ವಾಷಿಂಗ್ಟನ್: ಭವಿಷ್ಯದಲ್ಲಿ ಬಾಹ್ಯಾಕಾಶ ಯುದ್ಧದ ಪರಿಕಲ್ಪನೆ ಹೊಂದಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೆಂಟಗನ್ ಪಡೆಗೆ ಅಧಿಕೃತವಾಗಿ ಹಣ ಬಿಡುಗಡೆ ಮಾಡಿದ್ದಾರೆ. ಈ ಕುರಿತಾದ ನ್ಯಾಷನಲ್ ಡಿಫೆನ್ಸ್ ಆಥರೈಸೇಶನ್ ಕಾಯ್ದೆ-2020ಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ನಡೆಯಲಿರುವ ಸಂಭವನೀಯ ಯುದ್ಧಕ್ಕಾಗಿ ಬಾಹ್ಯಾಕಾಶ ಪಡೆ ಸ್ಥಾಪನೆಗೆ ಟ್ರಂಪ್ ಅಧಿಕೃತ ಅನುಮತಿ ನೀಡಿದ್ದಾರೆ ಎಂದು US ಬಾಹ್ಯಾಕಾಶ ಪಡೆಯ ಮೂಲಗಳು ಮಾಹಿತಿ ನೀಡಿವೆ.
ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಚಾಲಿತಗೊಂಡಿರುವ ಇಂತಹದೊಂದು ನೂತನ ಮಿಲಿಟರಿ ಸೇವೆ US ವಾಯುಸೇನೆಯ ಅಡಿ ಕಾರ್ಯನಿರ್ವಹಿಸಲಿದೆ. ಈ ಕುರಿತು ವಾಷಿಂಗ್ಟನ್ ಆರ್ಮಿ ಬೇಸ್ ಬಳಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಬಾಹ್ಯಾಕಾಶವನ್ನು "ಭವಿಷ್ಯದ ಯುದ್ಧ ಹೋರಾಟದ ಹೊಸ ಡೊಮೇನ್" ಎಂದು ಬಣ್ಣಿಸಿದ್ದಾರೆ. "ದೇಶದ ರಾಷ್ಟ್ರೀಯ ಭದ್ರತೆಗೆ ಉಂಟಾಗುತ್ತಿರುವ ಧಕ್ಕೆಯ ಹಿನ್ನೆಲೆ, ಬಾಹ್ಯಾಕಾಶದಲ್ಲಿ ಅಮೇರಿಕಾದ ಪಾರುಪತ್ತ್ಯ ಮತ್ತು ಶ್ರೇಷ್ಠತೆ ತುಂಬಾ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ. ಆದರೆ, ಹೇಳಿಕೊಳ್ಳುವಷ್ಟು ಪ್ರಗತಿ ನಾವು ಸಾಧಿಸಿಲ್ಲ. ಆದರೆ ಇನ್ಮುಂದೆ ಶೀಘ್ರದಲ್ಲಿಯೇ ನಾವು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಯಶಸ್ವಿಯಾಗಲಿದ್ದು, ಭೂಮಿಯಿಂದ ನಿರ್ಧಿಷ್ಟ ಎತ್ತರದಲ್ಲಿ ಶತ್ರುಗಳನ್ನು ಸದೆಬಡಿಯಲು ಮತ್ತು ಶತ್ರುಗಳ ಆಕ್ರಮಣದಿಂದ ಪಾರಾಗಲು ಈ ಸ್ಪೇಸ್ ಫೋರ್ಸ್ ನಮಗೆ ಸಹಕಾರಿಯಾಗಲಿದೆ" ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ಶುಕ್ರವಾರ ಈ ಕುರಿತಾದ 738 ಬಿಲಿಯನ್ ಡಾಲರ್ ವಾರ್ಷಿಕ US ಮಿಲಿಟರಿ ಬಜೆಟ್ ಗೆ ಸಹಿಹಾಕಿರುವ ಅಧ್ಯಕ್ಷ ಟ್ರಂಪ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಮೊದಲ ವರ್ಷದಲ್ಲಿ ಸ್ಪೇಸ್ ಫೋರ್ಸ್ ಲಾಂಚ್ ಗಾಗಿ ಸರ್ಕಾರ 40 ಮಿಲಿಯನ್ ಡಾಲರ್ ವ್ಯಯಿಸಲಿದೆ. 1947ರಲ್ಲಿ ಅಮೇರಿಕಾದ ವಾಯುಪಡೆ ಸ್ಥಾಪನೆಯಾದ ಬಳಿಕ ರಚನೆಗೊಂಡ ಆರನೇ ಹಾಗೂ ಅತ್ಯಂತ ಕಿರಿಯ ಮಿಲಿಟರಿ ಶಾಖೆ ಇದಾಗಲಿದೆ.
ಸ್ಪೇಸ್ ಫೋರ್ಸ್ ಹೇಗೆ ಕಾರ್ಯನಿರ್ವಹಿಸಲಿದೆ
ಇದು ಅಮೇರಿಕಾದ ಸೇನೆಯನ್ನು ಕಕ್ಷೆಗೆ ತೆಗೆದುಕೊಂಡು ಹೋಗುವ ಉದ್ದೇಶ ಹೊಂದಿಲ್ಲ, ಆದರೆ ಇದು ಆಗಸದಲ್ಲಿ ಅಮೇರಿಕಾ ಸಂವಹನ ಮತ್ತು ಕಣ್ಗಾವಲಿಗಾಗಿ ಬಳಸುವ ನೂರಾರು ಉಪಗ್ರಹ ಹಾಗೂ ಉಪಕರಣಗಳನ್ನು ರಕ್ಷಿಸಲಿದೆ. ಈ ನಿಟ್ಟಿನಲ್ಲಿ ಚೀನಾ ಮತ್ತು ರಷ್ಯ ಸಾಧಿಸುತ್ತಿರುವ ಪ್ರಗತಿಯನ್ನು ಗಮನಿಸಿರುವ ಅಮೇರಿಕಾದ ಸೇನಾ ಮುಖ್ಯಸ್ಥರು, ಅಮೇರಿಕ ಕೂಡ ಶೀಘ್ರದಲ್ಲಿಯೇ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು ಎಂದು ಸೂಚಿಸಿದ್ದರು. ಬಳಿಕ ಮಾತನಾಡಿದ್ದ ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್, ಉಭಯ ದೇಶಗಳು ವಾಯುಗಾಮಿ ಲೇಸರ್ ಹಾಗೂ ಉಪಗ್ರಹ ವಿರೋಧಿ ಕ್ಷಿಪಣಿಗಳನ್ನು ಹೊಂದಿದ್ದು, ಭವಿಷ್ಯದಲ್ಲಿ ಅವುಗಳನ್ನು ಎದುರಿಸಲು US ಬಳಿ ಇಂತಹ ಒಂದು ವ್ಯವಸ್ಥೆ ಇರಬೇಕಾದುದು ಅತ್ಯಗತ್ಯ ಎಂದಿದ್ದರು.
ಬಾಹ್ಯಾಕಾಶದಲ್ಲಿ ಕಾರ್ಯಾಚರಣೆಯನ್ನು ನಿರ್ವಹಿಸಲು ಕಳೆದ ಆಗಸ್ಟ್ ನಲ್ಲಿ ಯುಎಸ್ ಮಿಲಿಟರಿ ರಚಿಸಿರುವ ಹಾಗೂ ಸದ್ಯ ಅಸ್ತಿತ್ವದಲ್ಲಿರುವ ಯುಎಸ್ ಸ್ಪೇಸ್ ಕಮಾಂಡ್ (ಸ್ಪೇಸ್ಕಾಮ್)ನ ನಿರ್ದೇಶನಗಳ ಮೇಲೆ ಈ ಬಾಹ್ಯಾಕಾಶ ಪಡೆ ಕಾರ್ಯನಿರ್ವಹಿಸಲಿದೆ. ಇದು ಸುಮಾರು 16,000 ವಾಯುಪಡೆ ಮತ್ತು ನಾಗರಿಕ ಸಿಬ್ಬಂದಿಯನ್ನು ಹೊಂದಿರಲಿದೆ ಎಂದು ವಾಯುಪಡೆಯ ಕಾರ್ಯದರ್ಶಿ ಬಾರ್ಬರಾ ಬ್ಯಾರೆಟ್ ಹೇಳಿದ್ದಾರೆ. ಸದ್ಯ ಸ್ಪೆಸ್ಕಾಮ್ ನ ಮುಖ್ಯಸ್ಥರಾಗಿರುವ ಯುಎಸ್ ವಾಯುಪಡೆಯ ಜನರಲ್ ಜೇ ರೇಮಂಡ್ ಈ ಬಾಹ್ಯಾಕಾಶ ಪಡೆಗೆ ಮುಖ್ಯಸ್ಥರಾಗಿರಲಿದ್ದಾರೆ.
ಈ ತಿಂಗಳ ಆರಂಭದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, "ಯುಎಸ್ ನ ಈ ಬಾಹ್ಯಾಕಾಶ ವಿಸ್ತರಣೆ ರಷ್ಯಾದ ಹಿತಾಸಕ್ತಿಗಳಿಗೆ ಮಾರಕವಾಗಿದ್ದು, ಇದಕ್ಕೆ ರಷ್ಯಾದ ಪ್ರತಿಕ್ರಿಯೆ ಅಗತ್ಯ" ಎಂದಿದ್ದರು. ಅಷ್ಟೇ ಅಲ್ಲ "US ಮಿಲಿಟರಿ ವಿಭಾಗ ಹಾಗೂ ರಾಜಕೀಯ ನಾಯಕತ್ವ ಬಹಿರಂಗವಾಗಿ ಬಾಹ್ಯಾಕಾಶವನ್ನು ಮಿಲಿಟರಿ ಭೀತಿ ಎಂದು ಪರಿಗಣಿಸುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಲು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದು ವಿಷಾಧನೀಯ" ಎಂದಿದ್ದರು.