ನವದೆಹಲಿ: ಭಾರತ ಈಗಾಗಲೇ ಗೆಲುವಿನ ನಾಗಾಲೋಟದೊಂದಿಗೆ ಸೆಮಿಫೈನಲ್ ನತ್ತ ಚಿತ್ತ ನೆಟ್ಟಿದೆ. ಈ ಇದೇ ಸಂದರ್ಭದಲ್ಲಿ ದೂಸ್ರಾ ಎನ್ನುವ ಸಿನಿಮಾ ಟ್ರೈಲರ್ ಶುಕ್ರವಾರದಂದು ಬಿಡುಗಡೆಯಾಗಿದೆ.
ಸಾಕಷ್ಟು ಕುತೂಹಲ ಕೆರಳಿಸಿರುವ ಈ ದೂಸ್ರಾ ಚಿತ್ರದ ಟ್ರೈಲರ್, ಪ್ರಮುಖವಾಗಿ 2002 ರಲ್ಲಿ ಭಾರತ ಲಾರ್ಡ್ಸ್ ನಲ್ಲಿ ಜಯ ಸಾಧಿಸಿದ ನ್ಯಾಟ್ ವೆಸ್ಟ್ ಸರಣಿಯ ವಿಜಯದಲ್ಲಿ ಗಂಗೂಲಿ ತನ್ನ ಶರ್ಟ್ ಬಿಚ್ಚಿ ಸಂಭ್ರಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಕ್ರಿಕೆಟ್ ಫ್ಯಾನ್ ಆಗಿರುವ ಬಾಲಕಿ ಕಣ್ಣಲ್ಲಿ ದೇಶದ ಇತಿಹಾಸ ಹೇಗೆ ಬದಲಾಗುತ್ತದೆ. ಹಾಗೂ ಜನರು ತಮ್ಮನ್ನು ಯಾವ ರೀತಿ ಪರಾಮರ್ಶೆಗೆ ಒಳಪಡಿಸಿಕೊಳ್ಳುತ್ತಾರೆ ಎನ್ನುವುದನ್ನು ಈ ಟ್ರೈಲರ್ ಚಿತ್ರ ಸಾರುತ್ತದೆ.
ಎಲ್ಲ ಘಟನಾವಳಿಗಳು ಹಾಗೂ ಬದಲಾವಣೆಗಳು ಬಾಲಕಿಯ ಕಣ್ಣ ಮುಂದೆ ಜರುಗುವುದನ್ನು ನಿರ್ದೇಶಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಟ್ರೈಲರ್ ಕೊನೆಯಲ್ಲಿ 1947 ರಾಜಕೀಯ ಸ್ವಾತಂತ್ರ್ಯವಾದರೆ, 1991-ಆರ್ಥಿಕ ಸ್ವಾತಂತ್ರ್ಯ, 2002 ನಮ್ಮ ಭಾವನೆಗಳಿಗಿನ ಸ್ವಾತಂತ್ರ್ಯ ಎಂದು ಸಾರುತ್ತದೆ. ಡೆಲ್ಲಿ ಬೆಲ್ಲಿ ಹಾಗೂ ಬ್ಲಾಕ್ ಮೇಲ್ ಚಿತ್ರದ ನಿರ್ದೇಶಕರಾದ ಅಭಿನಯ್ ದೀಯೋ ದೂಸ್ರಾ ಚಿತ್ರವನ್ನು ನಿರ್ದೇಶಿಸಿದ್ದಾರೆ.