ಚನ್ನಪಟ್ಟಣ: ರಾಜ್ಯ ವಿಧಾನಸಭೆ ಚುನಾವಣೆಯ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಒಂದಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಫಲಿತಾಂಶ ಹೊರಬೀಳುವ ಮೊದಲೇ ಸೋಲಿನ ಭೀತಿಗೆ ಒಳಗಾಗಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಪಿ. ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ಹಣ ಕೆಲಸ ಮಾಡಿದ್ದು, ನನ್ನ ಗೆಲುವು ಕಷ್ಟ ಎಂದು ಅಳಲು ತೋಡಿಕೊಂಡರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನನ್ನ ನೇರ ಸ್ಪರ್ಧಿಯಾಗಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಪರ ಸಚಿವ ಡಿ.ಕೆ. ಶಿವಕುಮಾರ್ ಇಡೀ ಕ್ಷೇತ್ರದಲ್ಲಿ ಅವರ ಕಪ್ಪು ಹಣದ ಹೊಳೆ ಹರಿಸಿದ್ದಾರೆ ಎಂದು ಆರೋಪಿಸಿದರು. ಸೋಲು ಗೆಲುವು ಏನೇ ಬಂದರೂ ನಾನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದ ಯೋಗೇಶ್ವರ್, ಒಂದು ವೇಳೆ ನಾನು ಸೋತರೂ ಬಿಜೆಪಿಯಲ್ಲಿಯೇ ಉಳಿದು, ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಪ್ರಬಲ ಅಭ್ಯರ್ಥಿ
ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಸಾಧನೆಯ ಹ್ಯಾಟ್ರಿಕ್ ವಿಜಯ ಸಾಧಿಸಿ ಶಾಸಕರಾಗಿ ಕಾರ್ಯನಿರ್ವಯಿಸಿತ್ತಿದ್ದಾರೆ. ಇವರು ಯಾವುದೇ ಪಕ್ಷದಿಂದ ಕಣಕ್ಕಿಳಿದರೂ ಗೆಲುವು ಸಾಧಿಸುವಂತಹ ಪ್ರಬಲ ಅಭ್ಯರ್ಥಿ. ಈ ಹಿಂದೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರಲ್ಲದೆ, ಕಾಂಗ್ರೆಸ್ ಪಕ್ಷದಿಂದ ಹಾಗೂ ಸಮಾಜವಾದಿ ಪಕ್ಷದಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.