿಯಾಗಿ ನೆರವೇರಿಸಿದೆ.
ಏನು ಈ ಚಂದ್ರಯಾನ್ 3? : ಚಂದ್ರಯಾನ-3 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಳ್ಳುತ್ತಿರುವ ಮೂರನೇ ಚಂದ್ರನ ಅಧ್ಯಯನ ಯೋಜನೆಯಾಗಿದೆ. ಇಸ್ರೋ ಈ ಯೋಜನೆಯ ಮೂಲಕ ಚಂದ್ರನ ಮೇಲ್ಮೈಯಲ್ಲಿ ಮೆತ್ತಗೆ ಭೂಸ್ಪರ್ಶ ಮಾಡುವ ಸಾಮರ್ಥ್ಯವನ್ನು ಸಾಬೀತುಪಡಿಸುವ ಉದ್ದೇಶ ಹೊಂದಿದೆ. ಈ ಯೋಜನೆ ಕೇವಲ ರೋವರ್ ಮತ್ತು ಲ್ಯಾಂಡರ್ ಮಾತ್ರವೇ ಹೊಂದಿದ್ದು, ಚಂದ್ರಯಾನ 2ರ ಆರ್ಬಿಟರ್ ಮೂಲಕ ಭೂಮಿಗೆ ಸಂಪರ್ಕ ಸಾಧಿಸಲಿದೆ.
ಈ ಮಹತ್ವಾಕಾಂಕ್ಷಿ ಯೋಜನೆ ಹಲವು ಪ್ರಮುಖ ಸಂರಚನೆ ಹಾಗೂ ಸಂಯೋಜನೆಗಳನ್ನು ಒಳಗೊಂಡಿದೆ. ಅದರೊಡನೆ, ಉಡ್ಡಯನ ವಾಹನದ ಹಲವು ಸಂಪೂರ್ಣ ವಿವರವಾದ ಪರೀಕ್ಷೆಗಳನ್ನು ನಡೆಸುವುದು ಬಾಕಿಯಿದೆ.
ಇದನ್ನೂ ಓದಿ: ಒಂದರ ಹಿಂದೆ ಒಂದರಂತೆ ರೋಡಿಗಿಳಿಯಲಿವೆ ಅಗ್ಗದ ಕಾರುಗಳು ! Maruti-Tata-Hyundai ಬಿಡುಗಡೆ ಮಾಡಲಿವೆ ಆರು ಎಸ್ ಯುವಿ
ಚಂದ್ರಯಾನ್-3ರ ಹಿನ್ನೆಲೆ : ಚಂದ್ರಯಾನ್ 2 ಯೋಜನೆಯಲ್ಲಿ ಇಸ್ರೋ ಚಂದ್ರನ ಮೇಲ್ಮೈಗೆ ಉಡಾವಣಾ ವಾಹನದ ಮೂಲಕ ಆರ್ಬಿಟರ್, ರೋವರ್ ಹಾಗೂ ಲ್ಯಾಂಡರ್ ಗಳನ್ನು ಕಳುಹಿಸುವ ಉದ್ದೇಶ ಹೊಂದಿತ್ತು. ಇಸ್ರೋ ಸಂಸ್ಥೆ ಅತ್ಯಂತ ಸಮರ್ಥ ಜಿಯೋಸಿಂಕ್ರೊನಸ್ ಉಡಾವಣಾ ವಾಹನಗಳಲ್ಲಿ ಒಂದಾದ ಜಿಎಸ್ಎಲ್‌ವಿ-ಎಂಕೆ 3ರ ಮೂಲಕ ಉಡಾವಣೆಗೊಳಿಸಿತು.
ಆದರೆ ಈ ಯೋಜನೆಯಲ್ಲಿ ಲ್ಯಾಂಡರ್ ವಿಕ್ರಮ್ ಮೃದು ಭೂಸ್ಪರ್ಶ ನಡೆಸುವಲ್ಲಿ ವೈಫಲ್ಯ ಅನುಭವಿಸಿತು. ಅದರ ಪರಿಣಾಮವಾಗಿ, ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಓಡಾಡುವುದು ಅಸಾಧ್ಯವಾಯಿತು. ಇದರ ಪರಿಣಾಮವಾಗಿ, ಚಂದ್ರನ ಧ್ರುವಗಳ ಅಧ್ಯಯನಕ್ಕೆ ಅಗತ್ಯವಿರುವ ಭಾರತದ ಭೂಸ್ಪರ್ಶ ಸಾಮರ್ಥ್ಯವನ್ನು ಸಾಬೀತುಪಡಿಸಲು ಇಸ್ರೋ ಇನ್ನೊಂದು ಯೋಜನೆ ಕೈಗೊಳ್ಳಲು ಮುಂದಾಯಿತು.
ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವ ಈ ಯೋಜನೆಯಲ್ಲಿ ಜಪಾನ್ ಸಹ ಪಾಲುದಾರನಾಗಿದ್ದು, 2024ರಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಯೋಜನೆಯಲ್ಲಿ ಭಾರತ ಲ್ಯಾಂಡರ್ ಒದಗಿಸಿದರೆ, ಜಪಾನ್ ರೋವರ್ ಹಾಗೂ ಲಾಂಚರ್ ಒದಗಿಸಲಿದೆ.
ಚಂದ್ರಯಾನ್ - 3 ಬಾಹ್ಯಾಕಾಶ ನೌಕೆಯ ವೈಶಿಷ್ಟ್ಯಗಳು
ಚಂದ್ರಯಾನ್ 3 ನೌಕೆಯಲ್ಲಿ ಕೇವಲ ರೋವರ್ ಮತ್ತು ಲ್ಯಾಂಡರ್ ಮಾತ್ರವೇ ಇರಲಿದ್ದು, ಚಂದ್ರಯಾನ್ 2ರಂತೆ ಆರ್ಬಿಟರ್ ಇರುವುದಿಲ್ಲ.
ಭಾರತ ಚಂದ್ರನ ಮೇಲ್ಮೈಯನ್ನು, ಅದರಲ್ಲೂ ಬಿಲಿಯನ್‌ಗಟ್ಟಲೆ ವರ್ಷಗಳ ಕಾಲ ಸೂರ್ಯನ ಬೆಳಕನ್ನೇ ಪಡೆಯದ ಭಾಗಗಳನ್ನು ಅಧ್ಯಯನ ನಡೆಸುವ ಉದ್ದೇಶ ಹೊಂದಿದೆ. ವಿಜ್ಞಾನಿಗಳು ಹಾಗೂ ಖಗೋಳಶಾಸ್ತ್ರಜ್ಞರು ಚಂದ್ರನ ಮೇಲ್ಮೈಯ ಈ ಕಗ್ಗತ್ತಲ ಪ್ರದೇಶಗಳಲ್ಲಿ ಮಂಜುಗಡ್ಡೆ ಹಾಗೂ ಅಪಾರ ಪ್ರಮಾಣದ ಖನಿಜಗಳು ಇರುವ ಸಾಧ್ಯತೆಗಳಿವೆ ಎನ್ನುತ್ತಾರೆ.
ಈ ಅಧ್ಯಯನ ಕೇವಲ ಚಂದ್ರನ ಮೇಲ್ಮೈಗೆ ಮಾತ್ರವೇ ಸೀಮಿತವಾಗಿಲ್ಲ. ಅದರೊಡನೆ, ಚಂದ್ರನ ಉಪ-ಮೇಲ್ಮೈ, ಮತ್ತಿತರ ಅಂಶಗಳನ್ನೂ ಅಧ್ಯಯನ ನಡೆಸುತ್ತದೆ. ಈ ಯೋಜನೆಯ ರೋವರ್, ಚಂದ್ರಯಾನ್ 2 ಯೋಜನೆ ಒಯ್ದಿದ್ದ ಆರ್ಬಿಟರ್ ಮೂಲಕ ಭೂಮಿಗೆ ಸಂಪರ್ಕ ಸಾಧಿಸಲಿದೆ. ಇದು ಚಂದ್ರನ ಮೇಲ್ಮೈಯಿಂದ 100 ಕಿಲೋಮೀಟರ್ ದೂರದ ಕಕ್ಷೆಯಿಂದ ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆದು, ಅಧ್ಯಯನ ನಡೆಸಲಿದೆ.
ಚಂದ್ರಯಾನ್ 3 ಬಾಹ್ಯಾಕಾಶ ನೌಕೆಯ ವಿನ್ಯಾಸ : ಇಸ್ರೋದ ಚಂದ್ರಯಾನ್ 3ರ ಲ್ಯಾಂಡರ್‌ಗೆ 4 ಥ್ರಾಟಲ್ ಮಾಡಬಹುದಾದ ಇಂಜಿನ್‌ಗಳನ್ನು ಅಳವಡಿಸಲಾಗಿದೆ. ಅದರೊಡನೆ, ಇದರಲ್ಲಿ ಒಂದು ಲೇಸರ್ ಡಾಪ್ಲರ್ ವೆಲೋಸಿಮೀಟರ್ (ಎಲ್‌ಡಿವಿ) ಅಳವಡಿಸಲಾಗಿದೆ.
ಇದನ್ನೂ ಓದಿ: Smartphone Trick: ನೆಟ್‌ವರ್ಕ್ ಇಲ್ಲದಿದ್ದರೂ CALL ಮಾಡಬಹುದು.. ಈ ಟ್ರಿಕ್ ತಿಳಿದರೆ ಶಾಕ್ ಆಗ್ತೀರಾ!
ಚಂದ್ರನ ಮೇಲೆ ಸಂಶೋಧನೆ ನಡೆಸುವುದರ ಮಹತ್ವ
ಚಂದ್ರ ಭೂಮಿಗೆ ಅತ್ಯಂತ ಹತ್ತಿರದಲ್ಲಿರುವ ಬಾಹ್ಯಾಕಾಶ ವಸ್ತುವಾಗಿದ್ದು, ಮಹತ್ವದ ಬಾಹ್ಯಾಕಾಶ ಯೋಜನೆಗಳನ್ನು ಪರಿಶೀಲಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಭೂಪ್ರದೇಶಗಳ ಕುರಿತು ಅಧ್ಯಯನ ನಡೆಸಲು, ಅರ್ಥೈಸಿಕೊಳ್ಳಲು ಚಂದ್ರ ಒಂದು ಉತ್ತಮ ಕಾಸ್ಮಿಕ್ ರಚನೆಯಾಗಿದೆ. ಇಂತಹ ಯೋಜನೆಗಳು ತಾಂತ್ರಿಕ ಅಭಿವೃದ್ಧಿಗೆ ಉತ್ತೇಜನ ನೀಡಿ, ಭವಿಷ್ಯದ ವಿಜ್ಞಾನಿಗಳಿಗೆ ಅಂತಾರಾಷ್ಟ್ರೀಯ ಸಹಕಾರ ಹೊಂದುವುದನ್ನು ಬೆಂಬಲಿಸುತ್ತವೆ. ಅದರೊಡನೆ, ಸೌರಮಂಡಲದ ಇತಿಹಾಸ ಹಾಗೂ ಪ್ರಾಚೀನ ಭೂಮಿಯ ಮಧ್ಯ ಸಂವಹನ ಏರ್ಪಡಿಸುತ್ತವೆ.
ಚಂದ್ರಯಾನ್ 3 ಯಾಕೆ ಚಂದ್ರನ ದಕ್ಷಿಣ ಧ್ರುವವನ್ನೇ ಗುರಿಯಾಗಿಸಿದೆ?
ಚಂದ್ರಯಾನ್ 3ರಲ್ಲಿ ಚಂದ್ರನ ದಕ್ಷಿಣ ಧ್ರುವವನ್ನೇ ಗುರಿಯಾಗಿಸಿ ಅಧ್ಯಯನ ನಡೆಸಲು ಒಂದು ಪ್ರಮುಖ ಕಾರಣವೆಂದರೆ, ಈ ಪ್ರದೇಶ ಚಂದ್ರನ ಉತ್ತರ ಧ್ರುವಕ್ಕೆ ಹೋಲಿಸಿದರೆ ಹೆಚ್ಚು ನೆರಳಿನ ಭಾಗಗಳನ್ನು ಹೊಂದಿದೆ. ವಿಜ್ಞಾನಿಗಳು ಚಂದ್ರನ ಈ ಭಾಗ ಶಾಶ್ವತ ನೀರಿನ ಮೂಲಗಳನ್ನು ಹೊಂದಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪೂರಕವಾಗಿ, ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ ಕುಳಿಗಳ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅವರು ಇಲ್ಲಿನ ತಂಪು ಪ್ರದೇಶಗಳಲ್ಲಿ ಚಂದ್ರನ ಮೇಲ್ಮೈಯ ಪ್ರಾಚೀನ ಪಳೆಯುಳಿಕೆ ದಾಖಲೆಗಳು ಇರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.