ನವದೆಹಲಿ: ಪಶ್ಚಿಮ ಬಂಗಾಳದ ಪೂರ್ವ ಮಿದ್ನಾಪೋರ್ ಜಿಲ್ಲೆಯ ರೂಪ್ನಾರಾಯಣ್ ನದಿಯಲ್ಲಿ ಸುಮಾರು 50-60 ಪ್ರಯಾಣಿಕರಿದ್ದ ದೋಣಿ ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.
ಘಟನೆಯಲ್ಲಿ ಹಲವರು ನೀರಿನಲ್ಲಿ ಮುಳುಗಿರುವ ಆತಂಕ ವ್ಯಕ್ತವಾಗಿದೆ. ಈಗಾಗಲೇ ಮಹಿಷಾಡೋಲ್ ಮತ್ತು ತಮ್ಲುಕ್ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಸುಮಾರು 22-24 ಜನರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವವರ ಶೋಧ ಕಾರ್ಯ ಮುಂದುವರೆದಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ದೋಣಿ ಮೊಗುಚಿ ಹಲವರು ಸಾವನ್ನಪ್ಪಿದ ಎರಡು ವಾರಗಳ ಬಳಿಕ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 13ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ 'ಗಣಪತಿ ವಿಸರ್ಜನೆ' ವೇಳೆಯಲ್ಲಿ ನಡೆದ ದೋಣಿ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದರು.