ನವದೆಹಲಿ: ಸರಿಸುಮಾರು 21 ವರ್ಷಗಳ ಹಿಂದೆ ಅಂದರೆ 1998 ರಲ್ಲಿ ಗೂಗಲ್ ಸರ್ಚ್ ಇಂಜಿನ್ ಆರಂಭಗೊಂಡಿತ್ತು. ಮೊದಲು ಇಂಟರ್ನೆಟ್ ಮೂಲಕ ಜನರು ಮಾಹಿತಿಯನ್ನು ಕಲೆಹಾಕುತ್ತಿದ್ದರು. ಆದರೆ, ಇಂದು ಇಡೀ ಜಗತ್ತು ಇಂಟರ್ನೆಟ್ ಮೂಲಕ ನಿಮ್ಮ ಮಾಹಿತಿ ಕಲೆಹಾಕುತ್ತಿದೆ. ಅಂದರೆ, ವೈಯಕ್ತಿಕ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದು ಇಂಟರ್ನೆಟ್ ಗೆ ಗೊತ್ತು. ಒಟ್ಟಾರೆ ಹೇಳುವುದಾದರೆ ಇಂಟರ್ನೆಟ್ ನಮಗೆ ನಾವೇ ಹಿಡಿದುಕೊಂಡ ಕನ್ನಡಿಯಾಗಿದೆ. ಸದ್ಯ ಗೂಗಲ್ 2019ನೇ ಸಾಲಿನ ತನ್ನ ಟ್ರೆಂಡ್ಸ್ ಗಳನ್ನು ಜಾರಿಗೊಳಿಸಿದೆ.
ಈ ವರ್ಷದಲ್ಲಿ ಜನರು ಯಾವ ವಿಷಯದ ಕುರಿತು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂಬುದನ್ನು ನೀವು ಗೂಗಲ್ ಟ್ರೆಂಡ್ಸ್ ಬಳಸಿ ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯವನ್ನು ಜನರು ಇಂಟರ್ನೆಟ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಯಾವ ವ್ಯಕ್ತಿಯ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಯಾವ ಪ್ರಕ್ರಿಯೆ ಕುರಿತು ಹೆಚ್ಚು ಅರಿಯಲು ಪ್ರಯತ್ನಿಸಿದ್ದಾರೆ. ಯಾವ ಚಲನಚಿತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದಾರೆ ಹಾಗೂ ತಮ್ಮ ಹತ್ತಿರದಲ್ಲಿರುವ ಯಾವ ವಸ್ತುಗಳ ಕುರಿತು ಹೆಚ್ಚಿಗೆ ಶೋಧ ನಡೆಸಿದ್ದಾರೆ ಎಂಬುದನ್ನು ನೀವು ಇದರಿಂದ ತಿಳಿಯಬಹುದು. ಒಟ್ಟಾರೆ ಇಡೀ ವರ್ಷ ನಿಮ್ಮ ಮೆದುಳಿನಲ್ಲಿ ಏನು ನಡೆದಿದೆ ಎಂಬುದನ್ನು ಗೂಗಲ್ ತನ್ಮೂಲಕ ವಿಶ್ಲೇಷಿಸಿದೆ.
ಗೂಗಲ್ ಟ್ರೆಂಡ್ ಪ್ರಕಾರ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೊಳಗಾದ ಟಾಪ್ 5 ಟಾಪಿಕ್ ಗಳಲ್ಲಿ ಮೊದಲನೇ ಸ್ಥಾನದಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ಇದೆ. ಎರಡನೇ ಸ್ಥಾನದಲ್ಲಿ ಲೋಕಸಭೆ ಚುನವಾಣೆ, ಮೂರನೇ ಸ್ಥಾನದಲ್ಲಿ ಚಂದ್ರಯಾನ-2, ನಾಲ್ಕನೇ ಸ್ಥಾನದಲ್ಲಿ ಕಬೀರ್ ಸಿಂಗ್ ಚಲನಚಿತ್ರ ಹಾಗೂ ಐದನೇ ಸ್ಥಾನದಲ್ಲಿ ಹಾಲಿವುಡ್ ನ ಸೂಪರ್ ಹಿರೋ ಚಿತ್ರ ಅವೆಂಜರ್-ಎಂಡ್ ಗೇಮ್ ಇದೆ. ಇವುಗಳನ್ನು ಹೊರತುಪಡಿಸಿ ಆರ್ಟಿಕಲ್-370, NEET ಫಲಿತಾಂಶ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಳಂತಹ ವಿಷಯಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅತಿ ಹೆಚ್ಚು ಹುಡುಕಾಟಕ್ಕೊಳಗಾದ ವ್ಯಕ್ತಿಗಳ ಪಟ್ಟಿಯಲ್ಲಿ ವಾಯುದಾಳಿ ನಡೆಸಿದ ಮತ್ತು ಭಾರತೀಯ ವಾಯುಸೇನೆಯ ಫೈಟರ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೆಸರು ಮುಂಚೂಣಿಯಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಯಕಿ ಲತಾ ಮಂಗೇಶ್ಕರ್, ಮೂರನೇ ಸ್ಥಾನದಲ್ಲಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್, ನಾಲ್ಕನೇ ಸ್ಥಾನದಲ್ಲಿ ಸೂಪರ್-30 ಶಿಕ್ಷಣ ಸಂಸ್ಥೆಯ ಸಂಚಾಲಕ ಆನಂದ್ ಕುಮಾರ್ ಹಾಗೂ ಐದನೇ ಸ್ಥಾನದಲ್ಲಿ ನಟ ವಿಕಿ ಕೌಶಲ್ ಇದ್ದಾರೆ.
ಆರ್ಟಿಕಲ್ 370, ಎಕ್ಸಿಟ್ ಪೋಲ್, ಬ್ಲಾಕ್ ಹೊಲ್, ಹೌಡಿ ಮೋದಿ ಹಾಗೂ ಇ-ಸಿಗಾರೇಟ್ ಇವು ಅತಿ ಹೆಚ್ಚು ಸರ್ಚ್ ಗೆ ಒಳಗಾದ ವಿಷಯಗಳಾಗಿವೆ. ಇವಲ್ಲದೆ ಅಯೋಧ್ಯ ಪ್ರಕರಣ, ಆರ್ಟಿಕಲ್ 15, ಸರ್ಜಿಕಲ್ ಸ್ಟ್ರೈಕ್, NRC ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿವೆ.
ವಾರ್ತೆಗಳ ಕುರಿತು ಮಾತನಾಡುವುದಾದರೆ ಲೋಕಸಭೆ ಚುನಾವಣೆಗಳ ಫಲಿತಾಂಶದ ವಾರ್ತೆ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ. ಇದನ್ನು ಹೊರತುಪಡಿಸಿದರೆ ಚಂದ್ರಯಾನ್ -2, ಆರ್ಟಿಕಲ್-370, PM ಕಿಸಾನ್ ಯೋಜನೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಧಿಸಿದ ಸುದ್ದಿಗಳನ್ನು ಜನರು ಹೆಚ್ಚಾಗಿ ಸರ್ಚ್ ನಡೆಸಿದ್ದಾರೆ. ಚಿತ್ರಗಳ ಪಟ್ಟಿಯಲ್ಲಿ ಕಬೀರ್ ಸಿಂಗ್, ಅವೆಂಜರ್-ಎಂಡ್ ಗೇಮ್, ಜೋಕರ್, ಕ್ಯಾಪ್ಟನ್ ಮಾರ್ವೇಲ್ ಹಾಗೂ ಸೂಪರ್ 30 ಟಾಪ್ ಟ್ರೆಂಡ್ ನಲ್ಲಿ ಶಾಮೀಲಾಗಿವೆ.
ಒಟ್ಟಾರೆ ಹೇಳುವುದಾದರೆ 2019ರ ಭಾರತ ಕ್ರೀಡೆಯಲ್ಲಿ ಆಸಕ್ತಿ ತೋರಿದರೆ, ಹಾಲಿವುಡ್ ಚಿತ್ರಗಳನ್ನು ಸಹ ವಿಕ್ಷೀಸಲು ಬಯಸುತ್ತದೆ. ಭಾರತದ ಯುವಜನಾಂಗ ತಾಜಾ ಸುದ್ದಿಗಳನ್ನು ಸಹ ವಿಕ್ಷೀಸಲು ಬಯಸುತ್ತದೆ ಹಾಗೂ ಮತದಾನದ ಕುರಿತು ಮೊದಲಿಗಿಂತಲೂ ಹೆಚ್ಚಿಗೆ ಜಾಗರೂಕರಾಗಿದ್ದಾರೆ. ಹೆಚ್ಚಿನ ಯುವಕರು ಮತದಾನದ ಪ್ರಕ್ರಿಯೆ ಕುರಿತು ತಿಳಿಯಲು ಬಯಸುತ್ತಿದ್ದಾರೆ. 9 ವರ್ಷಗಳ ಹಿಂದೆ ಅಂದರೆ 2008ರಲ್ಲಿ ಭಾರತೀಯ ಯುವಕರು ತೂಕ ಹೇಗೆ ಕಡಿಮೆ ಮಾಡಬೇಕು, ಹಣ ಹೇಗೆ ಸಂಪಾದಿಸಬೇಕು, ಇಂಗ್ಲಿಷ್ ಹೇಗೆ ಕಲಿಯಬೇಕು ಇತ್ಯಾದಿ ವಿಷಯಗಳನ್ನು ಹೆಚ್ಚಾಗಿ ಸರ್ಚ್ ಮಾಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಜಾಗತಿಕ ಟ್ರೆಂಡ್ಸ್
2019ರ ಟ್ರೆಂಡ್ಸ್ ನ ಈ ಅಂಕಿ ಅಂಶಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಜನರು 2019ರಲ್ಲಿ ಯಾವ ವಿಷಯವನ್ನು ಹೆಚ್ಚಿಗೆ ಸರ್ಚ್ ಮಾಡಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. INDIA VS SOUTH AFRICA ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾದ ವಿಷಯಗಳಲ್ಲಿ ಮುಂಚೂಣಿಯಲ್ಲಿದೆ. ಎರಡನೇ ಸ್ಥಾನದಲ್ಲಿ ಕ್ಯಾಮರಾನ್ ಬಾಯ್ಸ್ ಹೆಸರಿದೆ. ಫೂಟ್ಬಾಲ್ ಚಾಂಪಿಯನ್ಶಿಪ್ ಕೊಪಾ ಅಮೇರಿಕ, ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸೀರಿಜ್, IPHONE 11 ಗಳಿಗೂ ಕೂಡ 2019ರಲ್ಲಿ ಜಾಗತಿಕವಾಗಿ ಜನರು ಹೆಚ್ಚು ಸರ್ಚ್ ಮಾಡಿದ್ದಾರೆ. ಅಂತರಾಷ್ಟ್ರೀಯ ಸುದ್ದಿಗಳ ಪಟ್ಟಿಯಲ್ಲಿ ಕೋಪಾ ಅಮೇರಿಕ, ಪ್ಯಾರಿಸ್ ಚರ್ಚ್ ಅಗ್ನಿ ದುರಂತ, NOTRE DAM, ICC ಕ್ರಿಕೆಟ್ ವರ್ಲ್ಡ್ ಕಪ್, ಡಾರೆನ್ ಚಂಡಮಾರುತ, ರಗ್ಬಿ ವರ್ಲ್ಡ್ ಕಪ್ ಶಾಮೀಲಾಗಿವೆ.
ಅಂತಾರಾಷ್ಟ್ರೀಯ ವ್ಯಕ್ತಿಗಳ ಪಟ್ಟಿಯಲ್ಲಿ ಅಮೇರಿಕಾದ ಫುಟ್ಬಾಲ್ ಆಟಗಾರ ಅಂಟೋನಿಯೋ ಬ್ರೌನ್ ಹೆಸರು ಹೆಚ್ಚಿಗೆ ಸರ್ಚ್ ಮಾಡಲಾಗಿದೆ. ಇವರನ್ನು ಹೊರತುಪಡಿಸಿ ಫುಟ್ಬಾಲ್ ಆಟಗಾರ ನೇಮರ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಯುಟ್ಯುಬರ್ ಜೇಮ್ಸ್ ಚಾರ್ಲ್ಸ್, ನಾಲ್ಕನೇ ಸ್ಥಾನದಲ್ಲಿ ಅಮೇರಿಕದ ಗಾಯಕ ಜಸ್ಸಿ ಸ್ಮೊಲ್ಲೆಟ್ ಹಾಗೂ ಐದನೇ ಸ್ಥಾನದಲ್ಲಿ ಹಾಸ್ಯ ಕಲಾವಿದ ಕೆವಿನ್ ಹಾರ್ಟ್ ಇದ್ದಾರೆ.