ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಈ ಜ್ಯೂಸ್ ಕುಡಿಯಿರಿ!

ಹೊಟ್ಟೆ ಬೊಜ್ಜು ಕರಗಿಸೋದು ಹೇಗಪ್ಪಾ... ಅನ್ನೋ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಅದಕ್ಕೆ ಇಲ್ಲಿದೆ ಉಪಾಯ...  

Divyashree K Divyashree K | Updated: Sep 27, 2018 , 02:00 PM IST
ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಈ ಜ್ಯೂಸ್ ಕುಡಿಯಿರಿ!

ಬೆಂಗಳೂರು: "ಅಯ್ಯೋ, ಯಾಕೋ ದೇಹದ ತೂಕ ಹೆಚ್ಚಾಗುತ್ತಿದೆ, ಎಷ್ಟು ವಾಕಿಂಗ್ ಮಾಡಿದರೂ ಕಡಿಮೆ ಆಗ್ತಿಲ್ಲ.... ಎಲ್ಲಾ ಡ್ರೆಸ್ ಟೈಟ್ ಆಗ್ತಿದೆ, ಈ ಹೊಟ್ಟೆ ಬೊಜ್ಜು ಕರಗಿಸೋದು ಹೇಗಪ್ಪಾ..." ಎಂಬೆಲ್ಲಾ ಆಲೋಚನೆಗಳು ನಿಮ್ಮನ್ನು ಕಾಡುತ್ತಿವೆಯೇ? ಹಾಗಿದ್ದರೆ ಅದಕ್ಕೆ ಇಲ್ಲಿದೆ ಉಪಾಯ...

ಸಾಮಾನ್ಯವಾಗಿ ತ್ವಚೆ, ಕೂದಲು ಸಮಸ್ಯೆ, ಗಾಯ ನಿವಾರಣೆಗಳಿಗೆ ಲೋಳೆಸರ(ಆಲೋವೆರಾ) ಸಿದ್ದೌಷಧ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ, ಇದೇ ಆಲೋವೆರಾ ಬೋಜ್ಜು ಕರಗಿಸಲು ಸಹಾಯ ಮಾಡುತ್ತದೆ. ಸಸ್ಯಶಾಸ್ತ್ರದಲ್ಲಿ 'ಆಲೂಬಾರ್ಬಡೆನ್ಸಿಸ್' ಎಂದು ಕರೆಯಲ್ಪಡುವ ಈ ಗಿಡವನ್ನು ಲೋಳೆಸರ, ಆಲೋವೆರ ಅಥವಾ ಫಸ್ಟ್ ಏಡ್ ಪ್ಲಾಂಟ್ ಎಂದೂ ಸಹ ಕರೆಯಲಾಗುತ್ತದೆ. 

ನೋಡಲು ಸುಂದರವಾಗಿ, ಅಲಂಕಾರಿಕ ಗಿಡದಂತೆ ಕಂಡರೂ ಪ್ರತಿ ಮನೆಯಲ್ಲೂ ಇರಲೇಬೇಕಾದ ಅತ್ಯಂತ ಉಪಯುಕ್ತವಾದ ಔಷಧೀಯ ಸಸ್ಯ ಆಲೋವೆರಾ ಎಂದರೆ ತಪ್ಪಾಗಲಾರದು. ಇದರ ರಸವನ್ನು ಜ್ಯೂಸ್ ಮುಖಾಂತರ ಸೇವಿಸಬಹುದು. ಆದರೆ ಇದನ್ನು ಬಳಸುವಾಗ ಎಚ್ಚರ ವಹಿಸುವುದು ಒಳಿತು.

ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಆಲೋವೆರಾ ಜ್ಯೂಸ್ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ... ಮೊದಲು ಲೋಳೆಸರದ ಒಂದು ಎಳೆಯನ್ನು ಮುರಿದು, ಅದರ ಮೇಲಿನ ಭಾಗವನ್ನು ಚಾಕುವಿನಿಂದ ತೆಗೆಯಿರಿ. ನಂತರ ಅದರ ತಿರುಳನ್ನು ತೆಗೆದು, ಜ್ಯೂಸ್ ಮಾಡಿ ಪ್ರತಿನಿತ್ಯ ಬೆಳಿಗ್ಗೆ ಸೇವಿಸಿ. ಇದರಿಂದ ಹೊಟ್ಟೆಯ ಬೊಜ್ಜು ಬೇಗ ಕಡಿಮೆಯಾಗುತ್ತದೆ. 

ಇದರೊಂದಿಗೆ ಪ್ರತಿನಿತ್ಯ ವ್ಯಾಯಾಮ ಮಾಡುವುದೂ ಸಹ ಅಷ್ಟೇ ಮುಖ್ಯ. ಆದರೆ, ಯಾವುದೇ ಮನೆಮದ್ದು ಸೇವಿಸುವ ಮುನ್ನ ಅದು ನಿಮ್ಮ ದೇಹಕ್ಕೆ ಹೊಂದುತ್ತದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದಕ್ಕಾಗಿ ವೈದ್ಯರ ಬಳಿ ಸಲಹೆ ಪಡೆದು ಮುಂದುವರೆಯಿರಿ. ಸಾಮಾನ್ಯವಾಗಿ, ಬಾಣಂತಿಯರು ಮತ್ತು ಗರ್ಭಿಣಿಯರು ಲೋಳೆಸರ ಸೇವನೆಯಿಂದ ದೂರ ಇರುವುದು ಒಳ್ಳೆಯದು.