ಭಾರತೀಯ ಚಿತ್ರರಂಗದ ಅತ್ಯದ್ಭುತ ನಾಯಕ ಅಮಿತಾಬ್ ಬಚ್ಚನ್ `ವರ್ಷದ ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಗಳವಾರ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ('IIFI 2017') ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ನಟ ಅಕ್ಷಯ್ ಕುಮಾರ್ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ `ವರ್ಷದ ವ್ಯಕ್ತಿ ಪ್ರಶಸ್ತಿ' ನೀಡಿ ಗೌರವಿಸಿದರು.
5 ದಶಕಗಳಿಗೂ ಅಧಿಕ ಕಾಲದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ 75 ವರ್ಷದ ಮೆಗಾಸ್ಟಾರ್ ಅಮಿತಾಬ್ 190ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಾಲ್ಕು ರಾಷ್ಟ್ರ ಪ್ರಶಸ್ತಿ ಮತ್ತು 15 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಉಳಿದಂತೆ, '48ನೇ IFFI' ಅತ್ಯುತ್ತಮ ನಟ ಪ್ರಶಸ್ತಿ ನಹುವೆಲ್ ಪೆರೆಜ್ ಬಿಸ್ಕಾರ್ಟ್ (Nahuel Perez Biscayart) ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಾರ್ವತಿ ಮೆನನ್ ತಮ್ಮ 'ಟೇಕ್ ಆಫ್' ಚಿತ್ರಕ್ಕಾಗಿ ಪಡೆದಿದ್ದಾರೆ. ಇನ್ನು ಈ ಬಾರಿಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಒಟ್ಟು 82 ದೇಶದ 195 ಸಿನಿಮಾಗಳು ಪ್ರದರ್ಶನವಾಗಿತ್ತು. ಬಾಲಿವುಡ್ ನಟಿ ಶ್ರೀದೇವಿ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. 8 ದಿನಗಳ ಕಾಲ ಫಿಲ್ಮ್ ಫೆಸ್ಟಿವಲ್ ನಡೆದಿತ್ತು.