ನವದೆಹಲಿ: ದೇಶದಲ್ಲಿ ಓಮಿಕ್ರಾನ್ ರೂಪಾಂತರದ ಆತಂಕದ ಹೊರತಾಗಿಯೂ ಭಾರತದಲ್ಲಿ ಮಾಸ್ಕ್ ಹಾಕಿಕೊಳ್ಳುವವರ (Mask compliance) ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಡಿಜಿಟಲ್ ಸಮುದಾಯ ಆಧಾರಿತ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್ (LocalCircles) ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಪ್ರತಿ ದಿನ ಪ್ರತಿ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಗೆ ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಮೂವರಲ್ಲಿ ಒಬ್ಬ ತಮ್ಮ ಪ್ರದೇಶದಲ್ಲಿ ತಮ್ಮ ಮನೆಯಿಂದ ಹೊರಬರುವಾಗ ಮಾಸ್ಕ್ ಗಳನ್ನು (Mask) ಸಹ ಹೊಂದಿರುವುದಿಲ್ಲ ಎಂಬ ಆಘಾತಕಾರಿ ಮಾಹಿತಿ ಈ ಸಮೀಕ್ಷೆಯಿಂದ ಹೊರಬಿದ್ದಿದೆ.
ಇದನ್ನೂ ಓದಿ: ಮೂರು ಅಥವಾ ಹೆಚ್ಚು Covid-19 ಪ್ರಕರಣಗಳಿರುವ ಪ್ರದೇಶಗಳನ್ನು ಕ್ಲಸ್ಟರ್‌ಗಳಾಗಿ ವರ್ಗೀಕರಿಸಲಾಗುವುದು: ಸಿಎಂ ಬೊಮ್ಮಾಯಿ
ಆತಂಕಕಾರಿ ಅಂಕಿ-ಅಂಶ ಬಯಲು:
ಏಪ್ರಿಲ್‌ನಲ್ಲಿ ನಡೆಸಿದ ಸಮೀಕ್ಷೆಯು ಭಾರತದ 364 ಜಿಲ್ಲೆಗಳಲ್ಲಿ ವಾಸಿಸುವ ನಾಗರಿಕರಿಂದ 25,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಈ ಪೈಕಿ 29ರಷ್ಟು ನಾಗರಿಕರು ಮಾತ್ರ ಮಾಸ್ಕ್ (Mask compliance Survey) ಧಾರಣೆಗೆ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಅದು ಹೇಳಿದೆ. ಈ ಶೇಕಡಾವಾರು ಸೆಪ್ಟೆಂಬರ್‌ನಲ್ಲಿ ಶೇಕಡಾ 12 ಕ್ಕೆ ಇಳಿಯಿತು ಮತ್ತು ನವೆಂಬರ್‌ನಲ್ಲಿ ಕೇವಲ 2 ಶೇಕಡಾಕ್ಕೆ ತೀವ್ರವಾಗಿ ಕುಸಿದಿರುವುದು ಆತಂಕಕಾರಿಯಾಗಿದೆ.
ಮಾಸ್ಕ್ ಬಗ್ಗೆ ಸೂಕ್ತ ತಿಳುವಳಿಕೆ ನೀಡುವ ಅಗತ್ಯ:
ಮೂವರಲ್ಲಿ ಇಬ್ಬರು ಭಾರತೀಯರು ಇನ್ನೂ COVID-19 ನಿಂದ ಸೀಮಿತ ರಕ್ಷಣೆ ಮಾತ್ರ ಒದಗಿಸುವ ಬಟ್ಟೆಯ ಮುಖವಾಡಗಳನ್ನು ಧರಿಸುತ್ತಿರುವುದರಿಂದ ಮಾಸ್ಕ್ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಸಮೀಕ್ಷೆ ತಿಳಿಸಿದೆ.
10 ನಿಮಿಷದಲ್ಲಿ ವೈರಸ್ ಹರಡಬಹುದು:
ಓಮಿಕ್ರಾನ್ ರೂಪಾಂತರದ ಹೊತ್ತಿನಲ್ಲಿ ಮುಖವಾಡದ ಅನುಸರಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಅನುಸರಣೆಯನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳು ಸಾಧ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಪರಿಚಯಿಸುವುದು ನಿರ್ಣಾಯಕವಾಗಿದೆ ಎಂದು ಲೋಕಲ್ ಸರ್ಕಲ್ಸ್ ಸಂಸ್ಥಾಪಕ ಸಚಿನ್ ತಪರಿಯಾ ಹೇಳಿದ್ದಾರೆ.
ಒಳಾಂಗಣದಲ್ಲಿ ಇಬ್ಬರು ವ್ಯಕ್ತಿಗಳು ಮಾಸ್ಕ್ ಧರಿಸದಿದ್ದರೆ, ಕೇವಲ 10 ನಿಮಿಷಗಳಲ್ಲಿ, ಸೋಂಕಿತ ವ್ಯಕ್ತಿಯು ಇತರ ವ್ಯಕ್ತಿಗೆ ವೈರಸ್ ಅನ್ನು ಹರಡಬಹುದು. ಆದರೆ ಇಬ್ಬರೂ N-95 ಮುಖವಾಡವನ್ನು ಧರಿಸಿದ್ದರೆ, ಅದಕ್ಕೆ 600 ಗಂಟೆಗಳ ಕಾಲ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಹೋದಲ್ಲೆಲ್ಲ ಸೋಲು ಕಟ್ಟಿಟ್ಟ ಬುತ್ತಿ!: ಖರ್ಗೆಗೆ ಬಿಜೆಪಿ ತಿರುಗೇಟು
ಓಮಿಕ್ರಾನ್ ವಿಶ್ವದಾದ್ಯಂತ 40 ದೇಶಗಳಲ್ಲಿ ಪತ್ತೆಯಾಗಿದೆ, ಭಾರತವು ಕರ್ನಾಟಕದ ಮೂಲಕ ತನ್ನ ಮೊದಲ ಎರಡು ಪ್ರಕರಣಗಳನ್ನು ವರದಿ ಮಾಡಿದ್ದು, ಇದೀಗ ಈ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.