ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಾ ಮತ ಎಣಿಕೆ ಆರಂಭವಾಗಿದ್ದು, ಜನಾದೇಶ ಪಡೆಯುವ ಕಾಲ ಸನ್ನಿಹಿತವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನ ನಡೆದಿತ್ತು.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಚುನಾವಣೆಯಲ್ಲಿ 2,622 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರಲ್ಲಿ 2,405 ಪುರುಷ ಅಭ್ಯರ್ಥಿಗಳು, 217 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಕರ್ನಾಟಕ ಚುನಾವಣೆ ಕ್ಷೇತ್ರವಾರು ಫಲಿತಾಂಶ
ಈ ಬಾರಿಯ ಚುನಾವಣೆಯಲ್ಲಿ ಮತದಾನಕ್ಕಾಗಿ ಸುಮಾರು 58,546 ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಅಲ್ಲದೆ 154 ಸಾಮಾನ್ಯ ವೀಕ್ಷಕರು, 136 ವೆಚ್ಚ ವೀಕ್ಷಕರು, 34 ಪೋಲಿಸ್ ವೀಕ್ಷಕರು 10,000 ಅತಿ ಸೂಕ್ಷ್ಮ ವೀಕ್ಷಕರು 3.2 ಲಕ್ಷ ಚುನಾವಣಾ ಸಿಬ್ಬಂಧಿಗಳು ಚುನಾವಣಾ ಯಶಸ್ಸಿಗೆ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಅನ್ನು ಚುನಾವಣೆಯಲ್ಲಿ ಬಳಸಲಾಗಿತ್ತು.
ಪಕ್ಷಾವಾರು ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಮತದಾನದ ನಂತರ ಸುದ್ದಿ ವಾಹಿನಿಗಳು ಪ್ರಕಟಿಸಿದ್ದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಅಲ್ಲದೆ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದವು. ಆದರೆ, ಈ ಎಲ್ಲಾ ಭವಿಷ್ಯ ನಿಜವಾಗಲಿದೆಯೇ ಅಥವಾ ಮಿತ್ಯವಾಗಲಿದೆಯೇ ಎಂಬುದು ಇದೀಗ ಆರಂಭವಾಗಿರುವ ಮತ ಎಣಿಕೆ ಕಾರ್ಯದ ನಂತರ ತಿಳಿಯಲಿದೆ.