Invest Karnataka: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ

ಬೆಂಗಳೂರಿನಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸಲು ಮುಂದಾಗಿರುವ ತೈವಾನ್ ಮೂಲದ ಸೆಂಚುರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಡಿಸಿ), ಈ ಸಂಬಂಧ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಿದೆ.

Written by - Zee Kannada News Desk | Last Updated : Feb 17, 2022, 06:04 PM IST
  • ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ನಿರಾಣಿ ಭೇಟಿ ಮಾಡಿದ ತೈವಾನ್ ನಿಯೋಗ
  • ಬೆಂಗಳೂರಿನಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಅಭಿವೃದ್ಧಿ ಪಡಿಸುತ್ತಿರುವ ತೈವಾನ್‌ ಮೂಲದ ಸಿಡಿಸಿ ಕಂಪನಿ
  • ತೈವಾನ್ ಹೂಡಿಕೆದಾರರಿಗೆ ಕೈಗಾರಿಕೆ ಇಲಾಖೆ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು ಎಂದ ನಿರಾಣಿ
Invest Karnataka: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ title=
ಕೈಗಾರಿಕಾ ಸಚಿವ ನಿರಾಣಿ ಭೇಟಿ ಮಾಡಿದ ತೈವಾನ್ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲು ತೈವಾನ್ ಕಂಪನಿಗಳನ್ನು ಆಹ್ವಾನಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ(Murugesh Nirani)ಅವರು ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಗುರುವಾರ ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ರಾಯಭಾರಿ ಬಾಶುವಾನ್ ನೇತೃತ್ವದ ನಿಯೋಗ(Taiwanese Companies)ವನ್ನು ಭೇಟಿ ಮಾಡಿದ ಸಚಿವ ನಿರಾಣಿ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

2 ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ(Taipei Economic and Cultural Centre)ದ ಉನ್ನತ ಮಟ್ಟದ ನಿಯೋಗವು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಹೂಡಿಕೆ ಅವಕಾಶಗಳ ಕುರಿತು ಮಾತುಕತೆ ನಡೆಸಿತು.

ಇದನ್ನೂ ಓದಿ: ಕೊತ್ವಾಲ್ ಶಿಷ್ಯನೆಂಬ ಮಾತ್ರಕ್ಕೆ ಸದನದಲ್ಲೂ ಅದೇ ರೀತಿ ವರ್ತಿಸುವುದು ತರವೇ?: ಡಿಕೆಶಿಗೆ ಬಿಜೆಪಿ ಪ್ರಶ್ನೆ

‘ಕರ್ನಾಟಕ ಮತ್ತು ತೈವಾನ್‌ ನಡುವೆ ಹಲವು ಸಾಮತ್ಯೆಗಳಿದ್ದು, ಇಎಸ್‌ಡಿಎಂ, ಎಲೆಕ್ಟ್ರಿಕ್ ವೆಹಿಕಲ್ಸ್, ಆಟೋ ಮತ್ತು ಆಟೋ ಕಾಂಪೊನೆಂಟ್ಸ್, ಹೆಲ್ತ್‌ಕೇರ್, ಇಂಜಿನಿಯರಿಂಗ್ ಮತ್ತು ಮೆಷಿನ್ ಟೂಲ್‌ ಮುಂತಾದ ಪ್ರಮುಖ ಉದ್ಯಮ(Karnataka Business Ecosystem)ಗಳಲ್ಲಿ ಮುಂಚೂಣಿ ಸಾಧಿಸಿವೆ’ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

‘ವಿಸ್ಟ್ರಾನ್ ಕಾರ್ಪೊರೇಶನ್, ಮೀಡಿಯಾಟೆಕ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಮತ್ತು ಡಿ-ಲಿಂಕ್ ಸೇರಿದಂತೆ ಪ್ರಮುಖ ತೈವಾನಿ ಕಂಪನಿಗಳಿಗೆ ಕರ್ನಾಟಕ ನೆಲೆಯಾಗಿದೆ. ಇತರ ತೈವಾನ್‌ ಕಂಪನಿಗಳೂ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಬಹುದು, ಇದಕ್ಕೆ ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದು ಅವರು ವಿವರಿಸಿದರು. ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ನೀತಿಗಳು(Investment Opportunities In Karnataka) ಹಾಗೂ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಸಚಿವರು ಇದೇ ವೇಳೆ ಮಾಹಿತಿ ನೀಡಿದರು.

‘ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ (ಎಬಿಸಿ) ಯೋಜನೆ ಇತ್ಯಾದಿ ಕ್ರಮಗಳಿಂದ ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ’ ಎಂದು ಹೇಳಿದರು.

ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: ಸಂಪುಟದಿಂದ ಈಶ್ವರಪ್ಪರನ್ನು ಕೈಬಿಡುವಂತೆ ಸಿದ್ದರಾಮಯ್ಯ ಆಗ್ರಹ

‘ತೈವಾನ್ ಹೂಡಿಕೆದಾರರಿಗೆ ಕೈಗಾರಿಕೆ ಇಲಾಖೆ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು. ಸರ್ಕಾರದ ಹಲವು ಸುಧಾರಣಾ ಕ್ರಮಗಳಿಂದಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ.45ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದು ಕೈಗಾರಿಕಾಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ ತಿಳಿಸಿದರು.

ತೈವಾನ್ ಮೂಲದ ಉದ್ಯಮಗಳಿಗೆ ಅನುಕೂಲ ಕಲ್ಪಿಸಿರುವ ಕರ್ನಾಟಕ ಸರ್ಕಾರ(Karnaaka Govt.)ಕ್ಕೆ ಬಾಶುವಾನ್ ಕೃತಜ್ಞತೆ ವ್ಯಕ್ತಪಡಿಸಿದರು. ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ದಕ್ಷಿಣ-ಚೆನ್ನೈನ ಮಹಾನಿರ್ದೇಶಕ ಬೆನ್ ವಾಂಗ್ ಹಾಗೂ ಕೇಂದ್ರದ ಸಿಬ್ಬಂದಿ, ಇನ್ವೆಸ್ಟ್ ಇಂಡಿಯಾ ಫೋರಂನ ಪ್ರಾದೇಶಿಕ ಮುಖ್ಯಸ್ಥೆ ಸಾಯಿ ಸುಧಾ, ತೈವಾನ್ ಡೆಸ್ಕ್ ಲೀಡ್ ಅಜು ಆಂಟೋನಿ,  ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಎನ್.ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಉಪಸ್ಥಿತರಿದ್ದರು.

ಸಿಡಿಸಿ ಮಾಸ್ಟರ್‌ ಪ್ಲ್ಯಾನ್‌

ಬೆಂಗಳೂರಿನಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸಲು ಮುಂದಾಗಿರುವ ತೈವಾನ್ ಮೂಲದ ಸೆಂಚುರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಡಿಸಿ), ಈ ಸಂಬಂಧ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಿದೆ. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ  70 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅಲ್ಲಿ ತೈವಾನ್‌ನ 100 ಕಂಪನಿಗಳಿಗೆ ಸ್ಥಳಾವಕಾಶ ಕಲ್ಪಿಸಲಿದೆ. ಟಿಇಎಂಐಸಿಓ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಪಾರ್ಕ್‌ನಲ್ಲಿ ಕಾರ್ಖಾನೆ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News