ದೆಹಲಿಯಲ್ಲಿ ಮತ್ತೆ ಅಗ್ನಿ ಅವಘಡ

ದೆಹಲಿಯ ಕಿರಾರಿ ಪ್ರದೇಶದ ಪೀಠೋಪಕರಣ ಮಾರುಕಟ್ಟೆಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Last Updated : Dec 10, 2019, 11:47 AM IST
ದೆಹಲಿಯಲ್ಲಿ ಮತ್ತೆ ಅಗ್ನಿ ಅವಘಡ title=
Representational Image

ನವದೆಹಲಿ: ದೆಹಲಿಯ ಕಿರಾರಿ ಪ್ರದೇಶದ ಪೀಠೋಪಕರಣ ಮಾರುಕಟ್ಟೆಯಲ್ಲಿ ಮಂಗಳವಾರ (ಡಿಸೆಂಬರ್ 10) ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಎಂಟು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಈವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆರಂಭಿಕ ವರದಿಗಳ ಪ್ರಕಾರ, ಸುಮಾರು 300 ಚದರ ಯಾರ್ಡ್‌ಗಳ ಪೀಠೋಪಕರಣ ಗೊಡೌನ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡವು ನೆಲ ಮಳಿಗೆ ಮತ್ತು ಎರಡು ಮಹಡಿಗಳನ್ನು ಒಳಗೊಂಡಿದೆ.

ದೆಹಲಿಯ ಅನಾಜ್ ಮಂಡಿ ಪ್ರದೇಶದಲ್ಲಿ ಭಾರಿ ಬೆಂಕಿಯಲ್ಲಿ 43 ಜನರು ಸಾವನ್ನಪ್ಪಿದ ಎರಡು ದಿನಗಳ ನಂತರ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರಾಗಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣದ ವಿಚಾರಣೆಗಾಗಿ ದೆಹಲಿಯ ತೀಜ್ ಹಜಾರಿ ನ್ಯಾಯಾಲಯ ಸೋಮವಾರ ಕಾರ್ಖಾನೆ ಮಾಲೀಕ ರೆಹಾನ್ ಮತ್ತು ಮ್ಯಾನೇಜರ್ ಫುರ್ಕಾನ್ ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಅನಾಜ್ ಮಂಡಿ ಬೆಂಕಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮತ್ತು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ (ಡಿಸೆಂಬರ್ 9) ಅರ್ಜಿ ಸಲ್ಲಿಸಲಾಗಿತ್ತು. "ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ತುಗಳ ಉತ್ಪಾದನಾ ಕಾರ್ಖಾನೆಯನ್ನು ಸಹ ಅಕ್ರಮವಾಗಿ ಮತ್ತು ಯಾವುದೇ ನೋಂದಣಿ, ಪರವಾನಗಿ, ಪ್ರಾಧಿಕಾರ, ಪ್ರಮಾಣಪತ್ರ ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ನಡೆಸಲಾಗುತ್ತಿದೆ" ಎಂದು ವಕೀಲರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. 

"ಸಂಬಂಧಪಟ್ಟ ಅಧಿಕಾರಿಗಳ ಅಪರಾಧ ಮತ್ತು ಸಡಿಲತೆಯು ಸಾಮಾನ್ಯ ಮನೋಭಾವದಿಂದ ಅವರು ಮಾಡಿದ ಅಪರಾಧವಲ್ಲದೆ ಮತ್ತೇನಲ್ಲ" ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರ ವಿಭಾಗೀಯ ಪೀಠವು ಮಂಗಳವಾರ (ಡಿಸೆಂಬರ್ 10) ವಿಚಾರಣೆ ನಡೆಸಲಿದೆ.

Trending News