Garadi: ಯೋಗರಾಜ್ ಭಟ್ ‘ಗರಡಿ’ ಮನೆಯ ಕಸರತ್ತು ಅಂತ್ಯ, ಶೀಘ್ರವೇ ತೆರೆಮೇಲೆ ಕುಸ್ತಿಯಾಟ!

ಸುಮಾರು 70 ದಿನಗಳ ಚಿತ್ರೀಕರಣದ ನಂತರ "ಗರಡಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಜಿವಿ ಅಯ್ಯರ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ "ಗರಡಿ" ಮನೆ ಸೆಟ್‍ನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು. 

Written by - YASHODHA POOJARI | Edited by - Puttaraj K Alur | Last Updated : Jan 9, 2023, 01:47 PM IST
  • ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಸಿನಿಮಾದ ಚಿತ್ರೀಕರಣ ಮುಕ್ತಾಯ
  • ಜಿವಿ ಅಯ್ಯರ್ ಸ್ಟುಡಿಯೋದಲ್ಲಿ ‘ಗರಡಿ’ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ
  • ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದ ಬಿ.ಸಿ.ಪಾಟೀಲ್
Garadi: ಯೋಗರಾಜ್ ಭಟ್ ‘ಗರಡಿ’ ಮನೆಯ ಕಸರತ್ತು ಅಂತ್ಯ, ಶೀಘ್ರವೇ ತೆರೆಮೇಲೆ ಕುಸ್ತಿಯಾಟ!  title=
‘ಗರಡಿ’ ಸಿನಿಮಾದ ಚಿತ್ರೀಕರಣ ಮುಕ್ತಾಯ

ಬೆಂಗಳೂರು: ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ "ಗರಡಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರಾಮುಹಳ್ಳಿಯ ಜಿವಿ ಅಯ್ಯರ್ ಸ್ಟುಡಿಯೋದಲ್ಲಿ ‌ಗರಡಿಮನೆ ಸೆಟ್ ಹಾಕಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ "ಗರಡಿ" ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ‘ಸುಮಾರು 70 ದಿನಗಳ ಚಿತ್ರೀಕರಣದ ನಂತರ ಇಂದು "ಗರಡಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ "ಗರಡಿ" ಮನೆ ಸೆಟ್‍ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಹಂತದ ವಿಶೇಷವೆಂದರೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ‍ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರಿಗೆ ವಿಶೇಷ ಧನ್ಯವಾದ. "ಗರಡಿ" ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ‌ಪ್ರೋತ್ಸಾಹವಿರಲಿ’ ಎಂದು ಹೇಳಿದರು.

ಇದನ್ನೂ ಓದಿ: Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!

ಇಂದು "ಗರಡಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ‌ ಸಂಸ್ಥೆಗೆ 1 ಕೋಟಿ ರೂ.ಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್‍ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣದ 16ನೇ ಚಿತ್ರ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು. ‘ನಾನು ಪೈಲ್ವಾನ್ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅನುಭವಿ ಕಲಾವಿದರೊಂದಿಗೆ ‌ನಟಿಸಿರುವ ಖುಷಿಯಿದೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ವಂದನೆಗಳು’ ಎಂದು ನಾಯಕನಟ ಯಶಸ್ ಸೂರ್ಯ ಖುಷಿ ಹಂಚಿಕೊಂಡರು.

ನಾಯಕಿ ಸೋನಾಲ್ ಮೊಂತೆರೊ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟ "ಆರ್ಮುಗಂ" ರವಿಶಂಕರ್ ಮಾತನಾಡಿ, ‘ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಯೋಗರಾಜ್ ಭಟ್ ಹಾಗೂ ಬಿ.ಸಿ.ಪಾಟೀಲ್ ಅವರ ಜೊತೆ ಇದು ನನ್ನ ಮೊದಲ ಚಿತ್ರ’ ಎಂದು ಹೇಳಿದರು. ನಟ ಸುಜಯ್ ಬೇಲೂರ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಕಲಾವಿದರಾದ ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಹಾಗೂ ಕಥೆ ಬರೆದಿರುವ  ವಿಕಾಸ್ "ಗರಡಿ" ಚಿತ್ರದ ಕುರಿತು ಮಾತನಾಡಿದರು.

ಇದನ್ನೂ ಓದಿ: 2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ

ನಿರ್ಮಾಪಕಿ ಸೃಷ್ಟಿ ಪಾಟೀಲ್ ಚಿತ್ರೀಕರಣ ಸರಾಗವಾಗಿ ಮುಗಿಯಲು ಸಹಕಾರ ನೀಡಿದ್ದ ಸಮಸ್ತ ತಂಡಕ್ಕೂ ಧನ್ಯವಾದ ತಿಳಿಸಿದರು. ಚಿತ್ರದ ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದಾರೆ. ನಿರ್ಮಾಪಕ ಬಿ.ಸಿ.ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಾಯಕ ಯಶಸ್ ಸೂರ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ದರ್ಶನ್ ಅವರಿಗೆ ಧನ್ಯವಾದ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News