ಉಡುಪಿ: ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಂದು ಪರಾರಿಯಾಗಿದ್ದ ಸಮಿತ್ ಕುಮಾರ್ (32) ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದಿಂದ ರೈಲಿನಲ್ಲಿ ಕೇರಳಕ್ಕೆ ಹೊರಟಿದ್ದ ಮಾದಕ ವ್ಯಸನಿ ಸಮಿತ್ ಕುಮಾರ್ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದನು. ಅಲ್ಲಿ ಈತನನ್ನು ಸಂಶಯಾಸ್ಪದವಾಗಿ ಕಂಡ ರೈಲ್ವೇ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಮಣಿಪಾಲ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಘಾಜಿಯಾಬಾದ್ ಇಂದಿರಾಪುರಂನ ನಿವಾಸಿ ಸಮಿತ್ ಕುಮಾರ್ (32) ಎಂಬಾತ ಮಾದಕ ವ್ಯಸನದಿಂದಾಗಿ ಕಳೆದ ಜನವರಿಯಲ್ಲಿ ಕೆಲಸ ಕಳೆದುಕೊಂಡಿದ್ದನು.
ಕೆಲಸ ಕಳೆದುಕೊಂಡು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಸಮಿತ್ ಕುಮಾರ್ ಭಾನುವಾರ ತನ್ನ ಪತ್ನಿ ಆಶು ಬಾಲಾ(32), ಪುತ್ರ ಪರಮೇಶ್(5), ಅವಳಿ ಮಕ್ಕಳಾದ ಆಕೃತಿ(4) ಮತ್ತು ಅರು(4)ಗೆ ಪಾನೀಯದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಂದಿದ್ದನು. ಬಳಿಕ ತನ್ನ ಭಾಮೈದನಿಗೆ ಕರೆ ಮಾಡಿ ತನ್ನ ಹೆಂಡತಿ, ಮಕ್ಕಳನ್ನು ಕೊಂದಿದ್ದೇನೆ. ನಾನು ಸಾಯುತ್ತೇನೆ ಎಂದು ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದರು.