ನೇಪಾಳ: ಕಟ್ಟಡವೊಂದರಲ್ಲಿ ಭೀಕರ ಅಗ್ನಿ ಅವಘಡ, 500 ದಶಲಕ್ಷ ಮೌಲ್ಯದ ಆಸ್ತಿ ನಷ್ಟ

ಸ್ಥಳೀಯ ವೇಳೆ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಈ ಘಟನೆ ಸಂಭವಿಸಿದೆ. ಕಟ್ಟಡದಿಂದ ಈವರೆಗೂ ಸುಮಾರು 200 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

Last Updated : Aug 8, 2019, 01:16 PM IST
ನೇಪಾಳ: ಕಟ್ಟಡವೊಂದರಲ್ಲಿ ಭೀಕರ ಅಗ್ನಿ ಅವಘಡ, 500 ದಶಲಕ್ಷ ಮೌಲ್ಯದ ಆಸ್ತಿ ನಷ್ಟ title=
Pic Courtesy: Semanta Dahal/Twitter

ನವದೆಹಲಿ/ಕಠ್ಮಂಡು: ನೇಪಾಳದ ಬಾಲ್ವತಾರ್ ಮೂಲದ ಅಂತರ್ಜಾಲ ಸೇವಾ ಪೂರೈಕೆದಾರ ಸುಬಿಶು ಅವರ ಕಚೇರಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಸುಮಾರು 500 ದಶಲಕ್ಷ ಮೌಲ್ಯದ ಆಸ್ತಿ ಬೆಂಕಿಗೆ ಆಹುತಿಯಾಗಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ 31 ಕೋಟಿ ರೂಪಾಯಿಗಳಿಗಿಂತ ಹೆಚ್ಚು.

ಸ್ಥಳೀಯ ವೇಳೆ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಈ ಘಟನೆ ಸಂಭವಿಸಿದೆ. ಕಟ್ಟಡದಿಂದ ಈವರೆಗೂ ಸುಮಾರು 200 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈ ಕಟ್ಟಡದೊಳಗೆ ಇರಿಸಲಾಗಿರುವ ಬ್ಯಾರೆಲ್ ಪೆಟ್ರೋಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದೇ ಈ ಅವಘಡಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಈ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಕಟ್ಟಡದಲ್ಲಿ 200 ಜನರಿದ್ದರು ಎಂದು ಮೆಟ್ರೋಪಾಲಿಟನ್ ಪೊಲೀಸ್ ಕಚೇರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶ್ಯಾಮ್ ಗಯಾವಲಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

ಸದ್ಯ ಕಟ್ಟಡದಲ್ಲಿ ಸಿಲುಕಿದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಯಾರಿಗೂ ತೊಂದರೆಯಾಗಿಲ್ಲ. ಈ ಕಟ್ಟಡದಲ್ಲಿ ಇರಿಸಲಾಗಿರುವ ಪೆಟ್ರೋಕೆಮಿಕಲ್ ಉತ್ಪನ್ನದ ಬ್ಯಾರೆಲ್‌ನಿಂದ ಇಂಧನ ಸೋರಿಕೆ ಈ ಅಗ್ನಿ ಅನಾಹುತಕ್ಕೆ ಕಾರಣ ಎಂದು ಶಂಕೆ ವ್ಯಕ್ತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂದಾಜಿನ ಪ್ರಕಾರ, ಸುಮಾರು ಎರಡು ಸಾವಿರ ಲೀಟರ್ ಡೀಸೆಲ್ ಅನ್ನು ಬ್ಯಾರೆಲ್‌ನಲ್ಲಿ ಇಡಲಾಗಿದ್ದು, ಜನರೇಟರ್ ಚಲಾಯಿಸಲು ಕಟ್ಟಡದಲ್ಲಿ ಅದನ್ನು ಇಡಲಾಗಿತ್ತು ಎನ್ನಲಾಗಿದೆ.

ಈ ಕಟ್ಟಡವು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಅಧಿಕೃತ ನಿವಾಸದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಈ ಘಟನೆಯ ನಂತರ, ಸಶಸ್ತ್ರ ಪೊಲೀಸ್ ಪಡೆ, ನೇಪಾಳ ಪೊಲೀಸರು ಮತ್ತು ನೇಪಾಳ ಸೇನಾ ಸಿಬ್ಬಂದಿಯನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸುಮಾರು 90 ನಿಮಿಷಗಳಲ್ಲಿ ಬೆಂಕಿ ನಂದಿಸಲಾಗಿದೆ ಎಂದು ಹೇಳಲಾಗಿದೆ.

Trending News