ಏನಿದು 'ನೈಗ್ಲೇರಿಯಾ ಫೌಲೆರಿ'! ಇದು ಮೆದುಳನ್ನು ಹೇಗೆ ಪ್ರವೇಶಿಸುತ್ತದೆ? ಈ ಬಗ್ಗೆ ವೈದ್ಯರು ಹೇಳುವುದೇನು?

Naegleria Fowleri: "ಮೆದುಳನ್ನು ತಿನ್ನುವ ಅಮೀಬಾ" ಎಂದು ಕರೆಯಲ್ಪಡುವ ʻನೈಗ್ಲೇರಿಯಾ ಫೌಲೆರಿʼ ರೋಗಾಣು ಸರೋವರಗಳು, ನದಿಗಳು, ಬಿಸಿನೀರಿನ ಬುಗ್ಗೆಗಳು ಮತ್ತು ಕಳಪೆಯಾಗಿ ನಿರ್ವಹಿಸಲಾದ ಈಜುಕೊಳಗಳಂತಹ ಬೆಚ್ಚಗಿನ ಸಿಹಿನೀರಿನ ಪರಿಸರದಲ್ಲಿ ಕಂಡುಬರುವ ಏಕಕೋಶೀಯ ಜೀವಿಯಾಗಿದೆ. 

Written by - Yashaswini V | Last Updated : Aug 7, 2024, 11:24 AM IST
  • ʻಪಿಎಎಂʼ ರೋಗನಿರ್ಣಯವು ಸವಾಲಿನದ್ದು.
  • ಏಕೆಂದರೆ, ಮೊದಲನೆಯದಾಗಿ ಇದು ಅತ್ಯಂತ ವಿರಳವಾದುದು.
  • ಎರಡನೆಯದ್ದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಮೆದುಳಿನ ಪೊರೆಗಳ ಉರಿಯೂತ(ಬ್ಯಾಕ್ಟೀರಿಯಾ ಮೆನಿಂಜೈಟಿಸ್) ರೋಗಲಕ್ಷಣಗಳೂ ಬಹುತೇಕ ಇದೇ ರೀತಿ ಇರುತ್ತವಾದ್ದರಿಂದ ಸೋಂಕು ಯಾವುದರಿಂದ ಎಂದು ಸುಲಭವಾಗಿ ಗುರುತಿಸುವುದು ಕಷ್ಟದ ಕೆಲಸ.
ಏನಿದು 'ನೈಗ್ಲೇರಿಯಾ ಫೌಲೆರಿ'! ಇದು ಮೆದುಳನ್ನು ಹೇಗೆ ಪ್ರವೇಶಿಸುತ್ತದೆ? ಈ ಬಗ್ಗೆ ವೈದ್ಯರು ಹೇಳುವುದೇನು?  title=

Naegleria Fowleri Brain Eating Amoeba : ಮೆದುಳಿಗೆ ಅಮೀಬಿಯಾ(ಏಕಕೋಶ ಜೀವಿ) ಸೋಂಕು ಉಂಟಾಗುವುದು, ಅದರಲ್ಲೂ ನಿರ್ದಿಷ್ಟವಾಗಿ ʻನೈಗ್ಲೇರಿಯಾ ಫೌಲೆರಿʼಯಂತಹ ಅಮೀಬಿಯಾದಿಂದ ಸೋಂಕು ಉಂಟಾಗುವಂತಹ ಪ್ರಕರಣಗಳು ಅತ್ಯಂತ ವಿರಳ. ಆದರೆ ಅವು ಅಷ್ಟೇ ಮಾರಣಾಂತಿಕ. ಇದನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ತಿಳುವಳಿಕೆ ಅಗತ್ಯ ಎಂದು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರಶಾಸ್ತ್ರಜ್ಞರಾದ ಡಾ ಶಿವಾನಂದ ಪೈ  ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ವೈದ್ಯರು ಹೇಳುವುದೇನು? ಈ ಸೋಂಕನ್ನು ತಪ್ಪಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿ ತಿಳಿಯಲು ಮುಂದೆ ಓದಿ. 

"ಮೆದುಳನ್ನು ತಿನ್ನುವ ಅಮೀಬಾ" ಎಂದು ಕರೆಯಲ್ಪಡುವ ʻನೈಗ್ಲೇರಿಯಾ ಫೌಲೆರಿʼ ರೋಗಾಣು ಸರೋವರಗಳು, ನದಿಗಳು, ಬಿಸಿನೀರಿನ ಬುಗ್ಗೆಗಳು ಮತ್ತು ಕಳಪೆಯಾಗಿ ನಿರ್ವಹಿಸಲಾದ ಈಜುಕೊಳಗಳಂತಹ ಬೆಚ್ಚಗಿನ ಸಿಹಿನೀರಿನ ಪರಿಸರದಲ್ಲಿ ಕಂಡುಬರುವ ಏಕಕೋಶೀಯ ಜೀವಿಯಾಗಿದೆ. ಈ ಜೀವಿಯು ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಒಡ್ಡುತ್ತದೆ, ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಜನರು ನೀರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗುವ ಸಮಯದಲ್ಲಿ ಇದರ ಸೋಂಕಿನ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

ಕಲುಷಿತ ನೀರು ಬಲವಂತವಾಗಿ ಅಥವಾ ಆಕಸ್ಮಿಕವಾಗಿ ಮೂಗಿನೊಳಗೆ ಹೋದಾಗ, ʻನೈಗ್ಲೇರಿಯಾ ಫೌಲೆರಿʼ ಸಾಮಾನ್ಯವಾಗಿ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಈಜು, ಡೈವಿಂಗ್ ಅಥವಾ ಶ್ವಾಸನಾಳ ಸರಾಗ ಮಾಡಲು ʻನೇತಿʼ ಮಡಕೆಯನ್ನು ಬಳಸುವಂತಹ ಸಂದರ್ಭಗಳಲ್ಲಿ ಇದು ಸಂಭವಿಸಬಹುದು. ಮೂಗಿನ ಮೂಲಕ ದೇಹದ ಒಳಗೆ ಪ್ರವೇಶಿಸಿದ ನಂತರ, ಘ್ರಾಣ (ವಾಸನೆಗೆ ಸಂಬಂಧಿಸಿದ) ನರದ ಮೂಲಕ ಅಮೀಬಾ ಮೆದುಳಿಗೆ ಪ್ರಯಾಣಿಸುತ್ತದೆ. ಮೂಗಿನಿಂದ ಮೆದುಳಿಗೆ ಈ ಪ್ರಯಾಣವು ತುಂಬಾ ಸಣ್ಣ ಅಲ್ಪವಾದರೂ ಅದು ನಂಬಲಾಗದಷ್ಟು ಅಪಾಯಕಾರಿ!.

ಇದನ್ನೂ ಓದಿ- ನಿದ್ರಾ ಪಾರ್ಶ್ವವಾಯು ಎಂದರೇನು? ಮತ್ತು ಅದನ್ನು ತೊಡೆದುಹಾಕುವುದು ಹೇಗೆ ಗೊತ್ತೇ ?

ಸೋಂಕಿನ ಹಾದಿ: 
ಮೂಗಿನ ಮೂಲಕ ಜಲಸೇವನೆ: 

ಕಲುಷಿತ ನೀರು ಮೂಗನ್ನು ಪ್ರವೇಶಿಸಿದಾಗ, ಅಮೀಬಾ ಮೂಗಿನ ಹೊಳ್ಳೆಯೊಳಗಿನ ಲೋಳೆಯ ಪೊರೆಗಳಿಗೆ ಅಂಟಿಕೊಳ್ಳುತ್ತದೆ.

ಘ್ರಾಣ ನರ: 
ಆ ನಂತರ ಇದು ಘ್ರಾಣ ನರದಗುಂಟ ಮುಂದಕ್ಕೆ ಚಲಿಸುತ್ತದೆ, ಘ್ರಾಣ ನರವು ಇದು ವಾಸನೆಯ ಪ್ರಜ್ಞೆಗೆ ಸಂಬಂಧಿಸಿದ್ದಾಗಿದ್ದು, ಈ ನರವು ಮೆದುಳಿಗೆ ನೇರ ಮಾರ್ಗವನ್ನು 
ಒದಗಿಸುತ್ತದೆ.

ಮೆದುಳಿನ ಆಕ್ರಮಣ: 
ಮೆದುಳನ್ನು ತಲುಪಿದ ನಂತರ, ʻನೈಗ್ಲೇರಿಯಾ ಫೌಲೆರಿʼ ಮೆದುಳಿನ ಅಂಗಾಂಶವನ್ನು ನಾಶಪಡಿಸಲು ಪ್ರಾರಂಭಿಸುತ್ತದೆ. ಇದು, ವೈದ್ಯಕೀಯವಾಗಿ ʻಪ್ರಾಥಮಿಕ ಅಮೆಬಿಕ್ ಮೆನಿಂಗೊಎನ್ಸೆಫಾಲಿಟಿಸ್ʼ(ಪಿಎಎಂ) ಎಂದು ಕರೆಯಲಾಗುವ ಸ್ಥಿತಿಗೆ ಕಾರಣವಾಗುತ್ತದೆ. 

ರೋಗಲಕ್ಷಣಗಳು ಮತ್ತು ರೋಗನಿರ್ಣಯ: 
'ಪಿಎಎಂ'ನ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕಿಗೆ ಒಳಪಟ್ಟ ಬಳಿಕ ಒಂದರಿಂದ ಒಂಬತ್ತು ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ತೀವ್ರ ತಲೆನೋವು, ಜ್ವರ, ವಾಕರಿಕೆ, ವಾಂತಿ, ಕುತ್ತಿಗೆಯಲ್ಲಿ ಬಿಗಿತ, ಗೊಂದಲ, ಗಮನದ ಕೊರತೆ, ಸಮತೋಲನದ ನಷ್ಟ, ಸೆಳೆತಗಳು ಮತ್ತು ಭ್ರಮೆಗಳನ್ನು ಒಳಗೊಂಡಿರಬಹುದು. ಈ ಹಂತದಿಂದ ರೋಗವು ವೇಗವಾಗಿ ಹಬ್ಬುತ್ತದೆ, ರೋಗಲಕ್ಷಣ ಪ್ರಾರಂಭವಾದ ಐದು ದಿನಗಳಲ್ಲಿ ಸಾವಿಗೆ ಕಾರಣವಾಗುತ್ತದೆ.

ʻಪಿಎಎಂʼ ರೋಗನಿರ್ಣಯವು ಸವಾಲಿನದ್ದು. ಏಕೆಂದರೆ, ಮೊದಲನೆಯದಾಗಿ ಇದು ಅತ್ಯಂತ ವಿರಳವಾದುದು. ಎರಡನೆಯದ್ದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಮೆದುಳಿನ ಪೊರೆಗಳ ಉರಿಯೂತ(ಬ್ಯಾಕ್ಟೀರಿಯಾ ಮೆನಿಂಜೈಟಿಸ್) ರೋಗಲಕ್ಷಣಗಳೂ ಬಹುತೇಕ ಇದೇ ರೀತಿ ಇರುತ್ತವಾದ್ದರಿಂದ ಸೋಂಕು ಯಾವುದರಿಂದ ಎಂದು ಸುಲಭವಾಗಿ ಗುರುತಿಸುವುದು ಕಷ್ಟದ ಕೆಲಸ. ರೋಗನಿರ್ಣಯವನ್ನು ಸಾಮಾನ್ಯವಾಗಿ ಮೆದುಳುದ್ರವ (ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅಥವಾ ʻಸಿಎಸ್ಎಫ್ʼ) ಪರೀಕ್ಷೆಯ ಮೂಲಕ ದೃಢೀಕರಿಸಲಾಗುತ್ತದೆ, ಇದು ಅಮೀಬಾದ ಉಪಸ್ಥಿತಿಯನ್ನು ಬಹಿರಂಗಪಡಿಸಬಹುದು.

ಇದನ್ನೂ ಓದಿ- ಬೆಳಗೆದ್ದು ಟೀ ಜೊತೆ ಬ್ರೆಡ್‌ ತಿಂತೀರಾ? ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತೆ ಗೊತ್ತಾ?

ಚಿಕಿತ್ಸೆ ಮತ್ತು ರೋಗನಿರ್ಣಯ:
ಚಿಕಿತ್ಸೆಯಿಂದ ʻಪಿಎಎಂʼ ಪರಿಸ್ಥಿತಿಯ ಮೇಲೆ ಉಂಟಾಗುವ ಪರಿಣಾಮ ತುಂಬಾ ದುರ್ಬಲವಾಗಿರುತ್ತದೆ ಮತ್ತು ಸಾವಿನ ಪ್ರಮಾಣವು ಶೇ.97ಕ್ಕಿಂತ ಹೆಚ್ಚಾಗಿರುತ್ತದೆ. ಅದೇನೇ ಇದ್ದರೂ, ತ್ವರಿತ ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಇದಕ್ಕೆ ನೀಡುವ ಚಿಕಿತ್ಸೆಯು ಸಾಮಾನ್ಯವಾಗಿ ʻಆಂಫೊಟೆರಿಸಿನ್ ಬಿʼ ನಂತಹ ಶಿಲೀಂಧ್ರ ವಿರೋಧಿ ಔಷಧಗಳು ಮತ್ತು ʻಮಿಲ್ಟೆಫೋಸಿನ್ʼನಂತಹ ಇತರ ಔಷಧಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ, ಇದು ಅಮೀಬಾ ವಿರುದ್ಧ ಕೊಂಚ ಮಟ್ಟಿಗೆ ಪರಿಣಾಮವನ್ನು ತೋರುತ್ತದೆ. ರೋಗಿಗೆ ತೀವ್ರ ನಿಗಾ ಘಟಕದಲ್ಲಿ ಬೆಂಬಲಿತ ಆರೈಕೆಯೂ ಅತ್ಯಂತ ನಿರ್ಣಾಯಕವಾಗಿರುತ್ತದೆ.

ತಡೆಗಟ್ಟುವಿಕೆ: 
ಹೆಚ್ಚಿನ ಸಾವಿನ ಪ್ರಮಾಣ ಮತ್ತು ಸೀಮಿತ ಚಿಕಿತ್ಸೆಯ ಆಯ್ಕೆಗಳನ್ನು ಗಮನಿಸಿದರೆ, ಈ ಸೋಂಕಿನ ತಡೆಗಟ್ಟುವಿಕೆಯು ಅತ್ಯಗತ್ಯವಾಗಿದೆ. ಸೋಂಕು ತಡೆಗಟ್ಟಲು ಕೈಗೊಳ್ಳಬಹುದಾದ ಕೆಲವು ಪ್ರಮುಖ ಕ್ರಮಗಳು ಇಲ್ಲಿವೆ:
ಬೆಚ್ಚಗಿರುವ ಸಿಹಿನೀರಿನಲ್ಲಿ ಈಜುವುದನ್ನು ತಪ್ಪಿಸಿ: 
ಬೆಚ್ಚಗಿನ ಸಿಹಿನೀರಿನ ಜಲಮೂಲಗಳಲ್ಲಿ ಈಜುವುದನ್ನು ತಪ್ಪಿಸಿ, ಅದರಲ್ಲೂ ವಿಶೇಷವಾಗಿ ಅಮೀಬಾ ಹೆಚ್ಚು ಸಕ್ರಿಯವಾಗಿರುವ ಬಿಸಿ ವಾತಾವರಣದಲ್ಲಿ ಕಡ್ಡಾಯವಾಗಿ ಇದರಿಂದ ದೂರವಿರಿ.

ಮೂಗಿನ ಕ್ಲಿಪ್ಗಳನ್ನು ಬಳಸಿ: 
ಸಂಭಾವ್ಯ ಕಲುಷಿತ ನೀರಿನಲ್ಲಿ ಈಜುತ್ತಿದ್ದರೆ, ಮೂಗಿನ ಹಾದಿಗಳಿಗೆ ನೀರು ಪ್ರವೇಶಿಸದಂತೆ ತಡೆಯಲು ಮೂಗಿನ ಕ್ಲಿಪ್ಗಳನ್ನು ಬಳಸಿ.

ಹೂಳನ್ನು ಕಲಕಬೇಡಿ: 
ಈಜು ಅಥವಾ ಜಲಕ್ರೀಡೆಯಲ್ಲಿ ತೊಡಗಿದಾಗ, ಅಮೀಬಾ ವಾಸಿಸುವ ಸರೋವರಗಳು ಅಥವಾ ನದಿಗಳ ತಳಭಾಗದಲ್ಲಿರುವ ಹೂಳು ಕಲಕುವುದನ್ನು ತಪ್ಪಿಸಿ.

ಈಜುಕೊಳಗಳ ಸೂಕ್ತ ನಿರ್ವಹಣೆ:
|ಈಜುಕೊಳಗಳು ಮತ್ತು ಹಾಟ್ ಟಬ್ಗಳನ್ನು ಕ್ಲೋರಿನ್ ಬಳಸಿ ಸರಿಯಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಸೂಕ್ತವಾಗಿ ನಿರ್ವಹಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಜಲನೇತಿ ಕ್ರಿಯೆಗೆ ಸಂಸ್ಕರಿಸಿದ ನೀರು ಬಳಸಿ: 
ನೇತಿ ಮಡಕೆಗಳಂತಹ ಸಾಧನಗಳನ್ನು ಬಳಸುವಾಗ, ಮೂಗಿನ ಮರ‍್ಗಗಳಿಗೆ ಅಮೀಬಾ ಪ್ರವೇಶವನ್ನು ತಪ್ಪಿಸಲು ಸದಾ ಸಂಸ್ಕರಿಸಿದ ಅಥವಾ ಭಟ್ಟಿ ಇಳಿಸಿದ ನೀರನ್ನು ಬಳಸಿ.

ಸಾರ್ವಜನಿಕ ಜಾಗೃತಿ ಮತ್ತು ಅರಿವು: 
ʻನೈಗ್ಲೇರಿಯಾ ಫೌಲೆರಿʼ ಮತ್ತು ಅಮೀಬಿಕ್ ಮೆದುಳಿನ ಸೋಂಕಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಿರ್ಣಾಯಕವಾಗಿದೆ. ಶಿಕ್ಷಣ ಅಭಿಯಾನಗಳ ಮೂಲಕ ಅಮೀಬಾದ ಬೆಳವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಗಳು ಮತ್ತು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವತ್ತ ಗಮನ ಹರಿಸಬೇಕು. ಅಲ್ಲದೆ, ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ʻಪಿಎಎಂʼನ ರೋಗಲಕ್ಷಣಗಳನ್ನು ತಕ್ಷಣ ಗುರುತಿಸಲು ಆರೋಗ್ಯ ವೃತ್ತಿಪರರಿಗೆ ತರಬೇತಿ ನೀಡಬೇಕು.

ಕೊನೆಯದಾಗಿ, ʻನೈಗ್ಲೇರಿಯಾ ಫೌಲೆರಿʼಯಿಂದ ಉಂಟಾಗುವ ಮೆದುಳಿನ ಅಮೀಬಿಕ್ ಸೋಂಕುಗಳು ಅಪರೂಪವಾಗಿದ್ದರೂ, ಅವು ಸಾರ್ವತ್ರಿಕವಾಗಿ ಅಪಾಯಕಾರಿಯಾಗಿವೆ. ಸಾರ್ವಜನಿಕ ಜಾಗೃತಿ ಮತ್ತು ತಡೆಗಟ್ಟುವ ಕ್ರಮಗಳು ಸೋಂಕಿನ ಅಪಾಯವನ್ನು ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ. ಅಮೀಬಾ ಮೆದುಳನ್ನು ಹೇಗೆ ಪ್ರವೇಶಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ವ್ಯಕ್ತಿಗಳು ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರಶಾಸ್ತ್ರಜ್ಞರಾದ ಡಾ ಶಿವಾನಂದ ಪೈ ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News