ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ 78 ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳೇ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಉಪಮುಖ್ಯಮಂತ್ರಿ ಹುದ್ದೆಯ ಆಸೆಯೂ ಇದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ನಗರದ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, 'ಪಕ್ಷದ 78 ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳೇ, ಆದರೆ ಎಲ್ಲರನ್ನೂ ಮಂತ್ರಿಮಾಡೋಕೆ ಆಗಲ್ಲ. ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳಲಿದೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆಯ ಆಸೆಯೂ ಇದೆ. ಸಚಿವ ಸ್ಥಾನ ನೀಡುವಾಗ ಹೈಕಮಾಂಡ್ ಜಾತಿ, ಸಮುದಾಯ, ಹಿರಿತನ ಎಲ್ಲವನ್ನೂ ನೋಡುತ್ತದೆ’ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ನನಗೆ ಸಚಿವ ಸ್ಥಾನ ನೀಡಬೇಡಿ ಎಂದು ಹೇಳಿಲ್ಲ. ಇದೊಂದು ಪ್ಲಾಂಟ್ ಸುದ್ದಿಯಷ್ಟೇ. ನನಗೆ ಜಲಸಂಪನ್ಮೂಲ ಖಾತೆಯೇ ಬೇಕಿಂದಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿರುವುದರಿಂದ ಅದರ ಬಗ್ಗೆ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.