ಬೆಂಗಳೂರು: ರಾಜ್ಯದಲ್ಲಿ ತಮಿಳಿನ ಸುಪರ್ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಇಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಬಳಿ ಬಿಗಿ ಪೋಲಿಸ್ ಭದ್ರತೆ ಒದಗಿಸಲಾಗಿದೆ.
ಕನ್ನಡಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಸಇದಂತೆ ಇತರ ಸಂಘಟನೆಗಳು ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತದ ಬಳಿ ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿವೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಬಹುತೇಕ ಚಿತ್ರಮಂದಿರಗಳ ಬಳಿ ನೂರಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಲಾಗಿದ್ದು, ಪ್ರತಿಭಟನೆ ನಡೆಸುತ್ತಿರುವ ಕನ್ನಡಪರ ಸಂಘಟನೆ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಇದಕ್ಕೂ ಮುನ್ನ ಕಾವೇರಿ ವಿಷಯವಾಗಿ ರಜನಿಕಾಂತ್ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು `ಕಾಲಾ' ಬಿಡುಗಡೆ ತಡೆಯೊಡ್ಡಿದ್ದವು. ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಅಳಿಯ ಧನುಷ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಜಿ.ನರೇಂದರ್ ಅವರು, ಚಿತ್ರ ಬಿಡುಗಡೆಗೆ ಸಮ್ಮತಿ ಸೂಚಿಸಿ, ಸಿನೆಮಾ ಶಾಂತಿಯುತವಾಗಿ ಪ್ರದರ್ಶನಗೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದ್ದರು. ಅದಕ್ಕನುಗುಣವಾಗಿ ಇಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಪೋಲಿಸ್ ಭದ್ರತೆ ಒದಗಿಸಲಾಗಿದೆ.