ಮಹಾರಾಷ್ಟ್ರದ ವರ್ಲಿ ಕ್ಷೇತ್ರದಿಂದ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ; ಆಸ್ತಿ ಎಷ್ಟಿದೆ ಗೊತ್ತಾ?

ಶಿವಸೇನೆ ಮುಖ್ಯಸ್ಥ ಹಾಗೂ ತಂದೆ ಉದ್ಧವ್ ಠಾಕ್ರೆ ಸೇರಿದಂತೆ ಅನೇಕ ಹಿರಿಯ ನಾಯಕರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಿ ಬಳಿಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. 

Last Updated : Oct 3, 2019, 03:40 PM IST
ಮಹಾರಾಷ್ಟ್ರದ ವರ್ಲಿ ಕ್ಷೇತ್ರದಿಂದ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಕೆ; ಆಸ್ತಿ ಎಷ್ಟಿದೆ ಗೊತ್ತಾ? title=

ಮುಂಬೈ: ಮಹಾರಾಷ್ಟ್ರದ ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರವಾದ ವರ್ಲಿ ಸ್ಥಾನಕ್ಕೆ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಗುರುವಾರ ನಾಮಪತ್ರ ಸಲ್ಲಿಸಿದರು. 

ಶಿವಸೇನೆ ಮುಖ್ಯಸ್ಥ ಹಾಗೂ ತಂದೆ ಉದ್ಧವ್ ಠಾಕ್ರೆ ಸೇರಿದಂತೆ ಅನೇಕ ಹಿರಿಯ ನಾಯಕರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಿ ಬಳಿಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ ಆಸ್ತಿ ಘೋಷಿಸಿದ ಆದಿತ್ಯ, ತಮ್ಮ ಹೆಸರಿನಲ್ಲಿ ಒಟ್ಟು 16.05 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಒಂದು ಬಿಎಂಡಬ್ಲ್ಯೂ ಕಾರನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಶಿವಸೇನೆ ಕುಡಿಗಳ ಸ್ಥಿರಾಸ್ತಿ 4.67 ಕೋಟಿ ರೂ. ಮತ್ತು 11.38 ಕೋಟಿ ರೂ. ಚರಾಸ್ತಿಗಳಲ್ಲಿ, ಆದಿತ್ಯ ಅವರ ಬ್ಯಾಂಕ್ ಠೇವಣಿ ಮೌಲ್ಯ 10.36 ಕೋಟಿ ರೂ. ಮತ್ತು 20.39 ಲಕ್ಷ ರೂ.ಗಳ ಬಾಂಡ್ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ. ಅಲ್ಲದೆ, ಆದಿತ್ಯ ವಿಶ್ವ ದರ್ಜೆಯ ಬಿಎಂಡಬ್ಲ್ಯು ಕಾರನ್ನು ಹೊಂದಿದ್ದು, ಇದರ ಮೌಲ್ಯ ಅಂದಾಜು 6.5 ಲಕ್ಷ ರೂ.ಗಳು.

ಬಿಎಂಸಿ ಎಂಜಿನಿಯರಿಂಗ್ ಹಬ್‌ನಲ್ಲಿರುವ ಚುನಾವಣಾ ಕಚೇರಿಗೆ ಆದಿತ್ಯ ಠಾಕ್ರೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಒಟ್ಟು 64.65 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಶಿವಸೇನೆ ಯುವ ಅಧ್ಯಕ್ಷ ಹೊಂದಿರುವ ಇತರ ಆಸ್ತಿ ಮೌಲ್ಯ 10.22 ಲಕ್ಷ ರೂ. ಎನ್ನಲಾಗಿದೆ. 

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಚುನಾವಣೆಯಲ್ಲಿ ಆದಿತ್ಯಾಗೆ ಮುಂಬೈ ಬೆಂಬಲ ನೀಡುತ್ತದೆ ಎಂಬ ಭರವಸೆಯಿದೆ. ಸಾಮಾಜಿಕ ಸೇವೆ ಮಾಡುವುದು ನಮ್ಮ ಕುಟುಂಬದ ಸಂಪ್ರದಾಯ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದು ಬೇಡವೆಂದು ನಿರ್ಧರಿಸಿದ್ದೆವು. ಆದರೆ, ಇದೀಗ ಸಮಯ ಬದಲಾಗಿದೆ. ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಆದಿತ್ಯ ಕೆಲಸ ಮಾಡುತ್ತಾರೆಂದು ನಾನು ಭರವಸೆ ನೀಡುತ್ತೇನೆಂದು ತಿಳಿಸಿದ್ದಾರೆ. 
 

Trending News