ಹುಬ್ಬಳ್ಳಿಯಲ್ಲಿ ಆಡಿ ಬೆಳೆದಿದ್ದ ಭಾರತದ ಶ್ರೇಷ್ಠ ನಿರ್ದೇಶಕ ವಿ.ಶಾಂತಾರಾಂ...!

Last Updated : Nov 19, 2020, 12:18 AM IST
ಹುಬ್ಬಳ್ಳಿಯಲ್ಲಿ ಆಡಿ ಬೆಳೆದಿದ್ದ ಭಾರತದ ಶ್ರೇಷ್ಠ ನಿರ್ದೇಶಕ ವಿ.ಶಾಂತಾರಾಂ...! title=

ವಣಕುದುರೆ ಶಾಂತರಾಮ್ (ವಿ.ಶಾಂತಾರಾಂ) ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಭಾರತೀಯ ಚಿತ್ರರಂಗದಲ್ಲಿ ಮಹಾನ್ ನಿರ್ದೇಶಕ, ನಿರ್ಮಾಪಕ, ನಟರಾಗಿ ವಿಶಿಷ್ಟ ಛಾಪು ಮೂಡಿಸಿದವರು ಶಾಂತಾರಾಂ. ಟಾಕಿ ಸಿನಿಮಾದಿಂದ ಆರಂಭವಾದ ಅವರ ಸಿನಿ ಪಯಣವು ಮುಂದೆ 60, 70 ರ ದಶಕದವರೆಗೆ ಸಾಗಿತು. ಅವರ ಝಣಕ್ ಝಣಕ್ ಪ್ಹಾಯಲ್ ಭಾಜೆ,ಗೀತ್ ಗಾಯೋ ಪತ್ತರೋನೆ,ಅಮರ್ ಭೂಪಾಲಿ, ನವರಂಗ್,ಡಾ. ಕೊಟ್ನಿಸ್ ಕೀ ಅಮರ್ ಕಹಾನಿ,ಯಂತಹ ಚಿತ್ರಗಳು ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟವು.

ಹುಬ್ಬಳ್ಳಿಯ ದುರ್ಗದ ಬೈಲಿನ ನಂಟು:

ಶಾಂತಾರಾಂ ವಣಕುದುರೆ ಅವರು 1901ರ ನವಂಬರ್ 18 ರಂದು ಬಿಜಾಪುರದ ಇಂಡಿಯಲ್ಲಿ ಜೈನ್ ಧರ್ಮದ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಆರಂಭದ ಕೆಲವು ಕಾಲವನ್ನು ಹುಬ್ಬಳ್ಳಿಯಲ್ಲಿ ಕಳೆದಿದ್ದಾರೆ.ನಗರದಲ್ಲಿನ ಡೆಕ್ಕನ್ ಟಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದು,ಹಾಗೂ ರೈಲ್ವೆ ಕಾರ್ಯಾಗಾರದಲ್ಲಿ ಕೆಲಸ ಮಾಡಿದ್ದು,ಇವೆಲ್ಲವೂ ಕೂಡ ಹುಬ್ಬಳ್ಳಿಯಲ್ಲಿನ ಅವರ ಸ್ಮರಣಿಯ ನೆನಪುಗಳಾಗಿವೆ. ಇನ್ನು ದುರ್ಗದ ಬೈಲ್ ನಲ್ಲಿ ಅವರ ಅಜ್ಜಿ ಮಾಡುತ್ತಿದ್ದ ಮಿಸಳ್ ಬಗ್ಗೆಯೂ ಕೂಡ ಹಲವು ಕಥೆಗಳಿವೆ. ಹುಬ್ಬಳ್ಳಿಯ ಮುಖ್ಯ ಭಾಗದಲ್ಲಿರುವ ದುರ್ಗದ ಬೈಲಿನಲ್ಲಿ ಅವರ ಅಜ್ಜಿ ಹೋಟೆಲ್ ವೊಂದನ್ನು ನಡೆಸುತ್ತಿದ್ದರಂತೆ. ಸಾಯಂಕಾಲದ ವೇಳೆ ಬಜ್ಜಿ, ಮಂಡಕ್ಕಿ, ಜೊತೆಗೆ ತಯಾರಿಸುತ್ತಿದ್ದ 'ಮಸಾಲೇದಾರ್' ತಿಂಡಿ 'ಮಿಸಳ್' ಇಡೀ ಹುಬ್ಬಳ್ಳಿಗೆ ಚಿರಪರಿಚಿತವಾಗಿತ್ತು ಎಂದು ಹೇಳಲಾಗುತ್ತದೆ.

ಬದುಕಿಗೆ ತಿರುವು ನೀಡಿದ ಸೈರಂಧ್ರಿ​:

ತಮ್ಮ 13 ನೇ ವಯಸ್ಸಿನಲ್ಲಿ ವಿ.ಶಾಂತಾರಾಂ ಗೋವಿಂದರಾವ್ ಟೆಂಬೆ ನೇತೃತ್ವದ ಗಾಂಧರ್ವ ನಾಟಕ ಮಂಡಳಿ ಟೂರಿಂಗ್ ಥೇಟರ್ ಕಂಪನಿಗೆ ಸೇರಿದರು, ಅಲ್ಲಿ ನಟನೆ ಮಿಮಿಕ್ರಿ, ನೃತ್ಯದ ಮೂಲಕ ಅಲ್ಪಾವಧಿಯಲ್ಲಿಯೇ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೆ ವೇಳೆ ಬೇಸಿಗೆ ರಜೆಗೆ ಊರಿಗೆ ಬಂದಾಗ ಅವರ ತಂದೆ ಒಂದು ವರ್ಷದ ಅವಧಿಯಲ್ಲಿ ನೃತ್ಯ ಮತ್ತು ನಟನೆ ಹೊರತಾಗಿ ಕಲಿತದ್ದೇನು ಎಂದು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸುವಲ್ಲಿ ಹಿಂಜರಿದ ಶಾಂತಾರಾಂ, ಕೊನೆಗೆ ಒಂದು ವರ್ಷ ವ್ಯರ್ಥವಾಗಿದ್ದನ್ನು ಮನಗಂಡು ವ್ಯಾಸಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಾದ ನಂತರವೂ ಅವರು ಪುನಃ ಸಣ್ಣ ಪುಟ್ಟ ಕೆಲಸ ಮಾಡಿಕೊಳ್ಳುತ್ತಾ ಸಂಕಷ್ಟದ ಜೀವನವನ್ನು ಸಾಗಿಸುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಫಿಲ್ಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸೋದರ ಸಂಬಂಧಿ ಬಾಬುರಾವ್ ಪೆಂಧರ್ಕರ್, ಹುಬ್ಬಳ್ಳಿಗೆ ಸೈರಂಧ್ರಿ (1920) ಪ್ರಿಂಟ್ ನೊಂದಿಗೆ ಆಗಮಿಸಿರುತ್ತಾರೆ, ಆಗ ಈ ಚಿತ್ರದಿಂದ ಪ್ರೇರಿತರಾದ ಶಾಂತಾರಾಂ ಅವರು ಮುಂದೆ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. 1933 ರಲ್ಲಿ ಇದೇ ಚಿತ್ರವನ್ನು ಅವರು ಪ್ರಭಾತ್ ಫಿಲಂ ಕಂಪನಿ ಮೂಲಕ ಹಿಂದಿಯಿಂದ ಮರಾಠಿಗೆ ರಿಮೇಕ್ ಮಾಡುತ್ತಾರೆ. 19 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾಂತಾರಾಮ್ ಮೂಕಿ ಸಿನೆಮಾ ಯುಗದಲ್ಲಿ ಬಾಬುರಾವ್ ಪೇಂಟರ್‌ನ ಸಹಾಯಕರಾಗಿ ಮತ್ತು ಸುರೇಖಾ ಹರನ್ (1921) ದಲ್ಲಿ ನಟನಾಗಿ ಸಿನಿಮಾ ವೃತ್ತಿ ಜೀವನಕ್ಕೆ ಕಾಲಿಟ್ಟರು.

ಮಹಾರಾಷ್ಟ್ರ ಫಿಲಂ ಕಂಪನಿ ಮೂಲಕ ನಿರ್ದೇಶನಕ್ಕೆ:

ಮಹಾರಾಷ್ಟ್ರ ಫಿಲಂ ಕಂಪನಿಯಲ್ಲಿ ಶಾಂತಾರಾಂ ನಿರ್ದೇಶಕರಾಗುವ ಮೊದಲು ಟೈಟಲ್ ಕಾರ್ಡ್ ಡಿಸೈನರ್, ಕಲೆ, ಬರವಣಿಗೆ,ಹಾಗೂ ಕಂಪನಿಯ ವಿವಿಧ ವಿಭಾಗಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.ಇದರಿಂದಾಗಿ ಅವರು ಬಾಬುರಾವ್ ಪೇಂಟರ್ ಅವರ ಮೆಚ್ಚುಗೆಗೆ ಪಾತ್ರರಾದರು, ಮುಂದೆ ಅವರು 1927 ರಲ್ಲಿ ಇದೇ ಕಂಪನಿಯಿಂದ ನೇತಾಜಿ ಪಾಲ್ಕರ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟರು.ಇದಾದ ನಂತರ 1929ರಲ್ಲಿ ಶಾಂತಾರಾಂ ತಮ್ಮ ಸ್ನೇಹಿತರ ಮೂಲಕ ಕೊಲ್ಲಾಪುರದಲ್ಲಿ ಪ್ರಭಾತ್ ಫಿಲ್ಮ್ ಕಂಪನಿಯನ್ನು ಆರಂಭಿಸಿದರು.1933 ರಲ್ಲಿ ಅವರು ಪುಣೆಗೆ ಸ್ಥಳಾಂತರಗೊಂಡ ನಂತರ ಮರಾಠಿಯ ಮೊದಲ ಟಾಕಿ ಅಯೋಧ್ಯೆಚಾ ರಾಜಾ (1932) ಸಿನಿಮಾವನ್ನು ನಿರ್ದೇಶಿಸಿದರು.ಅವರ ಅಮೃತ್ ಮಂತನ್ (1934) ಸಿನಿಮಾ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು.ಈ ಸಿನಿಮಾ ಮುಂದೆ ವೆನಿಸ್ ಚಲನಚಿತ್ರೋತ್ಸವದಲ್ಲಿಯೂ ಸಹ ಪ್ರದರ್ಶನಗೊಂಡಿತು.ತಮ್ಮದೇ ಸಾರಥ್ಯದ ಪ್ರಭಾತ್ ಫಿಲಂ ಕಂಪನಿ ಅಡಿಯಲ್ಲಿ ಅವರು ಗೋಪಾಲ್ ಕೃಷ್ಣಾ, ಉದಯ್ ಕಾಲ್,ರಾಣಿ ಸಾಹೇಬ್, ಚಂದ್ರಸೇನಾ, ಪಡೋಸಿ,ಅಮರ್ ಜ್ಯೋತಿಯಂತಹ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರು.

ಶಾಂತಾರಾಂ ಅವರು ಆರು ದಶಕಗಳ ಕಾಲ ಭಾರತೀಯ ಸಿನಿಮಾ ಜಗತ್ತಿನಲ್ಲಿ ತಮ್ಮ ವಿಶಿಷ್ಟ ಪ್ರಯೋಗದ ಸಿನಿಮಾಗಳಿಂದ ಗಮನ ಸೆಳೆಯುತ್ತಾರೆ. ಟಾಕಿ ಸಿನಿಮಾದ ಯುಗದಿಂದ ಹಿಡಿದು ಕಲರ್ ಸಿನಿಮಾಗಳ ಕಾಲಾವಧಿಯವರೆಗಿನ ಅವರ ಪ್ರಯೋಗ ವೈಶಿಷ್ಟ್ಯಗಳು ಸಿನಿಮಾ ಜಗತ್ತಿನಲ್ಲಿ ಅವರನ್ನು ಅತ್ತ್ಯುನ್ನತ ಸ್ಥಾನದಲ್ಲಿ ನಿಲ್ಲಿಸುತ್ತವೆ. ಭಾರತೀಯ ಸಿನಿಮಾ ರಂಗಕ್ಕೆ ಅವರು ನೀಡಿದ ಈ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ದಾದಾಸಾಹೇಬ್ ಪಾಲ್ಕೆ ಪುರಸ್ಕಾರ, ಪದ್ಮವಿಭೂಷಣ, ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ ಅವರು ಅಂತಾರಾಷ್ಟ್ರೀಯ ಗೋಲ್ಡನ್ ಗ್ಲೋಬ್ ಅವಾರ್ಡ್ ಕೂಡ ಲಭಿಸಿದೆ.ಮಹಾರಾಷ್ಟ್ರ ಸರ್ಕಾರವು ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು  ಸಹ ಸ್ಥಾಪಿಸಿದೆ.ಕೊನೆಗೆ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದ ವಿ ಶಾಂತಾರಾಂ ಅವರು 1990 ರ ಅಕ್ಟೋಬರ್ 30 ರಂದು ಮುಂಬೈನಲ್ಲಿ ಕೊನೆಯುಸಿರೆಳೆದರು.

-ಮಂಜುನಾಥ ನರಗುಂದ

Trending News