ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು 'ದಿ ವಿಲನ್' ಸಜ್ಜು!

ಅಕ್ಟೋಬರ್ 18ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಇಂದಿನಿಂದಲೇ ಶುರುವಾಗ್ತಿದೆ ಟಿಕೆಟ್ ಬುಕಿಂಗ್.

Yashaswini V Yashaswini V | Updated: Oct 11, 2018 , 07:27 AM IST
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು 'ದಿ ವಿಲನ್' ಸಜ್ಜು!

ಬೆಂಗಳೂರು: ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ  'ದಿ ವಿಲನ್​' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲು 'ದಿ ವಿಲನ್' ಸಜ್ಜಾಗಿದೆ. ಪ್ರಪಂಚದಾದ್ಯಂತ ಸುಮಾರು 1 ಸಾವಿರ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ. ಈ ಚಿತ್ರದ ಬಿಡುಗಡೆಗಾಗಿ  ಬಹಳ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಇಂದಿನಿಂದಲೇ ಪ್ರೀ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ. 

ಬಿಡುಗಡೆಗೆ ಒಂದು ವಾರ ಇರುವಾಗಲೇ ಟಿಕೆಟ್ ಬುಕಿಂಗ್ ಓಪನ್:
ಅಕ್ಟೋಬರ್ 18ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಇಂದಿನಿಂದಲೇ ಟಿಕೆಟ್ ಬುಕಿಂಗ್ ಶುರುವಾಗ್ತಿದೆ. ರಜನಿಕಾಂತ್ ಚಿತ್ರಗಳಿಗಷ್ಟೇ ಈ ರೀತಿ ವಾರದ ಮುನ್ನವೇ ಬುಕಿಂಗ್ ಕ್ರೇಜ್ ನೋಡಲಾಗುತ್ತಿತ್ತು. ಕಬಾಲಿ, ಬಾಹುಬಲಿಯಷ್ಟೇ ಕ್ರೇಜ್ ಇದೀಗ ನಮ್ಮ ಕನ್ನಡದ 'ದಿ ವಿಲನ್' ಚಿತ್ರಕ್ಕೂ ಇರುವುದು ಕನ್ನಡದಲ್ಲಿ ಹೊಸ ಶಕೆ ಉಂಟಾಗುವ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿರೋ 'ದಿ ವಿಲನ್' ಚಿತ್ರದಲ್ಲಿ ಶಿವರಾಜ್‍ಕುಮಾರ್, ಸುದೀಪ್ ಅಭಿನಯಿಸಿದ್ದು, ಈ ಇಬ್ಬರೂ ನಟರ ಅಭಿಮಾನಿಗಳು ತೆರೆಯ ಮೇಲೆ ಇಬ್ಬರನ್ನೂ ಒಟ್ಟಿಗೆ ನೋಡಲು ಕಾತುರರಾಗಿದ್ದಾರೆ. ಇನ್ನು ಚಿತ್ರ ಬಿಡುಗಡೆಯಾದ ಮೊದಲ ನಾಲ್ಕು ದಿನ ಸಾಲು ಸಾಲು ರಜೆ ಇರುವುದರಿಂದ 'ದಿ ವಿಲನ್' ಚಿತ್ರ ವೀಕ್ಷಣೆಗೆ ಟಿಕೆಟ್‍ಗೆ ದುಪ್ಪಟ್ಟು ಬೆಲೆ ಇರಲಿದೆ.

ಚಿತ್ರದ ಟಿಕೆಟ್ ಬೆಲೆ 400,500 ಹಾಗೂ 1000 ಕ್ಕೇರಿಸಲಿದ್ದಾರೆ ಎನ್ನಲಾಗಿದೆ. ಮಲ್ಟಿಪ್ಲೇಕ್ಸ್ ಗಳಲ್ಲಿ 'ದಿ ವಿಲನ್' ಅಬ್ಬರ ನೋಡಲು 400, 500 ಹಾಗೂ 1000 ರೂ. ಫಿಕ್ಸ್ ಮಾಡಬೇಕೆಂದು ನಿರ್ದೇಶಕ ಪ್ರೇಮ್ ಮಲ್ಟಿಪ್ಲೇಕ್ಸ್ ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರೇಮ್ ಹಿಂದಿ, ತೆಲುಗು ತಮಿಳು ಸಿನಿಮಾಗಳನ್ನು ನೋಡಲು ಪ್ರೇಕ್ಷಕರು 1 ಸಾವಿರ ರು ವರೆಗೆ ನೀಡಲು ಸಿದ್ದರಿರುವುದನ್ನು ನಾನು ನೋಡಿದ್ದೇನೆ, ದುಪ್ಪಟ್ಟು ಹಣ ನೀಡಿ ಆ ಸಿನಿಮಾಗಳನ್ನು ನೋಡುತ್ತೀರಿ ಎಂದಾದರೇ  ಕನ್ನಡ ಸಿನಿಮಾ ಏಕೆ ನೋಡಬಾರದು, ನಾವು ನಿರ್ಮಾಪಕರನ್ನು ಗಮನದಲ್ಲಿರಿಸಿಕೊಂಡು ಅತ್ಯಲ್ಪ ಪ್ರಮಾಣದಲ್ಲಿ ಸಿನಿಮಾ ಟಿಕೆಟ್ ದರ ಏರಿಸಿದ್ದೇವೆ, ನಮ್ಮ ಪ್ರೇಕ್ಷಕರು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ಮಲ್ಟಿಫ್ಲಕ್ಸ್ ಗಳ ವಿರುದ್ಧ ನಿರ್ದೇಶಕ ಪ್ರೇಮ್ ಆಕ್ರೋಶ:
ಮಲ್ಟಿಫ್ಲಕ್ಸ್ ಗಳಲ್ಲಿ ಎಲ್ಲಾ ಭಾಷೆಯ ಸಿನಿಮಾಗಳೂ ಬಿಡುಗಡೆಯಾಗುತ್ತವೆ. ಉಳಿದೆಲ್ಲ ಭಾಷೆಯ ಚಿತ್ರಗಳ ನಿರ್ಮಾಪಕರಿಗೆ ಶೇ.60ರಷ್ಟು ಪಾಲು ಕೊಡುತ್ತವೆ. ಆದರೆ, ಕನ್ನಡ ಸಿನಿಮಾದವರಿಗೆ ಕೇವಲ ಶೇ.50 ನೀಡುತ್ತಿವೆ. ಇದರಿಂದ ತುಂಬ ಅನ್ಯಾಯವಾಗುತ್ತಿದೆ. ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿರುತ್ತೇವೆ. ಇವರು 15 ದಿನ ಪ್ರದರ್ಶನ ಮಾಡುತ್ತಾರೆ. ಅಷ್ಟಕ್ಕೇ 50-50 ಪರ್ಸೆಂಟ್​ ಎನ್ನುತ್ತಾರೆ. ಇದು ಎಷ್ಟು ಸರಿ? ಈ ಬಗ್ಗೆ ಕನ್ನಡ ಚಲನಚಿತ್ರರಂಗದವರು, ವೀಕ್ಷಕರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.