ನವದೆಹಲಿ: ಕೊರೊನಾ ವೈರಸ್ (Coronavirus) ಯುಗ ತನ್ನೊಂದಿಗೆ ಆರ್ಥಿಕ ಸಂಕಷ್ಟದ ಯುಗವನ್ನು ಸಹ ತಂದಿದೆ. ಈ ಆರ್ಥಿಕ ಸಂಕಷ್ಟದ ಯುಗ ಹಲವು ಕಂಪನಿಗಳಿಗೆ ಬೀಗ ಜಡಿದಿದೆ. ಅಷ್ಟೇ ಅಲ್ಲ ಹಲವು ಜನರು ನೌಕರಿ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ನೌಕರಿ ಹುಡುಕಾಟಕ್ಕೆ ವೆಬ್ ಸೈಟ್ ಹಾಗೂ ಇಂಟರ್ನೆಟ್ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಿಶ್ವದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ Google ಹೊಸ ಯೋಜನೆಯೊಂದನ್ನು ರೂಪಿಸಿದ್ದು, ತನ್ಮೂಲಕ ಅದು ತನ್ನ ಬಳಕೆದಾರರಿಗೆ ಕೇವಲ ಮೊಬೈಲ್ ಫೋನ್ ಮೂಲಕವೇ ನೌಕರಿಯನ್ನು ಪಡೆದುಕೊಳ್ಳುವಂತೆ ಮಾಡಲಿದೆ.
ಈ ಯೋಜನೆಯಡಿಯಲ್ಲಿ, ಗೂಗಲ್ ಭಾರತದಲ್ಲಿ ಹೊಸ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದೆ. ಇದರ ಮೂಲಕ ಜನರು ತಮ್ಮ ನೆಚ್ಚಿನ ಕೆಲಸವನ್ನು ಹುಡುಕಲು ಸಾಧ್ಯವಾಗಲಿದೆ. ಈ ಅಪ್ಲಿಕೇಶನ್ಗೆ Kormo Jobsಎಂದು ಹೆಸರಿಸಲಾಗಿದೆ. ಗೂಗಲ್ ತನ್ನ ಈ ಅಪ್ಲಿಕೇಶನ್ ಅನ್ನು ಕಳೆದ ವರ್ಷವೇ ಆರಂಭಿಸಿದೆ. 2019 ರವರೆಗೆ, ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ 'ಸ್ಪಾಟ್' ಹೆಸರಿನಲ್ಲಿ ಲಭ್ಯವಿತ್ತು. ಆದರೆ ಗೂಗಲ್ ಇದೀಗ ಅದನ್ನು ರೀಬ್ರಾಂಡ್ ಮಾಡಿ ಹೊಸ ಹೆಸರು ಮತ್ತು ವೈಶಿಷ್ಟ್ಯದೊಂದಿಗೆ ಬಿಡುಗಡೆ ಮಾಡಿದೆ.
ಉದ್ಯೋಗದ ಹುಡುಕಾಟದಲ್ಲಿರುವ ಹೆಚ್ಚಿನ ಸಂಖ್ಯೆಯ ಜನರು ಹಾಗೂ ಉದ್ಯೋಗಿಗಳ ಹುಡುಕಾಟದಲ್ಲಿರುವ ವಿವಿಧ ಕಂಪನಿಗಳು ಈ ಮೊಬೈಲ್ ಅಪ್ಲಿಕೇಶನ್ನಲ್ಲಿ ಸಕ್ರೀಯರಾಗಿದ್ದಾರೆ. ಕೋವಿಡ್ -19 ರ ನ್ಯೂ ನಾರ್ಮಲ್ ಯುಗದಲ್ಲಿ, ಅನೇಕ ಜನರು ಉದ್ಯೋಗಗಳನ್ನು ಹುಡುಕುತ್ತಿರುವಾಗ, ಉದ್ಯೋಗ ಹುಡುಕಾಟದ ನಡವಳಿಕೆಯಲ್ಲಿ ಬದಲಾವಣೆ ಕೂಡ ಕಂಡುಬಂದಿದೆ.ಇಂತಹ ಪರಿಸ್ಥಿತಿಯಲ್ಲಿ ಕಂಪನಿಯು ರಿಮೋಟ್ ಇಂಟರ್ವ್ಯೂ ಗಳಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಸೇರಿಸಿದೆ. ಜನರು ತಮ್ಮ ಮನೆಯಲ್ಲಿಯೇ ಕುಳಿತು ಸಂದರ್ಶನಗಳನ್ನು ನೀಡಲು ಇದು ಸಹಾಯ ಮಾಡಲಿದೆ.
ಗೂಗಲ್ ಪ್ರಕಾರ, ಝೋಮ್ಯಾಟೋ ಮತ್ತು ಡುಂಜೊಗಳಂತಹ ದೊಡ್ಡ ಕಂಪನಿಗಳು ಕೂಡ ಈ ಆಪ್ ಮೂಲಕ ಹೊಸ ಅಭ್ಯರ್ಥಿಗಳನ್ನು ಹುಡುಕುತ್ತಿವೆ. ಗೂಗಲ್ ಪ್ರಕಾರ, ಈ ವೇದಿಕೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಪರಿಶೀಲಿಸಿದ ಉದ್ಯೋಗಗಳನ್ನು ಪೋಸ್ಟ್ ಮಾಡಲಾಗಿದೆ, ಈ ಕಾರಣದಿಂದಾಗಿ ಗೂಗಲ್ Kormo Jobs ಅನ್ನು ಪ್ರಾರಂಭಿಸಿದೆ. Google Kormo Jobsಅಪ್ಲಿಕೇಶನ್ ಪ್ರಸ್ತುತ ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತಿದೊಡ್ಡ ವೃತ್ತಿಪರ ಜಾಬ್ ನೆಟ್ವರ್ಕಿಂಗ್ ತಾಣ ಲಿಂಕ್ಡ್ಇನ್ ಗೆ ತೀವ್ರ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಭಾರತದಲ್ಲಿ ಸುಮಾರು 400 ಮಿಲಿಯನ್ ಬಳಕೆದಾರರಿಗೆ ಗೂಗಲ್ ತನ್ನ ಸೇವೆಗಳನ್ನು ಒದಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜನರಿಗೆ ಈಗ ಉದ್ಯೋಗವನ್ನು ಹುಡುಕುವುದು ಮತ್ತಷ್ಟು ಸುಲಭವಾಗಲಿದೆ. ಈ ಅಪ್ಲಿಕೇಶನ್ನಲ್ಲಿ ವಿಭಿನ್ನ ಕೌಶಲ್ಯಗಳ ಆಧಾರದ ಮೇಲೆ ವಿವಿಧ ವಿಭಾಗಗಳಲ್ಲಿ ಉದ್ಯೋಗಗಳಿವೆ. ಇದೇ ವೇಳೆ ಈ ಅಪ್ಲಿಕೇಶನ್ ಅನ್ನು ಬಳಸುವುದು ಸಹ ತುಂಬಾ ಸುಲಭ. ಮೊದಲನೆಯದಾಗಿ, ಬಳಕೆದಾರರು Korma Jobs ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ತಮ್ಮಲ್ಲಿರುವ ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ, ಸರ್ಚ್ ಗುಂಡಿಯನ್ನು ಕ್ಲಿಕ್ಕಿಸಬೇಕು. ತಕ್ಷಣ ಉದ್ಯೋಗಿಗಳ ಹುಡುಕಾಟದಲ್ಲಿ ನಿರತವಾಗಿರುವ ಹಲವು ಕಂಪನಿಗಳ ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ.