ಹೈದರಾಬಾದ್ : ಇದೇ ಡಿಸೆಂಬರ್ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 32 ವರ್ಷದ ತೃತೀಯಲಿಂಗಿ ಮಹಿಳಾ ಕಾರ್ಯಕರ್ತೆ ಮಂಗಳವಾರದಿಂದ ನಾಪತ್ತೆಯಾಗಿದ್ದು, ಯಾರಾದರೂ ಅಪಹರಣ ಮಾಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಸಿಪಿಎಂ ನೇತೃತ್ವದ ಬಹುಜನ್ ಎಡ ರಂಗ ಅಥವಾ ಬಿಎಲ್‌ಎಫ್ ನ ಟಿಕೆಟ್‌ನಿಂದ ನಗರದ ಗೋಶಮಹಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಎಂ.ಚಂದ್ರಮುಖಿ ಎಂಬ ಲಿಂಗಾಂತರಿ ಮಹಿಳಾ ಕಾರ್ಯಕರ್ತೆ ಮಂಗಳವಾರ ತನ್ನ ಮನೆಯಿಂದ ನಾಪತ್ತೆಯಾಗಿದ್ದಾಳೆ. ಹಿರಿಯ ಕಾಂಗ್ರೆಸ್ ಮುಖಂಡ ಮುಖೇಶ್ ಗೌಡ್ ಮತ್ತು ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ಅವರ ವಿರುದ್ಧ ಸ್ಪರ್ಧಿಸಿದ್ದಾರೆ.
ಚಂದ್ರಮುಖಿ ಪರವಾಗಿ ಚುನಾವಣಾ ಪ್ರಚಾರ ಮಾಡಲು ತೃತೀಯಲಿಂಗಿ ಸಮುದಾಯದ ಸ್ನೇಹಿತರು ಆಗಮಿಸಿದ್ದರು. ಆದರೆ ಈಗ ಆಕೆ ನಾಪತ್ತೆಯಾಗಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ಸಂಬಂಧ ಬಂಜಾರಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, "ಆಕೆ ಕಣ್ಮರೆಯಾಗಿರುವುಡು ಮತ್ತು ಇದರಿಂದ ಆಕೆಯ ತಾಯಿ ತೀವ್ರ ನೊಂದಿದ್ದಾರೆ. ಆಕೆಯನ್ನು ಅಪಹರಣ ಮಾಡಿರಬಹುದೇ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಲಾಗಿದೆ ಎಂದು ಬಜಾರಾ ಹಿಲ್ಸ್ ಪೋಲಿಸ್ ಇನ್ಸ್ ಪೆಕ್ಟರ್ ಆರ್.ಗೋವಿಂದ ರೆಡ್ಡಿ ತಿಳಿಸಿದ್ದಾರೆ.
'ತೆಲಂಗಾಣ ಹಿಜ್ರಾ ಇಂಟರ್ ಸೆಕ್ಸ್ ಟ್ರಾನ್ಸ್ಜೆಂಡರ್ ಸಮಿತಿಯ' ಕಾರ್ಯಕರ್ತರಾಗಿ ಚಂದ್ರಮುಖಿ ಟ್ರಾನ್ಸ್ಜೆಂಡರ್ ಮತ್ತು ಹಿಜ್ರಾ ಸಮುದಾಯದ ಸದಸ್ಯರ ಮೇಲೆ ನಡೆದ ದೌರ್ಜನ್ಯವನ್ನು ಪ್ರತಿಭಟಿಸಿದ್ದರು. ಅಲ್ಲದೆ, ತೃತೀಯಲಿಂಗಿ ಜನರ ಸ್ವಯಂ ಗೌರವವನ್ನು ಎತ್ತಿಹಿಡಿಯುವ ಅನೇಕ ರ್ಯಾಲಿಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ನಿರಂತರವಾಗಿ ಧ್ವನಿಯೆತ್ತಿದ್ದರು. ಅಷ್ಟೇ ಅಲ್ಲದೆ, ತನ್ನ ಸಮುದಾಯದ ಅಭಿವೃದ್ಧಿ ಮತ್ತು ಸಹಾಯ ಮಾಡುವ ಉದ್ದೇಶದಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.