ವಿಜಯ್ ದಿವಸ್; ಹುತಾತ್ಮ ಯೋಧರಿಗೆ ಸೇನಾ ಮುಖ್ಯಸ್ಥರ ನಮನ

1971 ರ ಯುದ್ಧದಲ್ಲಿ ನಮ್ಮ ಸಶಸ್ತ್ರ ಪಡೆ ಸೃಷ್ಟಿಸಿದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Last Updated : Dec 16, 2019, 12:43 PM IST
ವಿಜಯ್ ದಿವಸ್; ಹುತಾತ್ಮ ಯೋಧರಿಗೆ ಸೇನಾ ಮುಖ್ಯಸ್ಥರ ನಮನ title=
Pic courtesy: ANI

ನವದೆಹಲಿ: ತಾಯ್ನಾಡಿಗೆ ಸೇವೆ ಸಲ್ಲಿಸಿ ಮಡಿದ ಯೋಧರಿಗೆ ವಿಜಯ್ ದಿವಸ್ ಸಂದರ್ಭದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಸೋಮವಾರ ರಾಷ್ಟ್ರೀಯ ಯುದ್ಧ ಸ್ಮಾರಕ(National War Memorial)ದಲ್ಲಿ ಗೌರವ ಸಲ್ಲಿಸಿದರು. ಕೇಂದ್ರ ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

"ವಿಜಯ್ ದಿವಸ್ ಸಂದರ್ಭದಲ್ಲಿ, ತಾಯ್ನಾಡಿಗಾಗಿ ಸೇವೆ ಸಲ್ಲಿಸಿ ಮಡಿದ ಸಶಸ್ತ್ರ ಪಡೆಗಳ ಧೀರ ಸೈನಿಕರು, ನಾವಿಕರು ಮತ್ತು ವಾಯುಪಡೆಯ ಸೈನಿಕರಿಗೆ ನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು. ನಾನು ಎಲ್ಲ ಹುತಾತ್ಮರಿಗೆ ನಮಸ್ಕರಿಸುತ್ತೇನೆ. ಜೈ ಹಿಂದ್," ಎಂದು ಸಚಿವ ಶ್ರೀಪಾದ್ ನಾಯಕ್ ಟ್ವೀಟ್ ಮಾಡಿದ್ದಾರೆ.

ವಿಜಯ್ ದಿವಸ್ ಅಂಗವಾಗಿ ಭಾರತೀಯ ಸೈನಿಕರ ಧೈರ್ಯ, ಸಾಹಸವನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ(Narendra Modi), "ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯಕ್ಕೆ ನಾನು ಗೌರವ ಸಲ್ಲಿಸುತ್ತೇನೆ. 1971 ರ ಯುದ್ಧದಲ್ಲಿ ನಮ್ಮ ಸಶಸ್ತ್ರ ಪಡೆ ಸೃಷ್ಟಿಸಿದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ" ಎಂದು ಮೋದಿ ಟ್ವಿಟ್ಟರ್ನಲ್ಲಿ ಹೇಳಿದರು.

1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. ಅದು ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು.
 

Trending News