ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಹಲವೆಡೆ ಪಾದರಸ 45 ಡಿಗ್ರಿ ದಾಟಿದೆ. ಬಿಸಿಲಿನ ತಾಪದಿಂದಾಗಿ ವಿದ್ಯುತ್ ಬೇಡಿಕೆಯೂ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಆದರೆ, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಕಲ್ಲಿದ್ದಲಿನ ಲಭ್ಯತೆಯಲ್ಲಿ ಇಳಿಕೆಯಾಗಿದ್ದು, ಇದರಿಂದಾಗಿ ವಿದ್ಯುತ್ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಇದೆಲ್ಲದರ ನಡುವೆ ದೆಹಲಿಯ ಇಂಧನ ಸಚಿವ ಸತ್ಯೇಂದ್ರ ಜೈನ್ ಅವರು ಸಮರ್ಪಕ ಕಲ್ಲಿದ್ದಲು ಪೂರೈಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದ ಹಲವು ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಇದೆ. ದಾದ್ರಿ-2 ವಿದ್ಯುತ್ ಸ್ಥಾವರದಲ್ಲಿ ಕೇವಲ ಒಂದು ದಿನದ ಕಲ್ಲಿದ್ದಲು ದಾಸ್ತಾನು ಉಳಿದಿದೆ. ಉಂಚಹಾರ್ ವಿದ್ಯುತ್ ಸ್ಥಾವರದಲ್ಲಿ ಎರಡು ದಿನಗಳ ದಾಸ್ತಾನು ಉಳಿದಿದ್ದರೆ, ಕಹಲ್‌ಗಾಂವ್‌ನಲ್ಲಿ ಮೂರೂವರೆ ದಿನದ ದಾಸ್ತಾನು ಉಳಿದಿದೆ. ಫರಕ್ಕಾದಲ್ಲಿ 5 ದಿನಗಳ ಸ್ಟಾಕ್ ಮತ್ತು ಝಜ್ಜರ್ (ಅರಾವಲಿ) ನಲ್ಲಿ 7-8 ದಿನಗಳ ಸ್ಟಾಕ್ ಮಾತ್ರ ಉಳಿದಿದೆ ಎಂದು ದೆಹಲಿ ಸರ್ಕಾರ ಹೇಳಿದೆ.
ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲಿನ ಸೀಮಿತ ದಾಸ್ತಾನು
ಪ್ರಸ್ತುತ ವಿದ್ಯುತ್ ಸರಬರಾಜು ಮಾಡುವ ವಿವಿಧ ಥರ್ಮಲ್ ಸ್ಟೇಷನ್‌ಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆಯಿದೆ ಎಂದು ದೆಹಲಿ ಇಂಧನ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ನ್ಯಾಷನಲ್ ಪವರ್ ಪೋರ್ಟಲ್‌ನ-ಎನ್‌ಸಿಪಿಸಿ ದಾದ್ರಿ ಮತ್ತು ಝಜ್ಜರ್ (ಅರಾವಳಿ), ಎರಡೂ ವಿದ್ಯುತ್ ಸ್ಥಾವರಗಳನ್ನು ಮುಖ್ಯವಾಗಿ ದೆಹಲಿಯ ವಿದ್ಯುತ್ ಅಗತ್ಯವನ್ನು ಪೂರೈಸಲು ಸ್ಥಾಪಿಸಲಾಯಿತು, ಆದರೆ ಈ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ದಾಸ್ತಾನು ಬಹಳ ಕಡಿಮೆ ಆಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗಲಿದೆ ಎಂದವರು ತಿಳಿಸಿದ್ದಾರೆ.
ಮೆಟ್ರೋ ಸೇವೆಗಳ ಮೇಲೂ ಪರಿಣಾಮ ಬೀರಬಹುದು:
ದೆಹಲಿ ಸರ್ಕಾರದ ಪ್ರಕಾರ, ದೆಹಲಿಯ ದಾದ್ರಿ, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಮತ್ತು ಜಜ್ಜರ್ ವಿದ್ಯುತ್ ಸ್ಥಾವರಗಳಿಂದ ಪ್ರತಿದಿನ 1751 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ದೆಹಲಿಯು ದಾದ್ರಿ ವಿದ್ಯುತ್ ಕೇಂದ್ರದಿಂದ ಗರಿಷ್ಠ 728 ಮೆಗಾವ್ಯಾಟ್ ಪೂರೈಕೆಯನ್ನು ಪಡೆಯುತ್ತದೆ, ಆದರೆ ಉಂಚಹಾರ್ ವಿದ್ಯುತ್ ಕೇಂದ್ರದಿಂದ 100 ಮೆಗಾವ್ಯಾಟ್. ಇಂತಹ ಪರಿಸ್ಥಿತಿಯಲ್ಲಿ, ಈ ಎರಡು ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದರಿಂದ, ದೆಹಲಿ ಮೆಟ್ರೋ ಮತ್ತು ಆಸ್ಪತ್ರೆ ಸೇರಿದಂತೆ ಅನೇಕ ಅಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಬಹುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ- ನಾಲ್ಕನೇ ಕೊರೊನಾ ಅಲೆ ಭೀತಿ, ದೇಶದೆಲ್ಲೆಡೆ 3,303 ಕೊರೊನಾ ಪ್ರಕರಣಗಳ ವರದಿ
ಪರಿಸ್ಥಿತಿಯ ಮೇಲೆ ಸರ್ಕಾರದ ಕಣ್ಣು:
ದೆಹಲಿಯ ಇಂಧನ ಸಚಿವ ಸತ್ಯೇಂದ್ರ ಜೈನ್ ಮಾತನಾಡಿ, ದೆಹಲಿ ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಜನರು ವಿದ್ಯುತ್ ಸಮಸ್ಯೆ ಎದುರಿಸದಂತೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿರುವ ಈ ವಿದ್ಯುತ್ ಕೇಂದ್ರಗಳ ಮೂಲಕ ದೆಹಲಿಯಲ್ಲಿ ಶೇಕಡಾ 25 ರಿಂದ 30 ರಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಮಧ್ಯಸ್ಥಿಕೆಗೆ ಮನವಿ:
ಈ ವಿದ್ಯುತ್ ಕೇಂದ್ರಗಳು ದೆಹಲಿಯ ಕೆಲವು ಭಾಗಗಳಲ್ಲಿ ಬ್ಲ್ಯಾಕ್‌ಔಟ್‌ಗಳನ್ನು ತಪ್ಪಿಸುವಲ್ಲಿ ಮತ್ತು ಡಿಎಂಆರ್ಸಿ, ಆಸ್ಪತ್ರೆಗಳಿಗೆ ಮುಂಬರುವ ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಗಾಗಿ ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಮತ್ತು ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದೆ.
ಇದನ್ನೂ ಓದಿ- ಮಧ್ಯಪ್ರದೇಶದ ವಿಧಾನಸಭೆಯ ವಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಮಲ್ ನಾಥ್
ದೆಹಲಿಯಲ್ಲಿ ವಿದ್ಯುತ್ ಬೇಡಿಕೆಯು ಏಪ್ರಿಲ್‌ನಲ್ಲಿ ಮೊದಲ ಬಾರಿಗೆ 6,000 ಮೆಗಾವ್ಯಾಟ್‌ಗೆ ತಲುಪಿದೆ:
ದೆಹಲಿಯಲ್ಲಿ ತಾಪಮಾನ ಏರಿಕೆಯೊಂದಿಗೆ, ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ ಗುರುವಾರ ವಿದ್ಯುತ್ ಬೇಡಿಕೆ 6,000 ಮೆಗಾವ್ಯಾಟ್‌ಗೆ ತಲುಪಿದೆ. ವಿದ್ಯುತ್ ವಿತರಣಾ ಕಂಪನಿ (ಡಿಸ್ಕಾಂ) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. 'ಸ್ಟೇಟ್ ಲೋಡ್ ಡೆಸ್ಪಾಚ್ ಸೆಂಟರ್' ದೆಹಲಿಯ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಮಧ್ಯಾಹ್ನ 3.31 ಕ್ಕೆ 6,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯೊಬ್ಬರು, ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ವಿದ್ಯುತ್ ಬೇಡಿಕೆ 6,000 ಮೆಗಾವ್ಯಾಟ್‌ಗೆ ತಲುಪಿದೆ. ಇದು ಬುಧವಾರದ 5,769 ಮೆಗಾವ್ಯಾಟ್‌ಗಿಂತ ಶೇ.3.7ರಷ್ಟು ಹೆಚ್ಚು. ಈ ವರ್ಷದ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ಬಿಸಿಲಿನ ಬೇಗೆಯಿಂದಾಗಿ, ತಿಂಗಳ ಆರಂಭದಿಂದ ನಗರದಲ್ಲಿ ವಿದ್ಯುತ್ ಬೇಡಿಕೆಯು ಶೇಕಡಾ 34 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.