ದೆಹಲಿಯ AIIMS ನಲ್ಲಿ Covaxin ಲಸಿಕೆಯ ಮಾನವ ಪರೀಕ್ಷೆ ಆರಂಭ, 30 ವರ್ಷದ ವ್ಯಕ್ತಿಗೆ ಮೊದಲ ಡೋಸ್

ಲಸಿಕೆಯ ಮೊದಲ ಡೋಸ್ ನೀಡಿರುವ ವ್ಯಕ್ತಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಆಸ್ಪತ್ರೆಯಲ್ಲಿಯೇ ಇರಿಸಲಿದ್ದು, ಆತನ ಮಳೆ ನಿರಂತರ ನಿಗಾವಹಿಸಲಿದೆ ಎನ್ನಲಾಗಿದೆ.

Last Updated : Jul 24, 2020, 09:34 PM IST
ದೆಹಲಿಯ AIIMS ನಲ್ಲಿ Covaxin ಲಸಿಕೆಯ ಮಾನವ ಪರೀಕ್ಷೆ ಆರಂಭ, 30 ವರ್ಷದ ವ್ಯಕ್ತಿಗೆ ಮೊದಲ ಡೋಸ್  title=

ನವದೆಹಲಿ: ಕರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದರ ನಡುವೆ, ವಿಶ್ವಾದ್ಯಂತ ತಜ್ಞರು ಕರೋನಾ ವೈರಸ್ ಲಸಿಕೆ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಕೋವಿಡ್ -19 ಲಸಿಕೆ ಯಾವಾಗ ಬರಲಿದೆ ಮತ್ತು ಈ ಬಿಕ್ಕಟ್ಟಿನಿಂದ ಯಾವಾಗ ಪಾರಾಗಬಹುದು ಎಂಬುದಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಏತನ್ಮಧ್ಯೆ, ಭಾರತವೂ ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಕರೋನಾ ಲಸಿಕೆಯ ಕುರಿತು ಒಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ದೆಹಲಿಯ AIIMS ನಲ್ಲಿ ಭಾರತದಲ್ಲಿ ತಯಾರಾದ ಕೋವಾಕ್ಸಿನ್ ಲಸಿಕೆಯ ಮಾನವ ಪ್ರಯೋಗ ಆರಂಭಗೊಂಡಿದೆ.

ದೆಹಲಿಯ AIIMS ನಲ್ಲಿ ಕೊರೊನಾ ವೈರಸ್ ನ ಮೊದಲ ಡೋಸ್ ಅನ್ನು 30 ವರ್ಷದ ವ್ಯಕ್ತಿಯೋರ್ವನಿಗೆ ನೀಡಲಾಗಿದೆ. ವರದಿಗಳ ಪ್ರಕಾರ, ಯಾವ ವ್ಯಕ್ತಿಯ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆಯೋ ಆ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿಯೇ ಇರಿಸಿ ಆತನ ಮೇಲೆ ನಿಗಾ ವಹಿಸಲು ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ. ಈ ಲಸಿಕೆ ಆ ವ್ಯಕ್ತಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿದೆ ಎಂಬುದನ್ನು ಅಧ್ಯಯನ ನಡೆಸಲಾಗುವುದು ಎನ್ನಲಾಗಿದೆ.

ದೇಶಾದ್ಯಂತ ಒಟ್ಟು 375 ಜನರನ್ನು ಕೊವ್ಯಾಕ್ಸಿನ್ ಟ್ರಯಲ್ ಗಾಗಿ ಆಯ್ಕೆ ಮಾಡಲಾಗಿದೆ. ಇವರಲ್ಲಿ ಒಟ್ಟು 100 ಜನರಿಗೆ ದೆಹಲಿಯ ಎಮ್ಸ್ ನಲ್ಲಿ ಈ ವ್ಯಾಕ್ಸಿನ್ ನ ಡೋಸ್ ನೀಡಲಾಗುತ್ತಿದೆ. ಉಳಿದ ಜನರಿಗೆ ದೇಶದ ವಿವಿಧ ಮೆಡಿಕಲ್ ಸಂಸ್ಥೆಗಳಲ್ಲಿ ಈ ದೇಸೀಯ ವೈರಸ್ ನ ಡೋಸ್ ನೀಡಲಾಗುತ್ತಿದೆ. 

ಮೂಲಗಳಿಂದ ದೊರೆತ ಮಾಹಿತಿಗಳ ಪ್ರಕಾರ ಕೊವ್ಯಾಕ್ಸಿನ್ ಟ್ರಯಲ್ ಒಟ್ಟು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ 18 ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲೆ ನಡೆಯಲಿದ್ದರೆ. ಎರಡನೇ ಹಂತದಲ್ಲಿ 65 ವರ್ಷಗಳವರೆಗಿನ ವ್ಯಕ್ತಿಗಳಿಗೆ ಈ ಲಸಿಕೆ ನೀಡಲಾಗುತ್ತಿದೆ.

ವಿಶ್ವಾದ್ಯಂತ ಕೊರೊನಾ ವೈರಸ್ ಲಸಿಕೆಯ ಕುರಿತು ಸಂಶೋಧನೆಗಳು ಮುಂದುವರೆದಿವೆ. ಇದಕ್ಕೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, ಪ್ರಸ್ತುತ ಸುಮಾರು 15೦ ವ್ಯಾಕ್ಸಿನ್ ಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಎಂದಿದ್ದು, ಇವುಗಳಲ್ಲಿ 10 ವ್ಯಾಕ್ಸಿನ್ ಗಳು ಅಡ್ವಾನ್ಸ್ಡ್ ಹಂತಕ್ಕೆ ತಲುಪಿದ್ದು, ವೈರಸ್ ಗೆ ಶೀಘ್ರದಲ್ಲಿಯೇ ಲಸಿಕೆ ಸಿದ್ಧಗೊಳ್ಳಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.

Trending News