ಸೋನಿಯಾ ಗಾಂಧಿ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು ಹೇಗೆ ? ಸಭೆಯೊಳಗೆ ನಡೆದದ್ದೇನು ?

ರಾಹುಲ್ ಗಾಂಧಿ ರಾಜೀನಾಮೆಯಿಂದಾಗಿ ತೆರುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೂತನ ವ್ಯಕ್ತಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಶನಿವಾರದಂದು ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಈಗ ಸೋನಿಯಾ ಗಾಂಧಿಯವರನ್ನು ಸರ್ವಾನುಮತದಿಂದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

Last Updated : Aug 11, 2019, 11:12 AM IST
ಸೋನಿಯಾ ಗಾಂಧಿ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು ಹೇಗೆ ? ಸಭೆಯೊಳಗೆ ನಡೆದದ್ದೇನು ? title=

ನವದೆಹಲಿ: ರಾಹುಲ್ ಗಾಂಧಿ ರಾಜೀನಾಮೆಯಿಂದಾಗಿ ತೆರುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೂತನ ವ್ಯಕ್ತಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಶನಿವಾರದಂದು ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಈಗ ಸೋನಿಯಾ ಗಾಂಧಿಯವರನ್ನು ಸರ್ವಾನುಮತದಿಂದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಎರಡು ವರ್ಷಗಳ ಹಿಂದೆ ಅಧ್ಯಕ್ಷೆ ಹುದ್ದೆಯನ್ನು ತ್ಯಜಿಸಿ ರಾಹುಲ್ ಗಾಂಧಿಗೆ ಹಸ್ತಾಂತರಿಸಿದ್ದ ಸೋನಿಯಾ ಗಾಂಧಿಗೆ ಈಗ ಪಕ್ಷದ ಕಾರ್ಯಕಾರಿ ಸಮಿತಿ ಹಂಗಾಮಿ ಅಧ್ಯಕ್ಷೆ ಪಟ್ಟವನ್ನು ನೀಡಿದೆ.

2017 ರಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಮೇ 25 ರಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಅಂದಿನಿಂದ ಕಾಂಗ್ರೆಸ್ ಪಕ್ಷವು ನೂತನ ಅಧ್ಯಕ್ಷರಿಗಾಗಿ ಹುಡುಕಾಟ ನಡೆಸಿತ್ತು. ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿಯವರನ್ನು ಅಧ್ಯಕ್ಷರಾಗಿ ಮುಂದುವರೆಯಲು ಒತ್ತಾಯಿಸಿರಾದರೂ ಕೂಡ ಅವರು ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿ ಉಳಿದರು.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಅನಿರ್ವಾರ್ಯವಾಗಿ ನೂತನ ಅಧ್ಯಕ್ಷರ ಆಯ್ಕೆ ಹುಡುಕಾಟ ಮುಂದುವರೆಸಬೇಕಾಯಿತು.ಈ ಮಧ್ಯೆ ಮಲ್ಲಿಕಾರ್ಜುನ್ ಖರ್ಗೆ, ಮುಕುಲ್  ವಾಸ್ನಿಕ್, ಸುಶೀಲ್ ಕುಮಾರ್ ಶಿಂಧೆಯವರ ಹೆಸರುಗಳು ಅಧ್ಯಕ್ಷ ಪಟ್ಟಕ್ಕೆ ಸಂಭಾವ್ಯ ಹೆಸರುಗಳಾಗಿ ಕೇಳಿಬಂದಿದ್ದವು.ಈ ಮಧ್ಯೆ ಸಿಡಬ್ಲ್ಯೂಸಿ ಶನಿವಾರದಂದು ಸಭೆಯನ್ನು ಕರೆದು ಐದು ಗುಂಪುಗಳನ್ನು ರಚಿಸಿತು ಮತ್ತು ದೇಶಾದ್ಯಂತ  ಎಲ್ಲ ರಾಜ್ಯ ಘಟಕಗಳಿಂದ ಸಲಹೆಗಳನ್ನು ಪಡೆಯಿತು.ಎಲ್ಲರು ಸರ್ವಾನುಮತದಿಂದ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಮುಂದುವರೆಯುವ ಬಗ್ಗೆ ತೀರ್ಮಾನಕ್ಕೆ ಬಂದರು. ಆದರೆ ರಾಹುಲ್ ಗಾಂಧಿ ಸಾರಾಸಗಾಟಾಗಿ ಈ ನಿರ್ಣಯವನ್ನು ತಿರಸ್ಕರಿಸಿದರು. ಅಲ್ಲದೆ ಗಾಂಧಿಯೇತರ ವ್ಯಕ್ತಿಗಳು ಮುಂದಿನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಬೇಕೆಂದು ಪ್ರತಿಪಾದಿಸಿದರು. 

ಇಡೀ ದಿನ, ಕಾಂಗ್ರೆಸ್ ನಾಯಕರು ಹಲವಾರು ಗಾಂಧಿಯೇತರ ಹೆಸರುಗಳನ್ನು ಸೂಚಿಸಿದರು. ಈ ಮಧ್ಯೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸೋನಿಯಾ ಗಾಂಧಿ ಅವರನ್ನು ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪ್ರಸ್ತಾಪಿಸಿದರು. ಆದರೆ ಸೋನಿಯಾ ಗಾಂಧಿ ಇದಕ್ಕೆ ನಿರಾಕರಿಸಿದರು. ಆದರೆ ಇದೆ ವೇಳೆ ಸಭೆಯಲ್ಲಿ ಹಾಜರಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಚಿದಂಬರಂ ಅವರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸೋನಿಯಾ ಗಾಂಧಿ ಇದಕ್ಕೆ ಸಿದ್ಧವಾಗಿದ್ದರೆ ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂದರು. 

ಇದಕ್ಕೆ ಎದ್ದು ನಿಂತು ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ವಿರೋಧ ವ್ಯಕ್ತಪಡಿಸಿಪಡಿಸಿದಾಗ ಮಧ್ಯ ಪ್ರವೇಶಿಸಿದ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕುಳಿತುಕೊಳ್ಳಲು ಹೇಳಿದರು. ಇದನ್ನೇಕೆ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. 'ಸಿಡಬ್ಲ್ಯುಸಿಯ ನಿರ್ಧಾರವನ್ನು ಸ್ವೀಕರಿಸಲು ರಾಹುಲ್ ಸಿದ್ಧರಿಲ್ಲದಿದ್ದಾಗ ಮೇಡಮ್ (ಸೋನಿಯಾ ಗಾಂಧಿ) ಈ ಜವಾಬ್ದಾರಿಯನ್ನು ಹೊರಲು ಮುಂದೆ ಬರಬೇಕು" ಎಂದು ಸಿಂಧಿಯಾ ಹೇಳಿದರು.

ಇನ್ನೊಂದೆಡೆಗೆ ಅಂಬಿಕಾ ಸೋನಿ, ಆಶಾ ಕುಮಾರಿ ಮತ್ತು ಕುಮಾರಿ ಶೈಲ್ಜಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಗಾಂಧಿ ಕುಟುಂಬವಿಲ್ಲದೆ ಪಕ್ಷವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೆ ರಾಹುಲ್ ಅವರನ್ನು ಮನವೊಲಿಸಲು ಸೋನಿಯಾ ಅವರು ಮುಂದಾಗಬೇಕೆಂದು ಕೇಳಿಕೊಂಡರು, ಆದರೆ ಸೋನಿಯಾ ಗಾಂಧಿ ಇದಕ್ಕೆ ತಿರಸ್ಕರಿಸಿದರು. ಇದೆ ವೇಳೆ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಹಾಜರಿದ್ದ ಎಲ್ಲ ನಾಯಕರು ಸೋನಿಯಾ ಗಾಂಧಿ ಪಕ್ಷದ ಜವಾಬ್ದಾರಿಯನ್ನು ಹೊರಬೇಕೆಂದು ಪಟ್ಟುಹಿಡಿದಾಗ ಸರ್ವಾನುಮತದ ನಾಯಕರ ಪ್ರಸ್ತಾಪವನ್ನು ಸೋನಿಯಾ ಗಾಂಧಿ ಒಪ್ಪಿಕೊಂಡರು. ಮೂಲಗಳ ಪ್ರಕಾರ ಸೋನಿಯಾ ಗಾಂಧಿ ನೂತನ ತಂಡವನ್ನು ರಚಿಸುವವರೆಗೆ ಎಐಸಿಸಿಯ ಪದಾಧಿಕಾರಿಗಳನ್ನು ಬದಲಾಯಿಸಲಾಗುವುದಿಲ್ಲ ಎನ್ನಲಾಗಿದೆ.

ಸೋನಿಯಾ ಗಾಂಧಿ ಈ ಹಿಂದೆ 1998 ರಿಂದ 2017 ರವರೆಗೆ 19 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

Trending News