ಸಂಕ್ರಾಂತಿಯಂದೇ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಟೀಸರ್ ಬಿಡುಗಡೆ

'ಹೆಬ್ಬುಲಿ' ಖ್ಯಾತಿಯ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Updated: Jan 7, 2019 , 07:03 PM IST
ಸಂಕ್ರಾಂತಿಯಂದೇ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಟೀಸರ್ ಬಿಡುಗಡೆ

ಬೆಂಗಳೂರು: ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ 'ಪೈಲ್ವಾನ್' ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. 

ಕಳೆದ ಎರಡು ದಿನಗಳಿಂದ ಐಟಿ ದಾಳಿಯಿಂದ ಬೇಸತ್ತಿದ್ದ ಕಿಚ್ಚ ಸುದೀಪ್ ಸೋಮವಾರ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 'ಪೈಲ್ವಾನ್' ಚಿತ್ರದ ಬಗ್ಗೆ ಹೊಸ ಸುದ್ದಿಯೊಂದನ್ನು ಬಹಿರಂಗಪಡಿಸಿರುವ ಸುದೀಪ್, ಚಿರ್ರದ ಮೊದಲ ಟೀಸರ್ ಬಿಡುಗಡೆ ಯಾವಾಗ ಎಂಬುದನ್ನು ಟ್ವೀಟ್ ಮಾಡಿದ್ದಾರೆ. 

"ಇದೇ ಜನವರಿ 15ರಂದು ಸಂಜೆ 4.45ಕ್ಕೆ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ 'ಪೈಲ್ವಾನ್‍' ಚಿತ್ರದ ಕನ್ನಡ ಅವತರಣಿಕೆಯ ಮೊದಲ ಅಧಿಕೃತ ಟೀಸರ್ ಬಿಡುಗಡೆಯಾಗುತ್ತಿದೆ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಈ ವಿಷಯ ತಿಳಿಸಲು ಬಹಳ ಸಂತೋಷವಾಗುತ್ತಿದೆ" ಎಂದು ಸುದೀಪ್ ಟ್ವೀಟ್ ಮುಖೇನ ಟೀಸರ್ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

'ಹೆಬ್ಬುಲಿ' ಖ್ಯಾತಿಯ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಿತ್ರದ ಬೆನ್ನಲ್ಲೇ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರ ಎಂಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದ ನಾಯಕಿಯಾಗಿ ಆಕಾಂಕ್ಷಾ ಸ್ಸಿಂಗ್ ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಾಲಿವುಡ್ ಸಾಹಸ ನಿರ್ದೇಶಕ ಲಾರ್ನೆಲ್ ಸ್ಟೋವೆಲ್ ಚಿತ್ರದಲ್ಲಿ ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.