ಸ್ಯೂಡೋ ಸ್ಯಾಟಲೈಟ್‌ಗಳು (ಹುಸಿ ಉಪಗ್ರಹ) ಅಥವಾ ಹೈ ಆಲ್ಟಿಟ್ಯೂಡ್ ಪ್ಲಾಟ್‌ಫಾರಂ ಸ್ಟೇಷನ್ಸ್ (ಎಚ್ಎಪಿಎಸ್) ಎಂದೂ ಕರೆಯಲಾಗುವ ಇವು ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ಗಳಾಗಿವೆ. ಇವುಗಳು ವಾತಾವರಣದಲ್ಲಿ ಅತ್ಯಂತ ಎತ್ತರದಲ್ಲಿ, ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 17-22 ಕಿಲೋಮೀಟರ್ ಎತ್ತರದಲ್ಲಿರುವ, ಭೂಮಿಯ ಎರಡನೇ ಪದರವಾಗಿರುವ ಸ್ಟ್ರಾಟೋಸ್ಫಿಯರ್‌ನಲ್ಲಿ ಕಾರ್ಯಾಚರಿಸುತ್ತವೆ. ಈ ಉಪಕರಣಗಳನ್ನು ಟೆಲಿಕಮ್ಯುನಿಕೇಶನ್, ವಿಚಕ್ಷಣೆ, ವಾತಾವರಣ ಸಂಶೋಧನೆ ಹಾಗೂ ವಾತಾವರಣದ ವೀಕ್ಷಣೆಗೆ ಬಳಸಲಾಗುತ್ತದೆ.
ಒಂದೇ ಸ್ಥಾನದಲ್ಲಿ ಸ್ಥಿರವಾಗಿದ್ದು, ದೀರ್ಘಕಾಲದ ತನಕ ಭೂಮಿಯ ಮೇಲಿನ ನಿರ್ದಿಷ್ಟ ಪ್ರದೇಶವನ್ನು ವೀಕ್ಷಿಸುವ ಸಾಂಪ್ರದಾಯಿಕ ಉಪಗ್ರಹಗಳಂತಲ್ಲದೆ, ಈ ಸ್ಯೂಡೋ ಉಪಗ್ರಹಗಳು ಅತ್ಯಂತ ಎತ್ತರದಲ್ಲಿ, ದೀರ್ಘಕಾಲದ ತನಕ ಹಾರಾಡುವ ಉದ್ದೇಶದಿಂದ ನಿರ್ಮಿಸಿರುವ ಏರ್‌ಕ್ರಾಫ್ಟ್ ಗಳಾಗಿವೆ.
ಸಾಂಪ್ರದಾಯಿಕ ಉಪಗ್ರಹಗಳಿಗೆ ಹೋಲಿಸಿದರೆ, ಸ್ಯೂಡೋ ಉಪಗ್ರಹಗಳ ಮೇಲುಗೈ ಎಂದರೆ ಅವುಗಳಿಗೆ ತಗಲುವ ವೆಚ್ಚ. ಸಾಂಪ್ರದಾಯಿಕ ಉಪಗ್ರಹಗಳ ಉಡಾವಣೆ, ನಿರ್ವಹಣೆ ವೆಚ್ಚದಾಯಕವಾಗಿದ್ದು, ಅವುಗಳ ಆಯಸ್ಸು ಅವುಗಳು ಹೊತ್ತೊಯ್ಯುವ ಇಂಧನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇನ್ನೊಂದೆಡೆ ಸ್ಯೂಡೋ ಉಪಗ್ರಹಗಳ ಸುಲಭವಾಗಿ ಉಡಾವಣೆಗೊಳಿಸಿ, ಮರಳಿ ಭೂಮಿಗೆ ತರಬಹುದು. ಅವುಗಳ ಆಯುಷ್ಯ ಅವುಗಳ ಬಿಡಿಭಾಗಗಳ ಬಾಳಿಕೆಯ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ- ಅಮೆರಿಕಾ-ಚೀನಾಗಳ ನಡುವೆ ಸೆಮಿಕಂಡಕ್ಟರ್ ಸಮರ
ಸ್ಯೂಡೋ ಉಪಗ್ರಹಗಳ ಇನ್ನೊಂದು ಮೇಲುಗೈ ಎಂದರೆ ಅವುಗಳನ್ನು ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವಿಕೆ. ಯಾಕೆಂದರೆ, ಇವುಗಳು ಒಂದು ನಿರ್ದಿಷ್ಟ ಕಕ್ಷೆಗೆ ಸೀಮಿತವಾಗಿರುವುದಿಲ್ಲ. ಆದ್ದರಿಂದ ಅವುಗಳನ್ನು ಬೇರೆ ಪ್ರದೇಶಕ್ಕೆ ಕಳುಹಿಸಿ, ಭೂಮಿಯ ಬೇರೆ ಭಾಗವನ್ನು ವೀಕ್ಷಿಸುವಂತೆ ಮಾಡಬಹುದು. ಈ ಮೂಲಕ ಅಗತ್ಯವಿರುವ ಭೂಭಾಗವನ್ನು ವಿಚಕ್ಷಣೆಗೆ ಒಳಪಡಿಸಬಹುದು.
ಸ್ಯೂಡೋ ಉಪಗ್ರಹಗಳನ್ನು ಸೋಲಾರ್ ಫಲಕಗಳು, ಹಾಗೂ ಇಂಧನ ಸೆಲ್‌ಗಳ ಮೂಲಕ ಕಾರ್ಯಾಚರಿಸುವಂತೆ ಮಾಡಬಹುದು. ಸೌರಶಕ್ತಿ ಆಧರಿತ ಸ್ಯೂಡೋ ಉಪಗ್ರಹಗಳನ್ನು ಮತ್ತೆ ಮತ್ತೆ ಇಂಧನ ಮರುಪೂರಣ ನಡೆಸುವ ಅಗತ್ಯವಿಲ್ಲದ್ದರಿಂದ ಅವುಗಳು ಅತಿ ದೀರ್ಘ ಕಾಲ ಕಾರ್ಯಾಚರಿಸಬಲ್ಲವು. ಆದ್ದರಿಂದ ಅವುಗಳು ಹೆಚ್ಚು ಆಕರ್ಷಕವಾಗಿವೆ. ಆದರೆ ಅವುಗಳ ಕಾರ್ಯಾಚರಣೆ ಅವುಗಳಿಗೆ ಲಭಿಸುವ ಸೂರ್ಯನ ಬೆಳಕಿನ ಮೇಲೆ ಅವಲಂಬಿತವಾಗಿರುತ್ತದೆ. ದೀರ್ಘಕಾಲದ ತನಕ ಕತ್ತಲಿರುವ ಪ್ರದೇಶಗಳಲ್ಲಿ ಸ್ಯೂಡೋ ಉಪಗ್ರಹಗಳು ಕಾರ್ಯಾಚರಿಸುವುದು ಕಷ್ಟಕರವಾಗುತ್ತದೆ.
ಸ್ಯೂಡೋ ಉಪಗ್ರಹಗಳ ಬಳಕೆ ಇನ್ನೂ ಹೊಸದಾಗಿದೆ. ಆದರೆ ಹಲವು ಕ್ಷೇತ್ರಗಳಲ್ಲಿನ ಬಳಕೆಯಲ್ಲಿ ಅವು ಅಪಾರ ಭರವಸೆ ತೋರಿವೆ. ಟೆಲಿಕಮ್ಯುನಿಕೇಶನ್ ಕ್ಷೇತ್ರದಲ್ಲಿ ಸ್ಯೂಡೋ ಉಪಗ್ರಹಗಳು ಅತ್ಯಂತ ಆಶಾಭಾವನೆ ಮೂಡಿಸಿವೆ. ಅವುಗಳನ್ನು ತಂತ್ರಜ್ಞಾನದಿಂದ ದೂರಾಗಿರುವ ಪ್ರದೇಶಗಳಲ್ಲಿ ಅತ್ಯಂತ ವೇಗದ ಅಂತರ್ಜಾಲ ಸಂಪರ್ಕಕ್ಕಾಗಿ ಬಳಸಿಕೊಳ್ಳಬಹುದು. ಅದರೊಡನೆ ಕ್ರೀಡಾ ಚಟುವಟಿಕೆಗಳು, ಸಂಗೀತ ಕಚೇರಿಗಳು, ಹಾಗೂ ಇತರ ದೊಡ್ಡ ಸಮಾರಂಭಗಳ ವೀಕ್ಷಣೆಗೆ ಬಳಸಬಹುದು.
ಸ್ಯೂಡೋ ಉಪಗ್ರಹಗಳನ್ನು ಬಳಸಿಕೊಳ್ಳುವ ಇನ್ನೊಂದು ಪ್ರಮುಖ ಕ್ಷೇತ್ರವೆಂದರೆ ವಿಚಕ್ಷಣೆ. ಸ್ಯೂಡೋ ಉಪಗ್ರಹಗಳಲ್ಲಿ ಅತ್ಯುನ್ನತ ಗುಣಮಟ್ಟದ ಕ್ಯಾಮರಾಗಳು ಮತ್ತು ಸೆನ್ಸರ್‌ಗಳನ್ನು ಅಳವಡಿಸುವ ಮೂಲಕ ಅವುಗಳು ದೀರ್ಘಕಾಲ ಭೂಮಿ ಅಥವಾ ಸಮುದ್ರ ಪ್ರದೇಶಗಳನ್ನು ಗಮನಿಸುವಂತೆ ಮಾಡಬಹುದು. ಈ ಕಾರಣಕ್ಕೆ ಇವುಗಳನ್ನು ಗಡಿ ಗಸ್ತು, ವನ್ಯಜೀವಿಗಳ ಜನಸಂಖ್ಯೆಯ ಅಂದಾಜು, ಹಾಗೂ ಅಕ್ರಮ ಮೀನುಗಾರಿಕೆಯಂತಹ ಚಟುವಟಿಕೆಗಳನ್ನು ಗಮನಿಸಲು ಬಳಸಿಕೊಳ್ಳಬಹುದು.
ಇದನ್ನೂ ಓದಿ- WhatsApp New Scam: ವಾಟ್ಸಾಪ್ ನಲ್ಲಿ ಈ ಮೊಬೈಲ್ ನಂಬರ್‌ಗಳಿಂದ ಕರೆ ಬಂದರೆ ಹುಷಾರ್!
ಅದರೊಡನೆ ಸ್ಯೂಡೋ ಉಪಗ್ರಹಗಳನ್ನು ಪರಿಸರ ವೀಕ್ಷಣೆಗೆ ಬಳಸಬಹುದು. ಅವುಗಳನ್ನು ಗಾಳಿ ಮತ್ತು ನೀರಿನ ಗುಣಮಟ್ಟವನ್ನು ತಿಳಿಯಲು, ಬೆಳೆ ಮತ್ತು ಇತರ ಸಸ್ಯಗಳ ಆರೋಗ್ಯವನ್ನು ತಿಳಿಯಲು ಉಪಯೋಗಿಸಬಹುದು. ಈ ಮಾಹಿತಿಗಳನ್ನು ಕೃಷಿ ಕ್ಷೇತ್ರದಿಂದ ಸಾರ್ವಜನಿಕ ಆರೋಗ್ಯದ ತನಕ ವಿವಿಧ ಕಾರಣಗಳಿಗೆ ಬಳಸಿಕೊಳ್ಳಬಹುದು.
ಅವುಗಳ ಹಲವಾರು ಪ್ರಯೋಜನಗಳ ಜೊತೆಗೆ ಸ್ಯೂಡೋ ಉಪಗ್ರಹಗಳು ಒಂದಷ್ಟು ಅನನುಕೂಲತೆಗಳನ್ನೂ ಹೊಂದಿವೆ. ಅವುಗಳಲ್ಲಿ ಅತ್ಯಂತ ಮುಖ್ಯ ಸವಾಲೆಂದರೆ ಸ್ಯೂಡೋ ಉಪಗ್ರಹಗಳ ನಿಯಂತ್ರಣ. ಇವುಗಳು ವಾಣಿಜ್ಯಿಕ ವಿಮಾನಗಳು ಹಾರಾಟ ನಡೆಸುವ ಎತ್ತರದಲ್ಲಿ ಕಾರ್ಯಾಚರಿಸುವುದರಿಂದ, ವಿಮಾನಯಾನ ಪ್ರಾಧಿಕಾರಗಳು ಅವುಗಳನ್ನು ನಿಯಂತ್ರಿಸಬೇಕಾಗುತ್ತದೆ. ಇದೊಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ನೂತನ ನಿಯಂತ್ರಣಗಳು ಮತ್ತು ಷರತ್ತುಗಳನ್ನು ಜಾರಿಗೆ ತರುವ ಅಗತ್ಯ ಎದುರಾಗಬಹುದು.
ಇನ್ನೊಂದು ಸವಾಲೆಂದರೆ, ತಾಂತ್ರಿಕತೆಯದ್ದು. ಸ್ಯೂಡೋ ಉಪಗ್ರಹಗಳು ಇನ್ನೂ ಹೊಸ ಮಾದರಿಯ ತಂತ್ರಜ್ಞಾನವಾಗಿವೆ. ಆದ್ದರಿಂದ ಅವುಗಳು ಹೇಗೆ ಕಾರ್ಯಾಚರಿಸುತ್ತವೆ, ಅವುಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂದು ಇನ್ನಷ್ಟು ತಿಳಿದುಕೊಳ್ಳುವ ಅಗತ್ಯವಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಹಾಗೂ ನ್ಯೂಸ್ಪೇಣ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಎನ್ಆರ್‌ಟಿ) ಎಂಬ ಸ್ಟಾರ್ಟಪ್ ಸಂಸ್ಥೆಗಳು ಮಾನವರಹಿತ ಸೌರಶಕ್ತಿ ಆಧಾರಿತ, ಬೃಹತ್ ಗಾತ್ರದ, ಹಲವು ತಿಂಗಳ ಕಾಲ ಸ್ಟ್ರಾಟೋಸ್ಫಿಯರ್‌ನಲ್ಲೇ ಉಳಿಯಬಲ್ಲ ಏರ್‌ಕ್ರಾಫ್ಟ್ ಅಭಿವೃದ್ಧಿ ಪಡಿಸಲು ಸಹಭಾಗಿತ್ವ ಹೊಂದಿವೆ.
ಒಟ್ಟಾರೆಯಾಗಿ, ಸ್ಯೂಡೋ ಉಪಗ್ರಹಗಳು ಒಂದು ಹೊಸದಾದ ತಂತ್ರಜ್ಞಾನವಾಗಿದ್ದು, ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ತಂತ್ರಜ್ಞಾನ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದುತ್ತಿರುವಂತೆ, ನಾವು ಮುಂದಿನ ದಿನಗಳಲ್ಲಿ ಸ್ಯೂಡೋ ಉಪಗ್ರಹಗಳ ಇನ್ನಷ್ಟು ಉಪಯೋಗ, ಪ್ರಯೋಜನಗಳನ್ನು ಮನಗಾಣಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.