CBIvsCBI: ಅಲೋಕ್ ವರ್ಮಾರನ್ನು ಮತ್ತೆ ಸಿಬಿಐ ನಿರ್ದೇಶಕರಾಗಿ ಮುಂದುವರಿಸಿ: ಸುಪ್ರೀಂ ತೀರ್ಪು

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಜೆ, ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ರಿಂದ ತೀರ್ಪು; ಕರ್ತವ್ಯಕ್ಕೆ ಹಿಂದಿರುಗಲಿರುವ ಅಲೋಕ್ ವರ್ಮಾ

Last Updated : Jan 8, 2019, 11:45 AM IST
CBIvsCBI: ಅಲೋಕ್ ವರ್ಮಾರನ್ನು ಮತ್ತೆ ಸಿಬಿಐ ನಿರ್ದೇಶಕರಾಗಿ ಮುಂದುವರಿಸಿ: ಸುಪ್ರೀಂ ತೀರ್ಪು title=
File Image

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಮತ್ತೆ ಸಿಬಿಐ ನಿರ್ದೇಶಕರಾಗಿ ಮುಂದುವರಿಸುವಂತೆ ಸೂಚಿಸಿ ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ‌

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಜೆಯಲ್ಲಿದ್ದ ಕಾರಣ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ರಿಂದ ತೀರ್ಪು ಪ್ರಕಟವಾಗಿದ್ದು, ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ ಕೇಂದ್ರ ಸರ್ಕಾರದ ಆದೇಶ ತಪ್ಪು ಎಂದು ನ್ಯಾಯಾಲಯ ತಿಳಿಸಿದೆ. ಅಲೋಕ್ ವರ್ಮಾರನ್ನು ಹುದ್ದೆಯಿಂದ ಕೆಳಗಿಳಿಸುವ ಮುನ್ನ ಸಿಜೆಐ, ಪ್ರಧಾನಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಕೇಂದ್ರ ಚರ್ಚೆ ನಡೆಸಬೇಕಿತ್ತು ಎಂದು ಹೇಳಿರುವ ನ್ಯಾಯಾಲಯ, ಕೇಂದ್ರ ಸರ್ಕಾರದ ಆದೇಶವನ್ನು ತಿರಸ್ಕರಿಸಿ ಅಲೋಕ್ ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿ ಮುಂದುವರಿಯಬಹುದು. ಆದರೆ ಸದ್ಯಕ್ಕೆ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ.

ಹಿಂದಿನ, ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಸಿಬಿಐನ ಇಬ್ಬರು ಅಧಿಕಾರಿಗಳ ನಡುವಿನ ಸಂಘರ್ಷ ರಾತ್ರೋರಾತ್ರಿ ಉದ್ಭವಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಪ್ರಶ್ನಿಸಿತ್ತು. ಜುಲೈ ನಂತರ ಈ ಸಂಘರ್ಷ ನಡೆಯುತ್ತಿದ್ದಲ್ಲಿ ಅಲೋಕ್ ವರ್ಮಾ ಅವರನ್ನು ತೆಗೆಯುವ ಮೊದಲು ಆಯ್ಕೆ ಸಮಿತಿಯನ್ನು ಏಕೆ ಪರಿಗಣಿಸಲಿಲ್ಲ? ಅಲೋಕ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ಮೊದಲು ಆಯ್ಕೆ ಸಮಿತಿಯೊಂದಿಗೆ ಮಾತನಾಡಲು ಇರುವ ಸಮಸ್ಯೆಯೇನು? ಅಕ್ಟೋಬರ್ 23 ರಂದು ರಾತ್ರೋ ರಾತ್ರಿ ಈ ನಿರ್ಧಾರ ಕೈಗೊಳ್ಳಲು ಕಾರಣವೇನು? ಹೀಗೆ ಪ್ರಶ್ನೆಗಳ ಸುರಿಮಳೆ ಗೈದಿತ್ತು.

ಏನಿದು ಪ್ರಕರಣ:

ಹಠಾತ್ ಬೆಳವಣಿಗೆಯಲ್ಲಿ ಅಕ್ಟೋಬರ್ 23ರಂದು ರಾತ್ರೋರಾತ್ರಿ ಕೇಂದ್ರ ಸರ್ಕಾರವು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ರಜೆಯಲ್ಲಿ ತೆರಳುವಂತೆ ಅದೇಶಿಸಿತ್ತು. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿ ರಾಕೇಶ್ ಅಸ್ತಾನಾ ಈ ಇಬ್ಬರು ಮುಖ್ಯ ಅಧಿಕಾರಿಗಳ ಹಗ್ಗ-ಜಗ್ಗಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಇತಿಹಾದಲ್ಲೇ ಮೊದಲ ಬಾರಿಗೆ ಎನ್ನುವ ಹಾಗೆ ಅತ್ಯುನ್ನತಾ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ರಜೆ ನೀಡಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ನಾಗೇಶ್ವರ್​ ರಾವ್​ ಅವರನ್ನು ಸಿಬಿಐ ನಿರ್ದೇಶಕರಾಗಿ ಅಧಿಕಾರವಹಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮನ್ನು ರಾತ್ರೋರಾತ್ರಿ ವರ್ಗ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ‌ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.‌  ಇನ್ನೊಬ್ಬ ನಿರ್ದೇಶಕ ರಾಕೇಶ್ ಅಸ್ತಾನಾ ಕೂಟ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅಲೋಕ್ ವರ್ಮಾ ರಫೇಲ್ ಡೀಲ್ ವಿಚಾರಣೆಗೆ ಮುಂದಾಗಿದ್ದರಿಂದಲೇ ಅವರನ್ನು ರಾತ್ರೋರಾತ್ರಿ ವರ್ಗಾ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಂದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಲಂಚ ಸ್ವೀಕರಿಸಿದ್ದರು ಎಂದು ನಿರ್ದೇಶಕ ಅಲೋಕ್ ವರ್ಮಾ ದೂರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶ ನ್ಯಾ.ರಂಜನ್ ಗೊಗೋಯ್ ಅವರ ಪೀಠ, ಡಿ.8ಕ್ಕೆ ತೀರ್ಪು ಕಾಯ್ದಿರಿಸಿತ್ತು. 

 

Trending News