ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಯೋಗಿ- ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಬೆಳಿಗ್ಗೆ 5-30ರಿಂದ 6 ಗಂಟೆ ನಡುವಿನ ಶುಭಲಗ್ನದಲ್ಲಿ ಇವರಿಬ್ಬರ ವಿವಾಹವು ಗುರು-ಹಿರಿಯರ ಆಶೀರ್ವಾದದೊಂದಿಗೆ ಬನಶಂಕರಿಯ ಶ್ರೀ ಕನ್ವೆನ್ಷನ್ ಸೆಂಟರ್ನಲ್ಲಿ ನೆರವೇರಿತು. ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಬ್ಯಾಚುಲರ್ ಲೈಫ್ ಗೆ ಬಾಯ್ ಹೇಳಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗಿ- ಸಾಹಿತ್ಯಗೆ ಶುಭಹಾರೈಸಲು ಸಿನಿಮಾ ರಂಗದ ಹಲವು ಗಣ್ಯಾತಿ ಗಣ್ಯರು ಆಗಮಿಸಿದ್ದರು.
ಯೋಗಿ-ಸಾಹಿತ್ಯ ದಂಪತಿಗಳಿಗೆ ಶುಭ ಹಾರೈಕೆ ನೀಡಿದ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್, ದುನಿಯಾ ಸಿನಿಮಾದ ನಂತರ ನನಗೆ ಯೋಗಿ ಮತ್ತು ಅವರ ತಂದೆ ಸಿದ್ದರಾಜು ಆತ್ಮೀಯರು, ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಸಾಲು ಸಾಲು ಮದುವೆ ಸಂಭ್ರಮ ಸಂತಸ ತರುತ್ತಿದೆ ಎಂದು ಹೇಳಿದರು. ನಾನು ಇಂದು ಶೂಟಿಂಗ್ ಗಾಗಿ ಗೋವಾಗೆ ತೆರಳಬೇಕಾಗಿದೆ ಆ ಕಾರಣ ಬೆಳಿಗ್ಗೆ ಶುಭ ಹಾರೈಸಿದ್ದೇನೆ ಎಂದು ತಿಳಿಸಿದರು.