ದೇಶಕ್ಕೆ ಪ್ರೇರಣೆ ಒದಗಿಸುವ ಕಾರ್ಯವನ್ನು ಕರ್ನಾಟಕದ ಮಠ ಮಂದಿರಗಳು ಮಾಡಿವೆ: ಕಲ್ಪತರು ನಾಡಲ್ಲಿ ಪ್ರಧಾನಿ ಮೋದಿ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತುಮಕೂರಿನಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸಿ, ಇಲ್ಲಿನ 6 ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ ಒದಗಿಸಿದ್ದೇವೆ- ಪ್ರಧಾನಿ ಮೋದಿ

Last Updated : May 5, 2018, 01:09 PM IST
ದೇಶಕ್ಕೆ ಪ್ರೇರಣೆ ಒದಗಿಸುವ ಕಾರ್ಯವನ್ನು ಕರ್ನಾಟಕದ ಮಠ ಮಂದಿರಗಳು ಮಾಡಿವೆ: ಕಲ್ಪತರು ನಾಡಲ್ಲಿ ಪ್ರಧಾನಿ ಮೋದಿ title=
Pic: Twitter@@BJP4India

ತುಮಕೂರು: ಕಲ್ಪತರು ನಾಡು ತುಮಕೂರಿನ ಜನತೆಗೆ , ನಡೆದಾಡುವ ದೇವರು ಸಿದ್ಧಗಂಗಾ ಸ್ವಾಮೀಜಿಯವರಿಗೆ ಭಕ್ತಿ ಪೂರ್ವಕ ನಮನಗಳು ಎಂದು ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಯವರಿಗೂ ಕನ್ನಡದಲ್ಲಿ ನಮಸ್ಕರಿಸಿದರು. ಈ ಮಣ್ಣಿನಲ್ಲಿ ಜನಿಸಿದ ಎಲ್ಲ ಮಹನೀಯರಿಗೆ ನನ್ನ ಪ್ರಣಾಮಗಳು ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕನ್ನಡ ನಾಡು ಅನೇಕ ಮಠ ಮಂದಿರಗಳಿಗೆ ಹೆಸರುವಾಸಿಯಾಗಿದೆ. ಶಿಕ್ಷಣ, ಆರೋಗ್ಯ, ಮುಂತಾದ ಸಾಮಾಜಿಕ ಕಾರ್ಯಗಳ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಿವೆ. ಇಡೀ ದೇಶಕ್ಕೆ ಪ್ರೇರಣೆ ಒದಗಿಸುವ ಕಾರ್ಯವನ್ನು ಕರ್ನಾಟಕದ ಮಠ ಮಂದಿರಗಳು ಮಾಡಿವೆ ಎಂದು ತಿಳಿಸಿದರು.

ಕಾಂಗ್ರೆಸ್ ನ ಇತಿಹಾಸ ಗಮನಿಸಿ ನೋಡಿ. ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಕಾಲದಿಂದಲೂ ಬಡವರ, ಬಡತನದ ಮಂತ್ರ ಜಪಿಸಿ ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದಿದೆ. ಯಾವಾಗ ಒಬ್ಬ ಬಡ ಕುಟುಂಬದ ವ್ಯಕ್ತಿ ಈ ದೇಶದ ಪ್ರಧಾನಿಯಾದರೋ ಆವಾಗಿನಿಂದ ಕಾಂಗ್ರೆಸ್ ನ ನಿದ್ದೆಗೆಟ್ಟಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ 7 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಒಂದು
ಕರ್ನಾಟಕದ 7 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಕೂಡಾ ಒಂದು. ಕೇಂದ್ರದಿಂದ 836 ಕೋಟಿ ರೂ. ಅನುದಾನ ಒದಗಿಸಿದ್ದರೂ ಕೂಡ ಇಲ್ಲಿನ ಸರ್ಕಾರ ಬಳಸಿರೋದು ಕೇವಲ 12 ಕೋಟಿ ರೂ. ಮಾತ್ರ. ಅಭಿವೃದ್ಧಿಯ ವಿರೋಧಿಯಾದ ಇಲ್ಲಿನ ಕಾಂಗ್ರೆಸ್ ಪಕ್ಷಕ್ಕೆ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮೋದಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ನೇರ ಹೊಣೆ
ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ತನ್ನ ಮಂತ್ರಿಗಳ ಖಜಾನೆ ತುಂಬಿಕೊಳ್ಳುವ ಬದಲು, ದೇಶದ ರೈತರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದರೆ ಇಂದು ರೈತರು ಇಷ್ಟೊಂದು ಕಷ್ಟ ಪಡುವ ಅವಶ್ಯಕತೆಯಿರಲಿಲ್ಲ. 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ರೈತರ ಅಭ್ಯುದಯಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ರೈತರ ಆತ್ಮಹತ್ಯೆಗಳಿಗೆ ಇಷ್ಟು ದಿವಸ ಆಡಳಿತ ಮಾಡಿದ ಕಾಂಗ್ರೆಸ್ ನೇರ ಕಾರಣ. ಅವರು ಮಾಡಿದ ಪಾಪದ ಫಲವೇ ಇಂದು ನಮ್ಮ ದೇಶದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಮಾಡಿದರು.

ಕಾಂಗ್ರೆಸ್ ಮಣಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ
ಜೆಡಿಎಸ್ ಗೆ  ಕಾಂಗ್ರೆಸ್ ಅನ್ನು ಸೋಲಿಸುವ ತಾಕತ್ತು ಇಲ್ಲ. ಅದು ಮೂರನೇ ಸ್ಥಾನಕ್ಕೂ ಕೂಡಾ ತೆವಳುತ್ತ ತಲುಪುವ ಸ್ಥಿತಿಯಲ್ಲಿದೆ. ಜೆಡಿಎಸ್ ಕನ್ನಡಿಗರ ಕಣ್ಣಲ್ಲಿ ಮಣ್ಣನ್ನು ತೂರುತ್ತಿದೆ. ಕಾಂಗ್ರೆಸ್ ನ ಸೋಲಿಸಲು ಬಿಜೆಪಿಗೆ ಮಾತ್ರ ಸಾಧ್ಯ ಎಂದು ನಮೋ ಹೇಳಿದರು.

ನದಿ ಜೋಡಣೆ ವಾಜಪೇಯಿ ಅವರ ಕನಸಿನ ಕೂಸು
ಮಾನ್ಯ ಅಟಲ್ ಬಿಹಾರಿ ವಾಜಪಯಿ ಅವರ ಕನಸಿನ ಕೂಸಾದ ನದಿ ಜೋಡಣೆ ಕೆಲಸವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ನಾವು ಹೇಮಾವತಿ ಮತ್ತು ನೇತ್ರಾವತಿ ನದಿಗಳನ್ನು ಜೋಡಿಸಿ ತುಮಕೂರಿನ ನೀರಿನ ಸಮಸ್ಯೆಯನ್ನು ದೂರ ಮಾಡುತ್ತೇವೆ. ನಾವು 24 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಯೋಜನೆ ಕಲ್ಪಿಸಿದ್ದೇವೆ. 25-30 ವರ್ಷಗಳಿಂದ ಸ್ಥಗಿತಗೊಂಡಿದ್ದ 99 ನೀರಾವರಿ ಯೋಜನೆ ಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪೂರ್ಣಗೊಳಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದರು.

ನಮ್ಮ ಸರ್ಕಾರ ಬಂದರೆ ತುಮಕೂರಲ್ಲಿ ಆಹಾರ ಸಂಸ್ಕರಣೆ ಘಟಕ
ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರ ಜೊತೆ ನಿಲ್ಲಬೇಕಾಗಿದ್ದು ಸರ್ಕಾರಗಳ ಮೂಲಭೂತ ಕರ್ತವ್ಯ. ಆದರೆ, ಇಲ್ಲಿನ ಸರ್ಕಾರ ಗಾಢ ನಿದ್ರೆಯಲ್ಲಿ ಮುಳುಗಿತ್ತು. ತಮ್ಮ ಮಂತ್ರಿಗಳ ತಿಜೋರಿ ಭರ್ತಿಯಾಗುತ್ತಿದ್ದವೇ ವಿನಃ ರೈತರ ಸಂಕಷ್ಟಗಳು ಪರಿಹಾರವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತುಮಕೂರಿನಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸಿ, ಇಲ್ಲಿನ 6 ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ ಒದಗಿಸುತ್ತೇವೆ ಎಂದು ಕಲ್ಪತರು ಜನತೆಗೆ ಮೋದಿ ಭರವಸೆ ನೀಡಿದರು.

Trending News