ಈ ಸಮಸ್ಯೆಯಿಂದ ಭಾರತದಲ್ಲಿ ಪ್ರತಿ ವರ್ಷ10 ಲಕ್ಷ ಮಂದಿ ಸಾವು

ಪ್ರತಿವರ್ಷ 10 ಲಕ್ಷ ಕೋಟಿ ರೂ.ಗಳ ಆರ್ಥಿಕ ನಷ್ಟವೂ ಆಗುತ್ತಿದೆ.

Last Updated : Feb 12, 2020, 12:41 PM IST
ಈ ಸಮಸ್ಯೆಯಿಂದ ಭಾರತದಲ್ಲಿ ಪ್ರತಿ ವರ್ಷ10 ಲಕ್ಷ ಮಂದಿ ಸಾವು title=

ನವದೆಹಲಿ: ಈ ಸಮಸ್ಯೆ ಭಾರತದಲ್ಲಿ ಹೊಸದಲ್ಲ. ಈ ಸಮಸ್ಯೆಯಿಂದಾಗಿ, ಭಾರತದಲ್ಲಿ ಪ್ರತಿವರ್ಷ ಸುಮಾರು ಒಂದು ಮಿಲಿಯನ್ ಜನರು ಸಾಯುತ್ತಿದ್ದಾರೆ. ಈ ಸಮಸ್ಯೆಯ ಹೆಸರು ಮಾಲಿನ್ಯ. ಇತ್ತೀಚೆಗೆ ಅಂತಾರಾಷ್ಟ್ರೀಯ ಸಂಸ್ಥೆ ಗ್ರೀನ್‌ಪೀಸ್ ತನ್ನ ಹೊಸ ವರದಿಯಲ್ಲಿ ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಪ್ರತಿ ವರ್ಷ ಭಾರತದಲ್ಲಿ ಮಾಲಿನ್ಯದಿಂದಾಗಿ 10 ಲಕ್ಷ ಕೋಟಿ ರೂ. ನಷ್ಟವೂ ಸಂಭವಿಸುತ್ತಿದೆ.

ಮಾಲಿನ್ಯದಿಂದಾಗಿ ಮುಗ್ಧ ಮಕ್ಕಳು ಹೆಚ್ಚು ಬಲಿಯಾಗುತ್ತಾರೆ!
ಗ್ರೀನ್‌ಪೀಸ್‌ನ ಹಿರಿಯ ಪ್ರಚಾರಕ ಅವಿನಾಶ್ ಚಂಚಲ್ ಮಾತನಾಡಿ, ಭಾರತದ ವಿಷಕಾರಿ ಗಾಳಿಯು ಮುಗ್ಧ ಚಿಕ್ಕ ಮಕ್ಕಳಿಗೆ ಅತ್ಯಂತ ಮಾರಕವಾಗಿದೆ ಎಂದು ಸಾಬೀತಾಗಿದೆ. ಭಾರತದಲ್ಲಿ ಕಲುಷಿತ ಗಾಳಿಯಿಂದಾಗಿ 9.80 ಲಕ್ಷ ನವಜಾತ ಶಿಶುಗಳು ಅಕಾಲಿಕವಾಗಿ ಜನಿಸುತ್ತಿದ್ದಾರೆ. ಈ ಮಕ್ಕಳು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ. ಅಂತೆಯೇ, ಭಾರತದಾದ್ಯಂತ ಪ್ರತಿವರ್ಷ 3.50 ಲಕ್ಷ ಮಕ್ಕಳು ಆಸ್ತಮಾದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಒಟ್ಟು 12.85 ಲಕ್ಷ ಮಕ್ಕಳಿಗೆ ಆಸ್ತಮಾ ಇದೆ ಎಂದು ಅವಿನಾಶ್ ವಿವರಿಸಿದರು. ಈ ರೋಗಕ್ಕೆ ಮಾಲಿನ್ಯವೇ ಕಾರಣ ಎಂದವರು ವಿಷಾದ ವ್ಯಕ್ತಪಡಿಸಿದರು.

ಭಾರತಕ್ಕೆ ವಾರ್ಷಿಕವಾಗಿ 10 ಲಕ್ಷ ಕೋಟಿ ರೂ. ನಷ್ಟ:
ಗ್ರೀನ್‌ಪೀಸ್‌ನ ಈ ಇತ್ತೀಚಿನ ವರದಿಯ ಪ್ರಕಾರ, ಮಾಲಿನ್ಯದಿಂದಾಗಿ ಭಾರತವು ಪ್ರತಿವರ್ಷ ಸುಮಾರು 10 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ. ಅದರಂತೆ ಭಾರತ ತನ್ನ ಜಿಡಿಪಿಯ ಶೇಕಡಾ 5.4 ರಷ್ಟು ನಷ್ಟವನ್ನು ಅನುಭವಿಸುತ್ತಿದೆ. ದೇಶದಲ್ಲಿ ಇಂಧನದಿಂದಾಗಿ ವಿಷಕಾರಿ ಗಾಳಿ ಹರಡುವುದರಿಂದ ಪರಿಸರ ಮತ್ತು ಆರೋಗ್ಯ ಎರಡೂ ಹಾನಿಗೊಳಗಾಗುತ್ತಿದೆ ಎನ್ನಲಾಗಿದೆ.

ನಿಯಮಗಳನ್ನು ಕಡೆಗಣಿಸುವುದರಿಂದ ದೇಶದ ವಿದ್ಯುತ್ ಸ್ಥಾವರಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಅಲ್ಲದೆ, ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ಗಾಳಿಯನ್ನು ವಿಷಕಾರಿಯಾಗಿ ಮಾಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ವಾಹನಗಳ ಕಡಿಮೆ ಬಳಕೆಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಶದಲ್ಲಿ ಅಕಾಲಿಕ ಮರಣಕ್ಕೆ ಮಾಲಿನ್ಯ ಒಂದು ಪ್ರಮುಖ ಕಾರಣವಾಗಿದೆ. ಇದಲ್ಲದೆ ನಮ್ಮ ಪರಿಸರವನ್ನು ಶುಚಿಯಾಗಿ ಇಡದಿರುವುದು, ಗಿಡ ಮರಗಳನ್ನು ಬೆಳಸದೆ ಇರುವುದು ಹೀಗೆ ಪರಿಸರ ಮಾಲಿನ್ಯಕ್ಕೆ ಪ್ರತ್ಯಕ್ಷವಾಗಿಯೋ/ಪರೋಕ್ಷವಾಗಿಯೋ ನಾವೆಲ್ಲರೂ ಕಾರಣರಾಗಿದ್ದೇವೆ.

ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಾವು ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಜೀವನ ನೀಡುವುದು ಕಷ್ಟ. ಹಾಗಾಗಿ 'ಮನೆಗೊಂದು ಮರ, ಊರಿಗೊಂದು ವನ' ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ನಮ್ಮ ಕೈಲಾದ ಕೊಡುಗೆ ನೀಡುವ ಅಗತ್ಯವಿದೆ.

Trending News