ಇಸ್ರೇಲ್ ಪ್ರಧಾನಿಯಾಗಿ ಮತ್ತೆ ಬೆಂಜಮಿನ್ ನೆತನ್ಯಾಹು ಆಯ್ಕೆ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನೆತನ್ಯಾಹುಗೆ ವ್ಯವಸ್ಥಿತವಾಗಿ ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆಸುವಂತೆ ಎಲ್ಲಾ ಇಲಾಖೆಗಳಿಗೂ ನಿರ್ಗಮಿತ ಪ್ರಧಾನಿ ಯೇರ್ ಲ್ಯಾಪಿಡ್‍ ಸೂಚಿಸಿದ್ದಾರೆ.

Written by - Puttaraj K Alur | Last Updated : Nov 4, 2022, 01:00 PM IST
  • ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಬೆಂಜಮಿನ್ ನೆತನ್ಯಾಹು ಮತ್ತೆ ಆಯ್ಕೆಯಾಗಿದ್ದಾರೆ
  • ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎದುರು ಸೋಲೊಪ್ಪಿಕೊಂಡ ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್
  • ಬೆಂಜಮಿನ್ ನೆತನ್ಯಾಹು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ
ಇಸ್ರೇಲ್ ಪ್ರಧಾನಿಯಾಗಿ ಮತ್ತೆ ಬೆಂಜಮಿನ್ ನೆತನ್ಯಾಹು ಆಯ್ಕೆ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ title=
ಇಸ್ರೇಲ್ ಪ್ರಧಾನಿಯಾಗಿ ನೆತನ್ಯಾಹು ಆಯ್ಕೆ

ಇಸ್ರೇಲ್‌: ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಬೆಂಜಮಿನ್ ನೆತನ್ಯಾಹು ಮತ್ತೆ ಆಯ್ಕೆಯಾಗಿದ್ದಾರೆ. ಗುರುವಾರ ಬಹುತೇಕ ಎಲ್ಲಾ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್ ಅವರು ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎದುರು ಸೋಲು ಒಪ್ಪಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಡೆದಿದ್ದಇಸ್ರೇಲ್‌ ಸಾರ್ವತ್ರಿಕ ಚುನಾವಣೆಯಲ್ಲಿ ಯೇರ್ ಲ್ಯಾಪಿಡ್‍ರನ್ನು ನೆತನ್ಯಾಹು ಸೋಲಿಸುವ ಮೂಲಕ ಮತ್ತೆ ಇಸ್ರೇಲ್ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ. 120 ಸದಸ್ಯ ಬಲದ ಇಸ್ರೇಲ್‌ ಸಂಸತ್ತಿನಲ್ಲಿ ನೆತನ್ಯಾಹು ನೇತೃತ್ವದ ಬಲಪಂಥೀಯ ಬಣ 64 ಸ್ಥಾನಗಳನ್ನು ಬಾಚಿಕೊಂಡು ಭರ್ಜರಿ ಗೆಲುವು ಸಾಧಿಸಿದೆ. ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆಸುವಂತೆ ಪ್ರಧಾನಿ ಕಾರ್ಯಾಲಯದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿರುವುದಾಗಿ ನೆತನ್ಯಾಹುಗೆ ಲ್ಯಾಪಿಡ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಪ್ರಾಣಪಾಯದಿಂದ ಪಾರು

ಗೆಲುವು ಸಾಧಿಸಿರುವ ನೆತನ್ಯಾಹುಗೆ ಶುಭಾಶಯ ತಿಳಿಸಿರುವ ಲ್ಯಾಪಿಡ್, ‘ಇಸ್ರೇಲ್ ಜನರು ಮತ್ತು ಇಸ್ರೇಲ್ ದೇಶದ ಅಭಿವೃದ್ಧಿಯ ಸಲುವಾಗಿ ನಾನು ನೆತನ್ಯಾಹುರ ಯಶಸ್ಸನ್ನು ಬಯಸುತ್ತೇನೆ’ ಅಂತಾ ಹೇಳಿದ್ದಾರೆ. ಸುಮಾರು 1 ದಶಕಕ್ಕೂ ಹೆಚ್ಚು ಕಾಲ ಇಸ್ರೇಲಿ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರುವ ನೆತನ್ಯಾಹು ಬಲಪಂಥೀಯ ಪಕ್ಷಗಳ ಸಹಾಯದಿಂದ ಅಧಿಕಾರದ ಗದ್ದುಗೆ ಏರಲು ಸಿದ್ಧರಾಗಿದ್ದಾರೆ. ‘ನಾವು ಇಸ್ರೇಲ್ ಜನರಿಂದ ಭಾರೀ ವಿಶ್ವಾಸ ಗಳಿಸಿದ್ದೇವೆ. ನಾವು ಬಹಳ ದೊಡ್ಡ ವಿಜಯದ ಅಂಚಿನಲ್ಲಿದ್ದೇವೆ. ದೇಶದಲ್ಲಿ ಸ್ಥಿರ ಮತ್ತು ರಾಷ್ಟ್ರೀಯ ಸರ್ಕಾರ ರಚಿಸುವುದಾಗಿ’ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.

ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆ ವಿಚಾರಣೆಯಲ್ಲಿದ್ದ ನೆತನ್ಯಾಹು 18 ತಿಂಗಳ ಹಿಂದೆ ಅಧಿಕಾರದಿಂದ ನಿರ್ಗಮಿಸಿದ್ದರು. ನೆತನ್ಯಾಹು ಅವರು ಜೂನ್ 2021ರಲ್ಲಿ ಕೊನೆಗೊಂಡಂತೆ ಇಸ್ರೇಲ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿ ದಾಖಲೆಯ 12 ವರ್ಷಗಳ ಸತತ ಆಳ್ವಿಕೆ ನಡೆಸಿದ್ದರು. ರಾಜಕೀಯ ಬಿಕ್ಕಟ್ಟಿನಿಂದಾಗಿ ಕೇವಲ 4 ವರ್ಷಗಳಲ್ಲಿ ಇಸ್ರೇಲ್‍ನಲ್ಲಿ 5 ಚುನಾವಣೆ ನಡೆಸಬೇಕಾಯಿತು. ‘ದೇಶದ ಜನರಿಗೆ ಬೇರೆ ದಾರಿ ಬೇಕಾಗಿದೆ. ಅವರಿಗೆ ಭದ್ರತೆ ಬೇಕು. ಅವರು ಅಧಿಕಾರವನ್ನು ಬಯಸುತ್ತಾರೆ, ದೌರ್ಬಲ್ಯವಲ್ಲ ... ಅವರು ಹೆಚ್ಚು ದೃಢತೆಯೊಂದಿಗೆ ರಾಜತಾಂತ್ರಿಕ ಬುದ್ಧಿವಂತಿಕೆ ಬಯಸುತ್ತಾರೆ' ಎಂದು ನೆತನ್ಯಾಹು ಹೇಳಿದ್ದಾರೆ.

ಇದನ್ನೂ ಓದಿ: ಇಮ್ರಾನ್ ಮೇಲಿನ ದಾಳಿಯ ನಂತರ ಇಸ್ಲಾಮಾಬಾದ್‌ನಲ್ಲಿ ಲಾಕ್‌ಡೌನ್ 

ನೆತನ್ಯಾಹುಗೆ ಪ್ರಧಾನಿ ಮೋದಿ ಶುಭಾಶಯ

ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಹೀಬ್ರೂ ಭಾಷೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ನಮ್ಮ ಜಂಟಿ ಪ್ರಯತ್ನ ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ‘ಭಾರತ ಮತ್ತು ಇಸ್ರೇಲ್‌ನ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನೀಡಿದ ಪ್ರಮುಖ ಕೊಡುಗೆಗಾಗಿ ನಿರ್ಗಮಿತ ಇಸ್ರೇಲ್‍ ಪ್ರಧಾನಿ ಲ್ಯಾಪಿಡ್ ಅವರಿಗೆ ಇದೇ ವೇಳೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ‘ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ಫಲಪ್ರದ ವಿಚಾರಗಳ ವಿನಿಮಯವನ್ನು ಮುಂದುವರಿಸಲು ನಾನು ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News