ಬೆಂಗಳೂರು: ಕರುನಾಡಿನ ಪ್ರೀತಿಯ ‘ಅಪ್ಪು’, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶ(Puneeth Rajkumar Dead)ರಾಗಿದ್ದಾರೆ. ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್ ಕೊನೆಯುಸಿರೆಳೆದಿದ್ದಾರೆ. ನೆಚ್ಚಿನ ನಟನ ನಿಧನದಿಂದ ಲಕ್ಷಾಂತರ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಪುನೀತ್ ರಾಜ್ ಕುಮಾರ್ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ.
1975ರ ಮಾರ್ಚ್ 17ರಂದು ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar)ಅವರ ಕಿರಿಯ ಪುತ್ರನಾಗಿ ಜನಿಸಿದ್ದ ಪುನೀತ್ ರಾಜ್ ಕುಮಾರ್(Puneeth Rajkumar) ಬಾಲ್ಯದಿಂದಲೇ ಕಲೆಯ ನಂಟು ಹೊಂದಿದ್ದರು. ಚಿತ್ರನಟ, ಹಿನ್ನೆಲೆ ಗಾಯಕ, ನಿರ್ಮಾಪಕ, ನಿರೂಪಕ, ಸಮಾಜ ಸೇವಕ ಹಾಗೂ ಕರುನಾಡಿನ ಮನೆಮಗನಾಗಿ ಗುರುತಿಸಿಕೊಂಡಿದ್ದ ಪುನೀತ್ ಸಣ್ಣ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಬಾಲ್ಯದಲ್ಲಿ ತಮ್ಮ ತಂದೆ ಡಾ.ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಮೋಡಿ ಮಾಡಿದ್ದರು.
ಇದನ್ನೂ ಓದಿ: Breaking News: ನಟ ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ
‘ಬೆಟ್ಟದ ಹೂ’ ಚಿತ್ರ(Bettada Hoovu Film)ದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 2002ರಲ್ಲಿ ಖ್ಯಾತ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಕನದ ‘ಅಪ್ಪು’ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಪುನೀತ್ ರಾಜ್ ಕುಮಾರ್ ಅನೇಕ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014), ಮೈತ್ರಿ (2015), ದೊಡ್ಮನೆ ಹುಡುಗ (2016), ಅಂಜಿನಿ ಪುತ್ರ (2017), ನಟಸಾರ್ವಭೌಮ (2019) ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಅದ್ಭುತ ನಟನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಕನ್ನಡದ ಪ್ರಸಿದ್ಧ ಟಿವಿ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತು ‘ಫ್ಯಾಮಿಲಿ ಪವರ್’ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ವೈಯಕ್ತಿಕ ಜೀವನ
ವರನಟ ಡಾ.ರಾಜ್ ಕುಮಾರ್(Dr Rajkumar) ಮತ್ತು ಪಾರ್ವತಮ್ಮನವರ ಕಿರಿಯ ಪುತ್ರನಾಗಿ ಜನಿಸಿದ ಪುನೀತ್ ರಾಜ್ ಕುಮಾರ್ ಅಕ್ಕರೆಯ ಮಗನಾಗಿ ಬೆಳೆದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಪುನೀತ್ ಅವರ ಸಹೋದರರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ಪುನೀತ್ 6 ವರ್ಷದವರಿದ್ದಾಗ ಡಾ.ರಾಜ್ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಡಾ.ರಾಜ್ ಕುಮಾರ್ ಅವರು ಪ್ರತಿದಿನವೂ ತಮ್ಮ ಶೂಟಿಂಗ್ ಸೆಟ್ ಗೆ ಪುನೀತ್ ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಅವರ ಮೂಲ ಹೆಸರು ಲೋಹಿತ್. ಅವರು ಕರುನಾಡಿನ ಪ್ರೀತಿಯ ‘ಅಪ್ಪು’ ಆಗಿ, ಅಭಿಮಾನಿಗಳಿಗೆ ‘ಪವರ್ ಸ್ಟಾರ್’ ಆಗಿ, ಅಭಿನಯದಲ್ಲಿ ‘ಕನ್ನಡದ ರಾಜರತ್ನ’ನಾಗಿ ಮನೆಮಾತಾಗಿದ್ದರು.
ಇದನ್ನೂ ಓದಿ: ‘ಬೆಟ್ಟದ ಹೂ’ ಮೂಲಕ ಬಾಲ್ಯದಲ್ಲಿಯೇ ಮೋಡಿ ಮಾಡಿದ್ದ ಪುನೀತ್ ರಾಜ್ ಕುಮಾರ್
ಪುನೀತ್ 1999ರ ಡಿಸೆಂಬರ್ 1ರಂದು ಚಿಕ್ಕಮಗಳೂರು ಮೂಲದ ಅಶ್ವಿನಿ ರೇವಂತ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ತಮ್ಮ ಮನೋಜ್ಞ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ ರಾಜ್ ಕುಮಾರ್ ಇಹಲೋಹ ತ್ಯಜಿಸಿರುವುದು ಕರುನಾಡಿನ ಜನರಿಗೆ ಆಘಾತ ತಂದಿದೆ. ಪುನೀತ್ ಇಲ್ಲದ ಸ್ಯಾಂಡಲ್ ವುಡ್ ಚಿತ್ರರಂಗ ಅನಾಥವಾದಂತಿದೆ. ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಪಾರ್ಥಿವ ಶರೀರ ಅಪ್ಪಿಕೊಂಡು ಪತ್ನಿ ಕಣ್ಣೀರಿಟ್ಟಿದ್ದಾರೆ.
ಬಾಲ ನಟನಾಗಿ ಪುನೀತ್ ನಟಿಸಿದ ಚಿತ್ರಗಳು
ಪ್ರೇಮದ ಕಾಣಿಕೆ, ಭಾಗ್ಯವಂತ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ
ಪುನೀತ್ ರಾಜ್ ಕುಮಾರ್ ನಟಿಸಿದ ಚಿತ್ರಗಳು
ಅಪ್ಪು (2002), ಅಭಿ (2003), ವೀರ ಕನ್ನಡಿಗ(2004), ಮೌರ್ಯ(2004), ಆಕಾಶ್(2005), ನಮ್ಮ ಬಸವ(2005), ಅಜಯ್(2006), ಅರಸು(2007), ಮಿಲನ(2007), ಬಿಂದಾಸ್(2008), ವಂಶಿ(2008), ರಾಜ್ ದಿ ಶೋ ಮ್ಯಾನ್(2009), ಪೃಥ್ವಿ(2009), ರಾಮ್(2010), ಜಾಕಿ(2010, ಹುಡುಗರು(2011), ಪರಮಾತ್ಮ(2011), ಅಣ್ಣ ಬಾಂಡ್(2012), ಯಾರೇ ಕೂಗಾಡಲಿ(2012), ನಿನ್ನಿಂದಲೇ(2014), ಮೈತ್ರಿ(2015), ಪವರ್(2015), ರಣವಿಕ್ರಮ(2015), ಚಕ್ರವ್ಯೂಹ(2016), ದೊಡ್ಮನೆ ಹುಡುಗ(2016), ರಾಜಕುಮಾರ(2017), ಅಂಜನಿ ಪುತ್ರ(2017), ನಟಸಾರ್ವಭೌಮ(2019), ಜೇಮ್ಸ್, ದ್ವಿತ್ವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ