ನವದೆಹಲಿ: ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ, ಇರುವ ಕಡೆ ಇರಲೂ ಆಗದೆ ತವರೂರಿಗೆ ಹೋಗಲೂ ಆಗದೆ ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡಲು ಕಾಂಗ್ರೆಸ್ ಸಹಾಯ ಹಸ್ತ ಚಾಚಿದೆ.
ಲಾಕ್‌ಡೌನ್ ಶುರುವಾದಾಗಿನಿಂದ ಕೆಲಸವಿಲ್ಲದೆ, ತಿನ್ನಲೂ ಆಹಾರವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ ವಲಸೆ ಕಾರ್ಮಿಕರು ಪಡಬಾರದ ಕಷ್ಟ ಪಡುತ್ತಿರುವಾಗ ಅವರವರ ಊರಿಗೆ ಕಳುಹಿಸಿಕೊಡಲು ವಿಶೇಷ ರೈಲುಗಳನ್ನು ಬಿಡಲಾಗಿದೆ. ಆದರೆ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರ ತುಂಬಲು ರೈಲ್ವೆ ಇಲಾಖೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಿದ್ದರಿಲ್ಲ. ಈ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿ ಬಂದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಹಲವು ವಿನಾಯಿತಿಗಳ ನಡುವೆ ಮೇ 17ರವರೆಗೆ ನಿಷೇಧಾಜ್ಞೆ ಮುಂದುವರಿಕೆ
ಇದೀಗ ಕಾಂಗ್ರೆಸ್ ಪಕ್ಷ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರವನ್ನು ತುಂಬಲು ಮುಂದೆ ಬಂದಿದೆ. ದೇಶಾದ್ಯಂತ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡಲು ಸಹಾಯ ಮಾಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಘಟಕಗಳಿಗೆ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರವನ್ನು ಪಕ್ಷದ ವತಿಯಿಂದ ಭರಿಸಲು ಸೂಚಿಸಿದ್ದಾರೆ.
ಇಷ್ಟು ಮಾತ್ರವಲ್ಲ, ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. 'ನಿಮಗೆ ವಿವಿಧ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವುದಕ್ಕಾಗಿ ಉಚಿತವಾಗಿ ವಿಮಾನಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಆದರೆ ಬದುಕುವುದೇ ದುಸ್ತರವಾಗಿರುವ ವಲಸೆ ಕಾರ್ಮಿಕರಿಗೆ ಮಾತ್ರ ಏಕೆ ಉಚಿತ ಪ್ರಯಾಣ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ರೈಲ್ವೆ ಶುಲ್ಕ ವಿಧಿಸಬೇಡಿ : ಕೇಂದ್ರಕ್ಕೆ ಮಹಾರಾಷ್ಟ್ರ ಸಿಎಂ ಮನವಿ
ಕೂಡಲೇ ವಲಸೆ ಕಾರ್ಮಿಕರನ್ನು ರೈಲಿನಲ್ಲಿ ಉಚಿತವಾಗಿ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು. ಇಂಥ ಪರಿಸ್ಥಿತಿಯಲ್ಲಿ ಬಡ ವಲಸಿಗರಿಂದ ಪ್ರಯಾಣ ದರ ಕೇಳುವುದು ಸರಿಯಲ್ಲ. ಇದು ಸರ್ಕಾರದ ಕರ್ತವ್ಯ. ವಲಸೆ ಕಾರ್ಮಿಕರ ಪ್ರಯಾಣದರವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ:
ಇನ್ನೊಂದೆಡೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಕೂಡ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲ್ವೆ ಇಲಾಖೆ ಪಿಎಂ ಕೇರ್ ಖಾತೆಗೆ 151 ಕೋಟಿ ರೂಪಾಯಿ ನೀಡಿದೆ. ಆದರೀಗ ಬಡ ವಲಸೆ ಕಾರ್ಮಿಕರು ಅವರವರೂರಿಗೆ ತೆರಳು ಪ್ರಯಾಣದ ದರ ಕೇಳುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಈ ಒಗಟು ಬಿಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಹುತೇಕ ರಾಜ್ಯಗಳು ವಲಸಿಗರನ್ನು ಊರಿಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದವು. ರಾಜ್ಯ ಸರ್ಕಾರಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಲಾಕ್‌ಡೌನ್ (Lockdown) ನಿಯಮಗಳನ್ನು ಸಡಿಲಿಸಿತು. ಅಲ್ಲದೆ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿತು. ಆದರೆ ರೈಲ್ವೆ ಬೋರ್ಡ್ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರವನ್ನು ರಾಜ್ಯ ಸರ್ಕಾರಗಳೆ ತುಂಬಬೇಕೆಂದು ಹೇಳಿತು. ರಾಜ್ಯ ಸರ್ಕಾರಗಳು ರೈಲ್ವೆ ಇಲಾಖೆಯೇ ಭರಿಸಬೇಕೆಂದು ಹೇಳತೊಡಗಿದವು. ಪರಿಣಾಮವಾಗಿವ ವಲಸೆ ಕಾರ್ಮಿಕರ ಪರಿಸ್ಥಿತಿ ಇನ್ನಷ್ಟು ಕಗ್ಗಂಟಾಗಿತ್ತು. ಈಗ ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ವಲಸೆ ಕಾರ್ಮಿಕರನ್ನು ಅವರವರೂರಿಗೆ ಕಳುಹಿಸಿಕೊಡಲು ಪಕ್ಷವೇ ಹಣ ನೀಡಲಿದೆ ಎಂದು ಹೇಳಿದೆ. ಇದರಿಂದ ವಲಸೆ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.