ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ಮಾಡಲಾಗುವುದು. ದಲಿತರ ಹಣ ವಾಪಸ್ ಬರಬೇಕು, ದಲಿತರಿಗೆ ನ್ಯಾಯ ದೊರೆಯಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೂಟಿಯಾದ ಹಣ ಮರಳಿ ಸರ್ಕಾರದ ಖಜಾನೆಗೆ ಬರಬೇಕು. ಇದಕ್ಕಾಗಿ ಹಗಲು ರಾತ್ರಿ ಧರಣಿ ಮಾಡಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇವೆ. ರಾತ್ರಿ ಧರಣಿ ಮಾಡುವವರಿಗೆ ಊಟ ಬೇಕಾ ಎಂದು ಸ್ಪೀಕರ್ ಕೇಳಿದ್ದಾರೆ. ಮಾತನಾಡಲು ಅವಕಾಶ ನೀಡದವರ ಊಟ, ದಲಿತರ ಹಣ ಕೊಳ್ಳೆ ಹೊಡೆದವರ ಊಟ ಬೇಡ ಎಂದು ತಿರಸ್ಕಾರ ಮಾಡಿದ್ದೇವೆ. ರಾತ್ರಿ ಪೂರ್ತಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಧರಣಿ ಮಾಡುತ್ತೇವೆ. ನಾಳೆ ಕೂಡ ಧರಣಿ ಮುಂದುವರಿಯಲಿದೆ. ಎರಡೂ ಹಗರಣಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಕಾವೇರಿ ಹೊರಹರಿವು ಹೆಚ್ಚಳ: ಭರಚುಕ್ಕಿ ಆಸುಪಾಸು ಬೀಡು ಬಿಟ್ಟ ಆನೆ ಹಿಂಡು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ದೊಡ್ಡ ಹಗರಣ ನಡೆದಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ 14 ಸೈಟು ಹಾಗೂ ಅವರ ಬೆಂಬಲಿಗರು ನೂರಾರು ಸೈಟು ಕೊಳ್ಳೆ ಹೊಡೆದಿದ್ದಾರೆ. ಮುಡಾದಲ್ಲಿ 1 ಲಕ್ಷಕ್ಕೂ ಅಧಿಕ ಚದರಡಿಯ ಹಾಗೂ 3-4 ಸಾವಿರ ಕೋಟಿ ರೂ. ಬೆಲೆಯ ಪ್ರಮುಖ ನಿವೇಶನಗಳನ್ನು ಲೂಟಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಕಾಯಲಿ ಎಂದು ಜನರು ಅಧಿಕಾರ ಕೊಟ್ಟರೆ ಆ ವ್ಯಕ್ತಿ ಸ್ವಜನಪಕ್ಷಪಾತದಿಂದ ನಿವೇಶನಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಕೂಡ ಮುಖ್ಯಮಂತ್ರಿಯ ಹೆಗಲಿಗೆ ಬರುವ ಲಕ್ಷಣ ಕಂಡುಬಂದಿದೆ. ಮುಡಾದಲ್ಲಿ ದಲಿತರ ಜಮೀನು ಲೂಟಿ ಮಾಡಿದರೆ, ನಿಗಮದಲ್ಲಿ ದಲಿತರ ಹಣ ಲೂಟಿಯಾಗಿದೆ. ಜೊತೆಗೆ ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ತಾವೇನೂ ಅಕ್ರಮ ಮಾಡಿಲ್ಲವೆಂದರೆ ಅಧಿವೇಶನದಲ್ಲಿ ಚರ್ಚಿಸಲು ಭಯ ಏಕೆ? ಇಡೀ ಕಾಂಗ್ರೆಸ್ ತಂಡ ಸದನದಲ್ಲಿ ಉತ್ತರಿಸಲು ಸಾಧ್ಯವಾಗದೆ ಓಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಬಿಜೆಪಿ ಶಾಸಕರು, ಮೇಲ್ಮನೆ ಸದಸ್ಯರಿಂದ ಅಹೋರಾತ್ರಿ ಧರಣಿ : ಬಿ.ವೈ.ವಿಜಯೇಂದ್ರ
ಹಗರಣದ ತನಿಖೆಗೆ ನ್ಯಾಯಮೂರ್ತಿಗಳ ನೇತೃತ್ವದ ತಂಡ ರಚಿಸಲಾಗಿದೆ. ಆದರೆ ಮುಖ್ಯಮಂತ್ರಿಯೇ ತನಿಖೆಗೆ ಆದೇಶ ಮಾಡಿದರೆ ನ್ಯಾಯ ಹೇಗೆ ಸಿಗಲಿದೆ? ಸ್ಪೀಕರ್ ಕೂಡ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಭೋವಿ ನಿಗಮದ ಹಗರಣ ಚರ್ಚಿಸಲು ಅವಕಾಶ ನೀಡುತ್ತಾರೆ, ಆದರೆ ವಾಲ್ಮೀಕಿ ನಿಗಮದ ಹಗರಣ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ನಡೆ ಕೂಡ ಪ್ರಶ್ನಾರ್ಹವಾಗಿದೆ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.