ತೆರೆಮೇಲೆ ಬರಲಿದೆ ಅರವಿಂದ್‌-ದಿವ್ಯಾ ʼಅರ್ಧಂಬರ್ಧ ಪ್ರೇಮಕಥೆʼ..!

 ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಅರವಿಂದ್ ಕೌಶಿಕ್ ನಿರ್ದೇಶನದ ʼಅರ್ಧಂಬರ್ಧ ಪ್ರೇಮಕಥೆʼಯಲ್ಲಿ ಅಭಿನಯಿಸಲಿದ್ದಾರೆ.

Written by - YASHODHA POOJARI | Edited by - Krishna N K | Last Updated : Oct 6, 2022, 12:54 PM IST
  • ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ
  • ಅರವಿಂದ್ ಕೌಶಿಕ್ ನಿರ್ದೇಶನದ ʼಅರ್ಧಂಬರ್ಧ ಪ್ರೇಮಕಥೆʼಯಲ್ಲಿ ಬಿಗ್‌ಬಾಸ್‌ ಜೋಡಿ
  • ನಾಯಕನ ಇಂಟ್ರಡಕ್ಷನ್ ಟೀಸರ್ ದಸರಾ ಹಬ್ಬದ ಶುಭದಿನ ಬಿಡುಗಡೆ
ತೆರೆಮೇಲೆ ಬರಲಿದೆ ಅರವಿಂದ್‌-ದಿವ್ಯಾ ʼಅರ್ಧಂಬರ್ಧ ಪ್ರೇಮಕಥೆʼ..! title=

ಬೆಂಗಳೂರು : ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಅರವಿಂದ್ ಕೌಶಿಕ್ ನಿರ್ದೇಶನದ ʼಅರ್ಧಂಬರ್ಧ ಪ್ರೇಮಕಥೆʼಯಲ್ಲಿ ಅಭಿನಯಿಸಲಿದ್ದಾರೆ.

ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್‌ಶೆಟ್ಟಿ, ರಿಶಬ್‌ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು. ಈಗ ಬೈಕ್ ರೇಸರ್ ಅರವಿಂದ್‌ರನ್ನು ನಾಯಕನಾಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ಅರ್ಧಂಬರ್ಧ ಪ್ರೇಮಕಥೆಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಚೆಂದದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತೆ, ಇಂಥ ಒಂದು ಲವ್‌ಸ್ಟೋರಿಯೇ ಅರ್ಧಂಬರ್ಧ ಪ್ರೇಮಕಥೆ.

ಇದನ್ನೂ ಓದಿ:Funny Viral Video : ಹುಡುಗಿಯ ನೃತ್ಯದಿಂದ ಬೇಸತ್ತ ಎಮ್ಮೆ ಕಲಿಸಿತು ಸರಿಯಾದ ಪಾಠ .!

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ನಾಯಕನ ಇಂಟ್ರಡಕ್ಷನ್ ಟೀಸರ್ ದಸರಾ ಹಬ್ಬದ ಶುಭದಿನ ಬಿಡುಗಡೆಯಾಯಿತು. ಹಿರಿಯನಟ ದ್ವಾರಕೀಶ್ ಅವರು ಟೀಸರ್‌ ಬಿಡುಗಡೆ ಮಾಡಿದರು. ಈ ವೇಳೆ ಬಿಗ್‌ಬಾಸ್ ತಂಡದ ಶುಭಾ ಪುಂಜಾ, ರಾಜೀವ್, ಅರವಿಂದ್ ಕೂಡ ಹಾಜರಿದ್ದು ಗೆಳೆಯನ ಹೊಸ ರೈಡ್‌ಗೆ ಶುಭ ಕೋರಿದರು. ಇನ್ನು ಈ ಚಿತ್ರದಲ್ಲಿ ಹಿರಿಯ ಕಲಾವಿದ ದ್ವಾರಕೀಶ್ ಅವರ ಪುತ್ರ ಅಭಿಲಾಷ್ ದ್ವಾರಕೀಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 25 ವರ್ಷಗಳ ನಂತರ ನಟನೆಗೆ ಹಿಂದಿರುಗಿದ್ದಾರೆ. ಬೈಕ್ ರೇಸರ್ ಅರವಿಂದ್ ಅವರ ಗುರುಗಳು ಕೂಡ ಈ ಸಮಾರಂಭದಲ್ಲಿ ಹಾಜರಿದ್ದರು. 

ನಿರ್ದೇಶಕ ಅರವಿಂದ್ ಕೌಶಿಕ್ ಮಾತನಾಡಿ ಚಿತ್ರದಲ್ಲಿ ಅರವಿಂದ್ ಅವರ ಬೈಕ್ ರೇಸಿಂಗ್ ಸಾಧನೆಗಳ ಬಗ್ಗೆ ಹೇಳಿಲ್ಲ, ನಾನು ಮಾಡಿಕೊಂಡ ಕಥೆಗೆ ಒಬ್ಬ ಹೊಸ ಹೀರೋ ಬೇಕಿತ್ತು. ಆತ ಜನ ಗುರುತಿಸುವಂಥ ಹೀರೋನೂ ಆಗಿರಬೇಕು ಅಂದುಕೊಂಡಾಗ ನೆನಪಿಗೆ ಬಂದದ್ದೇ ಕೆ.ಪಿ.ಅರವಿಂದ್. ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ. ನವೆಂಬರ್ ವೇಳೆಗೆ ರಿಲೀಸ್ ಮಾಡೋ ಯೋಜನೆಯಿದೆ ಎಂದು ಹೇಳಿದರು.

ಇದನ್ನೂ ಓದಿ:ಯಮುನಾನಗರದಲ್ಲಿ ರಾವಣ ದಹನದ ವೇಳೆ ನೆರೆದಿದ್ದವರ ಮೇಲೆ ಬಿದ್ದ ರಾವಣ ಪ್ರತಿಕೃತಿ, ವಿಡಿಯೋ ವೈರಲ್

ನಂತರ ದ್ವಾರಕೀಶ್ ಅವರು ಮಾತನಾಡುತ್ತ ನಮ್ಮ ಕಾಲದಲ್ಲಿ ಈ ಥರದ ನೆಗೆಟಿವ್ ಟೈಟಲ್ ಇಡುತ್ತಲೇ ಇರಲಿಲ್ಲ, ಈಗ ಅರವಿಂದ್ ಅಂಥಾ ಸಾಹಸ ಮಾಡಿದ್ದಾರೆ. ನಾಯಕ ಸೌತ್ ಕೆನರಾದವನು, ಈಗ ಅಲ್ಲಿನವರೇ ಜಾಸ್ತಿ ಹೆಸರು ಮಾಡುತ್ತಿದ್ದಾರೆ. ಹಿಂದೆ ಪುಟ್ಟಣ್ಣ ಕಣಗಾಲರು ನೀಡಿದ ಒಂದು ಸಲಹೆ, ನಾನು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವಂತೆ ಮಾಡಿತು ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.
 
ಬಕ್ಸಸ್ ಮೀಡಿಯಾ, ಲೈಟ್‌ಹೌಸ್ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್ ಸೇರಿ ಅರ್ದಂಬರ್ಧ ಪ್ರೇಮ ಕಥೆ ಚಿತ್ರವನ್ನು ನಿರ್ಮಿಸಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಅವರ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ಕೆಲಸವನ್ನೂ ನಿಭಾಯಿಸಿದ್ದಾರೆ. ರ‍್ಯಾಪರ್ ಆಲ್‌ಓಕೆ ಅಲೋಕ್, ಶ್ರೇಯಾ, ವೆಂಕಟ್‌ಶಾಸ್ತ್ರಿ, ಪ್ರದೀಪ್‌ರೋಷನ್, ಸೂರಜ್ ಹೂಗಾರ್, ಸುಜಿತ್‌ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

Trending News