ಪ್ರಧಾನಿ ಮೋದಿಗೆ 36 ಬಾರಿ ಪತ್ರ ಬರೆದ ಬಾಲಕ! ಕಾರಣ ಏನ್ ಗೊತ್ತಾ?

ಉತ್ತರ ಪ್ರದೇಶ ಷೇರು ವಿನಿಮಯ ಕೇಂದ್ರದಲ್ಲಿ ಉದ್ಯೋಗಿಯಾಗಿ ಕೆಲಸ ಕಳೆದುಕೊಂಡಿದ್ದ ತನ್ನ ತಂದೆಯ ಮರುನೇಮಕಕ್ಕೆ ಮನವಿ ಮಾಡಿ ಈ ಬಾಲಕ 36 ಪತ್ರಗಳನ್ನು ಬರೆದಿದ್ದರೂ ಸಹ ಯಾವುದೇ ಉತ್ತರ ದೊರೆತಿರಲಿಲ್ಲ. ಈ ಬೆನ್ನಲ್ಲೇ 37ನೇ ಪತ್ರ ಬರೆದಿದ್ದಾನೆ.  

Updated: Jun 8, 2019 , 04:02 PM IST
ಪ್ರಧಾನಿ ಮೋದಿಗೆ 36 ಬಾರಿ ಪತ್ರ ಬರೆದ ಬಾಲಕ! ಕಾರಣ ಏನ್ ಗೊತ್ತಾ?

ನವದೆಹಲಿ: 13 ವರ್ಷದ ಬಾಲಕನೊಬ್ಬ ತನ್ನ ಭವಿಷ್ಯದೊಂದಿಗೆ ತನ್ನ ತಂದೆಯ ಭವಿಷ್ಯವನ್ನೂ ರೂಪಿಸಲು ಮುಂದಾಗಿದ್ದಾನೆ. ತನ್ನ ತಂದೆ ಕಳೆದುಕೊಂಡ ಕೆಲಸವನ್ನು ಮತ್ತೆ ಕೊಡಿಸಲು ಪ್ರಧಾನಿ ನರೇಂದ್ರ ಮೋದಿಗೆ 36 ಪತ್ರಗಳನ್ನು ಬರೆದಿದ್ದಾನೆ.

13ನೇ ವಯಸ್ಸಿನ ಸಾರ್ಥಕ್ ತ್ರಿಪಾಠಿ ಎಂಬಾತನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ತನ್ನ ತಂದೆ ಸತ್ಯಜಿತ್ ವಿಜಯ್ ತ್ರಿಪಾಠಿ ಅವರನ್ನು ನೌಕರಿಗೆ ಮರು ನೇಮಕ ಮಾಡಿಕೊಳ್ಳಲು ಸಹಾಯ ಮಾಡುವಂತೆ ಕೋರಿ 37 ಬಾರಿ ಪತ್ರ ಬರೆದ ಬಾಲಕ!

ಉತ್ತರ ಪ್ರದೇಶ ಷೇರು ವಿನಿಮಯ ಕೇಂದ್ರದಲ್ಲಿ ಉದ್ಯೋಗಿಯಾಗಿ ಕೆಲಸ ಕಳೆದುಕೊಂಡಿದ್ದ ತನ್ನ ತಂದೆಯ ಮರುನೇಮಕಕ್ಕೆ ಮನವಿ ಮಾಡಿ ಈ ಬಾಲಕ 36 ಪತ್ರಗಳನ್ನು ಬರೆದಿದ್ದರೂ ಸಹ ಯಾವುದೇ ಉತ್ತರ ದೊರೆತಿರಲಿಲ್ಲ. ಈ ಬೆನ್ನಲ್ಲೇ 37ನೇ ಪತ್ರ ಬರೆದಿದ್ದಾನೆ.

"ಮೋದಿ ಬಾಬಾ ಜೀ, ಯುಪಿಎಸ್​ಇನಿಂದ ಉದ್ಯೋಗ ಕಳೆದುಕೊಂಡ ನಮ್ಮ ತಂದೆಗೆ ಸಹಾಯ ಮಾಡುವಂತೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನಿಮಗೆ ಪತ್ರ ಬರೆಯುತ್ತಿದ್ದುದನ್ನು ಅರಿತ ಕೆಲವರು ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇಡೀ ಕುಟುಂಬವನ್ನು ಸಾಯಿಸುವುದಾಗಿ ಹೆದರಿಸುತ್ತಿದ್ದಾರೆ" ಎಂದು ಸಮಸ್ಯೆಗಳನ್ನು ಎಳೆಎಳೆಯಾಗಿ ಪತ್ರದಲ್ಲಿ ಬರೆದಿರುವ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಸಾರ್ಥಕ್, ಎರಡನೇ ಬಾರಿಗೆ ಪ್ರಧಾನಿಯಾಗಿರುವ ಮೋದಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾನೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

2016ರಿಂದಲೂ ಪ್ರಧಾನಿ ಮೋದಿಗೆ ಪತ್ರಗಳನ್ನು ಬರೆಯುತ್ತಿರುವ ಈ ಬಾಲಕ, ಮನೆಯ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾನೆ. ಅಲ್ಲದೆ, ತನ್ನ ತಂದೆಯೊಂದಿಗೆ ಯಾರೆಲ್ಲಾ ತಪ್ಪಾಗಿ ನಡೆದುಕೊಳ್ಳುತ್ತಿದ್ದರೋ ಅವರೆಲ್ಲರಿಗೂ ಶಿಕ್ಷೆಯಾಗಬೇಕು ಎಂದೂ ಸಹ ಪತ್ರಗಳಲ್ಲಿ ಒತ್ತಾಯಿಸಿದ್ದಾನೆ.