ಬೆಂಗಳೂರು : ಸ್ಯಾಂಡಲ್ವುಡ್ ತಾರೆಯರಾದ ಮೇಘನಾರಾಜ್ ಮತ್ತು ಚಿರಂಜೀವಿ ಸರ್ಜಾ ಮೇ.2 ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್ ಹೋಟೆಲ್ನಲ್ಲಿ ವಿವಾಹವಾಗಲಿದ್ದಾರೆ.
ಒಂದು ದಶಕದ ದೀರ್ಘಕಾಲದ ಸ್ನೇಹದಿಂದ ಪ್ರೇಮಿಗಳಾದ ಮೇಘನಾರಾಜ್ ಮತ್ತು ಚಿರಂಜೀವಿ ಸರ್ಜಾ ಜೋಡಿಗೆ ಕಳೆದ ವರ್ಷ ನಿಶ್ಚಿತಾರ್ಥವಾಗಿತ್ತು. ಇದೀಗ ಇದೇ ಮೇ.2ರಂದು ಬೆಳಿಗ್ಗೆ 10.30ರಿಂದ 11ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ, ಹಿಂದೂ ಧರ್ಮದ ಸಾಂಪ್ರದಾಯದಂತೆ ವಿವಾಹ ನೆರವೇರಲಿದ್ದು, ಅದೇ ದಿನ ಸಂಜೆ ಆರತಕ್ಷತೆ ಕೂಡ ನಡೆಯಲಿದೆ.
ವಿವಾಹಕ್ಕೆ ಒಂದು ವಾರ ಮುಂಚಿತವಾಗಿಯೇ ಹಲವು ಕಾರ್ಯಕ್ರಮಗಳು ನಡೆಯಲಿದೆ. ಏಪ್ರಿಲ್ ಕಡೆಯ ವಾರದಲ್ಲಿ ಹಳದಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮೇಘನಾ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕ್ಯಾಥೊಲಿಕ ಸಂಪ್ರದಾಯದಂತೆ ಮದುವೆ
ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಕ್ಯಾಥೊಲಿಕ್ ಆಗಿರುವುದರಿಂದ ನಗರದ ಚರ್ಚ್'ನಲ್ಲಿ ಕ್ಯಾಥೊಲಿಕ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇದೊಂದು ಇಂಗ್ಲಿಷ್ ಥೀಂ ಕಾರ್ಯಕ್ರಮವಾಗಿದ್ದು, ಮೇಘನಾ ವೈಟ್ಗೌನ್ ಮತ್ತು ಚಿರು ಬ್ಲೂಸೂಟ್ ಧರಿಸಲಿದ್ದಾರೆ. ಈ ಉಡುಪನ್ನು ಚಿರು ಆಪ್ತರೊಬ್ಬರು ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪುಷ್ಪ ಸುಂದರಿಯರೊಂದಿಗೆ ಲೇಡಿ ಡಯಾನಾ ರೀತಿಯಲ್ಲಿ ಮೇಘನಾ ಫೋಟೋ ಶೂಟ್ ನಡೆಯಲಿದೆ.
ಮೇ.2 ರಂದು ಐಶ್ವರ್ಯ ರೈ ಬಚ್ಚನ್ ವಿವಾಹ ಉಡುಪನ್ನೇ ಹೋಲುವಂತೆ ಸಾಂಪ್ರದಾಯಿಕ ಕಾಂಚೀವರಂ ಸೀರೆಯನ್ನು ಮೇಘನಾ ಧರಿಸಲಿದ್ದು, ಕಿರು ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಲಿದ್ದಾರೆ. ಅದೇ ದಿನ ಸಂಜೆ ಆರತಕ್ಷತೆ ಕೂಡ ಇದ್ದು ಗ್ಲಿಟರ್ ಮತ್ತು ಗೋಲ್ಡ್ ಥೀಮ್'ನಲ್ಲಿ ಚಿರು ಹಾಗೂ ಮೇಘನಾ ಕಂಗೊಳಿಸಲಿದ್ದಾರೆ.