ರಾಕೇಶ್ ಶರ್ಮಾ ಅವರಿಂದ ಗಗನಯಾನ ಯೋಜನೆ ತನಕ ಭಾರತದ ಬಾಹ್ಯಾಕಾಶ ಯಾನ

ಹಿಂದೆ, 1984ರಲ್ಲಿ ರಾಕೇಶ್ ಶರ್ಮಾ ಅವರು ರಷ್ಯಾದ ಇಂಟರ್‌ಕಾಸ್ಮೋಸ್ ಯೋಜನೆಯಲ್ಲಿ ಪಾಲ್ಗೊಂಡು, ಬಾಹ್ಯಾಕಾಶ ಯಾತ್ರೆ ಕೈಗೊಂಡ ಪ್ರಥಮ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.

Written by - Girish Linganna | Edited by - Krishna N K | Last Updated : Sep 24, 2023, 01:16 PM IST
  • ಇಂಟರ್‌ಕಾಸ್ಮೋಸ್ ಯೋಜನೆಯ ಮೂಲಕ ಸೋವಿಯತ್ ಒಕ್ಕೂಟದ ವಿವಿಧ ರಾಷ್ಟ್ರಗಳ ಸಹಯೋಗದೊಂದಿಗೆ ನಡೆಸಿದ ಸರಣಿ ಬಾಹ್ಯಾಕಾಶ ಅನ್ವೇಷಣಾ ಯೋಜನೆಯಾಗಿತ್ತು.
  • ರಷ್ಯನ್ನರಲ್ಲದ ಗಗನಯಾತ್ರಿಗಳಿಗೆ ವಿವಿಧ ಬಾಹ್ಯಾಕಾಶ ಯೋಜನೆಗಳಲ್ಲಿ ಸೋವಿಯತ್ ಗಗನಯಾತ್ರಿಗಳೊಡನೆ ಗಗನಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಲಾಗಿತ್ತು.
  • ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದ ರಾಕೇಶ್ ಶರ್ಮಾ ಅವರು ಈ ಯೋಜನೆಯಲ್ಲಿ ಪಾಲ್ಗೊಂಡು, ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಸಂಪಾದಿಸಿದರು.
ರಾಕೇಶ್ ಶರ್ಮಾ ಅವರಿಂದ ಗಗನಯಾನ ಯೋಜನೆ ತನಕ ಭಾರತದ ಬಾಹ್ಯಾಕಾಶ ಯಾನ title=

Rakesh Sharma : ರಷ್ಯನ್ ಇಂಟರ್‌ಕಾಸ್ಮೋಸ್ ಯೋಜನೆ ಎನ್ನುವುದು ಸೋವಿಯತ್ ಒಕ್ಕೂಟ (ಬಳಿಕ ರಷ್ಯಾ) ವಿವಿಧ ರಾಷ್ಟ್ರಗಳ ಸಹಯೋಗದೊಂದಿಗೆ ನಡೆಸಿದ ಸರಣಿ ಬಾಹ್ಯಾಕಾಶ ಅನ್ವೇಷಣಾ ಯೋಜನೆಯಾಗಿತ್ತು. ಈ ಯೋಜನೆಗಳಲ್ಲಿ ಸೋವಿಯತ್ ಅಥವಾ ರಷ್ಯನ್ನರಲ್ಲದ ಗಗನಯಾತ್ರಿಗಳಿಗೆ ವಿವಿಧ ಬಾಹ್ಯಾಕಾಶ ಯೋಜನೆಗಳಲ್ಲಿ ಸೋವಿಯತ್ ಗಗನಯಾತ್ರಿಗಳೊಡನೆ ಗಗನಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಲಾಗಿತ್ತು. ಈ ಪರಸ್ಪರ ಸಹಕಾರದ ಯೋಜನೆಗಳು ಶೀತಲ ಸಮರದ ಅವಧಿಯಲ್ಲಿ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಉದ್ದೇಶ ಹೊಂದಿದ್ದವು. ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದ ರಾಕೇಶ್ ಶರ್ಮಾ ಅವರು ಈ ಯೋಜನೆಯಲ್ಲಿ ಪಾಲ್ಗೊಂಡು, ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಸಂಪಾದಿಸಿದರು.

1984ರ ರಾಕೇಶ್ ಶರ್ಮಾ ಅವರ ಇಂಟರ್‌ಕಾಸ್ಮೋಸ್ ಯೋಜನೆಯಲ್ಲಿ ಸೊಯುಜ್ ಟಿ-11 ಬಾಹ್ಯಾಕಾಶ ನೌಕೆಯನ್ನು ಬಳಸಿಕೊಳ್ಳಲಾಗಿತ್ತು. ಈ ಯೋಜನೆಯ ಸಂದರ್ಭದಲ್ಲಿ, ರಾಕೇಶ್ ಶರ್ಮಾ ಅವರು ಭೂಮಿಯ ಕೆಳ ಕಕ್ಷೆಯಲ್ಲಿ ಅಂದಾಜು 220 ಕಿಲೋಮೀಟರ್‌ಗಳಷ್ಟು ಎತ್ತರದ (137 ಮೈಲಿ) ಸಾಲ್‌ಯುಟ್ 7 ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದರು. ಈ ಯೋಜನೆ 7 ದಿನಗಳ ಕಾಲ ನಡೆದಿತ್ತು.

ಇದನ್ನೂ ಓದಿ :ಭಾರತದ ಗಗನಯಾನ ಯೋಜನೆ: ಗಗನಯಾತ್ರಿಗಳ ರಕ್ಷಣೆಯನ್ನು ಪರೀಕ್ಷಿಸಲಿವೆ ಪೂರ್ವಭಾವಿ ಪರೀಕ್ಷೆಗಳು

2018ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 'ಗಗನಯಾನ' ಎಂದು ಹೆಸರಿಡಲಾದ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಅನಾವರಣಗೊಳಿಸಿದರು. ಈ ಮಹತ್ವಾಕಾಂಕ್ಷಿ ಯೋಜನೆ ಮೂವರು ಗಗನಯಾತ್ರಿಗಳನ್ನು ಮುಂದಿನ ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಹೊಂದಿತ್ತು. ದುರದೃಷ್ಟವಶಾತ್, ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಯೋಜನೆ ಸಾಕಷ್ಟು ವಿಳಂಬವನ್ನು ಅನುಭವಿಸಿತು.

ಚಂದ್ರಯಾನ-3 ಯೋಜನೆಯಲ್ಲಿ ಲ್ಯಾಂಡಿಂಗ್ ಮಾಡ್ಯುಲ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೂಲಕ ಗಳಿಸಿದ ಯಶಸ್ಸು ಗಗನಯಾನ ಯೋಜನೆಯ ಮುಂದುವರಿಕೆಗೆ ಹಾದಿ ಮಾಡಿಕೊಟ್ಟಿದೆ. ಗಗನಯಾನ ಯೋಜನೆಯ ಕುರಿತು ನಾವು ಹೊಂದಿರುವ ಮಾಹಿತಿಗಳು ಇಂತಿವೆ:

ಗಗನಯಾನ ಅಬಾರ್ಟ್ ಮಿಷನ್ ಪರೀಕ್ಷೆಯನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ತಿಂಗಳ ಆರಂಭದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಪರೀಕ್ಷೆಯಲ್ಲಿ ಕ್ರ್ಯೂ ಮಾಡ್ಯುಲ್ ಬಾಹ್ಯಾಕಾಶ ನೌಕೆಯಿಂದ ಬೇರ್ಪಡಲಿದ್ದು, ಯೋಜನೆಯ ಸ್ಥಗಿತಕ್ಕೆ ಆದೇಶಿಸಿ, ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಅನ್ನು ಪರೀಕ್ಷಿಸಲಾಗುತ್ತದೆ. ಎಲ್ಲವೂ ಸಮರ್ಪಕವಾಗಿ ಕಾರ್ಯಾಚರಿಸುತ್ತದೆ ಎಂದು ಪರೀಕ್ಷಿಸಲು ಯೋಜನಾ ಸ್ಥಗಿತದ ಎಲ್ಲ ಹಂತಗಳನ್ನೂ ನೆರವೇರಿಸಲಾಗುತ್ತದೆ.

ಇದನ್ನೂ ಓದಿ : ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಿರುದ್ಧ 10 ಕೋಟಿ ರೂ, ಮಾನನಷ್ಟ ಮೊಕದ್ದಮೆ ಹೂಡಿದ ಸಿಎಂ ಹಿಮಂತ ಶರ್ಮಾ ಪತ್ನಿ

ನೈಜ ಮಾನವ ಸಹಿತ ಯೋಜನೆಗೂ ಮೊದಲು, ಇಸ್ರೋ ಮೂರು ಅಭ್ಯಾಸ ಅಥವಾ ಪೂರ್ವಾಭ್ಯಾಸ ಯೋಜನೆಗಳನ್ನು ನೆರವೇರಿಸಲಿದೆ. ಇವುಗಳಲ್ಲಿ ಎರಡು ಪರೀಕ್ಷೆಗಳು ಪೇಲೋಡ್‌ಗಳನ್ನು ಕೊಂಡೊಯ್ದರೆ, ಒಂದು ಯೋಜನೆ ಯಾವುದೇ ಪೇಲೋಡನ್ನು ಒಯ್ಯುವುದಿಲ್ಲ. ಈ ಯೋಜನೆ ಅತ್ಯಂತ ಬೇಗ ಎಂದರೂ ಎಪ್ರಿಲ್ 2024ರಲ್ಲಿ ನಡೆಯಬಹುದಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಈ ಯೋಜನೆಗಾಗಿ ಬ್ಯಾಕ್ಟೀರಿಯಾ ಹಾಗೂ ಚಂದ್ರ ಹಾಗೂ ಮಂಗಳ ಗ್ರಹದ ಮಣ್ಣನ್ನು ಹೋಲುವ ರೀತಿಯ ಮಾದರಿಗಳನ್ನು ಬಳಸಿಕೊಂಡು ಇಟ್ಟಿಗೆಗಳನ್ನು ನಿರ್ಮಿಸಿದೆ.

ವಿಜ್ಞಾನಿಗಳು ಭವಿಷ್ಯದಲ್ಲಿ ಚಂದ್ರ ಅಥವಾ ಮಂಗಳನ ಮೇಲ್ಮೈಯಲ್ಲಿ ನಿರ್ಮಾಣ ಕಾರ್ಯಕ್ಕೆ ನೆರವಾಗುವಂತಹ ಉತ್ಪನ್ನಗಳನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಚಂದ್ರ ಮತ್ತು ಮಂಗಳ ಗ್ರಹದ ಮಣ್ಣಿನ ಗುಣಗಳನ್ನು ಹೋಲುವಂತಹ ಇಟ್ಟಿಗೆಗಳನ್ನು ನಿರ್ಮಿಸಿದೆ. ಇದು ಭವಿಷ್ಯದಲ್ಲಿ ಇಂತಹ ಆಕಾಶಕಾಯಗಳ ಮೇಲೆ ನಿರ್ಮಾಣ ಕಾರ್ಯ ಕೈಗೊಳ್ಳಲು ಅವಶ್ಯಕವಾದ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ನೆರವಾಗುತ್ತದೆ.

ಗಗನಯಾನ ಯೋಜನೆ ಭೂಮಿಯ ಕೆಳ ಕಕ್ಷೆಗೆ ಸೀಮಿತವಾಗಿರಲಿದೆ. ಆದ್ದರಿಂದ ಮಂಗಳ ಮತ್ತು ಚಂದ್ರನ ಮಣ್ಣನ್ನು ಹೋಲುವಂತೆ ನಿರ್ಮಿಸಿರುವ ಇಟ್ಟಿಗೆಗಳು ನೇರವಾಗಿ ನಿರ್ಮಾಣ ಕಾರ್ಯದಲ್ಲಿ ಬಳಕೆಯಾಗುವುದಿಲ್ಲ. ಬದಲಿಗೆ, ಇಂತಹ ಸಂಶೋಧನೆ ಮತ್ತು ಅಭಿವೃದ್ಧಿಗಳು ಭಾರತದ ವಿಶಾಲವಾದ ಬಾಹ್ಯಾಕಾಶ ಅನ್ವೇಷಣಾ ಕಾರ್ಯಕ್ರಮಗಳಲ್ಲಿ ಬಳಕೆಯಾಗಲಿವೆ. ಈ ವಸ್ತುಗಳ ಅಧ್ಯಯನದಿಂದ ಗಳಿಸಿದ ಮಾಹಿತಿಗಳು ಭವಿಷ್ಯದಲ್ಲಿ ಭೂಮಿಯ ಕೆಳ ಕಕ್ಷೆಯನ್ನು ಮೀರಿ ಕೈಗೊಳ್ಳುವ ಅನ್ವೇಷಣೆಗಳಿಗೆ ನೆರವಾಗಲಿವೆ. ಅಂತಹ ಯೋಜನೆಗಳಲ್ಲಿ, ಚಂದ್ರ ಅಥವಾ ಮಂಗಳ ಗ್ರಹದ ಮೇಲಿನ ನಿರ್ಮಾಣ ಕಾಮಗಾರಿಗಳು ವಾಸ್ತವ ಗುರಿಗಳಾಗಲಿವೆ.

ಇದನ್ನೂ ಓದಿ : ತಿಂಗಳುಗಳ ಸ್ಥಗಿತದ ನಂತರ ಮೊಬೈಲ್ ಇಂಟರ್ನೆಟ್ ಸೇವೆ ಪುನರಾರಂಭಿಸುವುದಾಗಿ ಮಣಿಪುರ ಸಿಎಂ ಘೋಷಣೆ

ಈ ಯೋಜನೆಯಲ್ಲಿ ಬಳಸಲಾಗುವ ಬಾಹ್ಯಾಕಾಶ ದಿರಿಸನ್ನು ಬೆಂಗಳೂರು ಸ್ಪೇಸ್ ಎಕ್ಸ್‌ಪೋದ ಆರನೇ ಆವೃತ್ತಿಯಲ್ಲಿ, 2018ರಲ್ಲಿ ಅನಾವರಣಗೊಳಿಸಲಾಯಿತು. ಈ ಮೂಲ ಮಾದರಿ ಕೇಸರಿ ಬಣ್ಣದ್ದಾಗಿದ್ದು, ತಿರುವನಂತಪುರದ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್‌ನಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಸಿದ್ಧಗೊಳಿಸಲಾಗಿತ್ತು. ಇದು ಒಂದು ಆಮ್ಲಜನಕದ ಸಿಲಿಂಡರನ್ನು ಅಳವಡಿಸಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಧರಿಸಿದಾಗ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 60 ನಿಮಿಷಗಳ ಕಾಲ ಉಸಿರಾಡಲು ಅನುಕೂಲ ಕಲ್ಪಿಸುತ್ತದೆ.

ಗಗನಯಾತ್ರಿಗಳನ್ನು ಒಯ್ಯಲು ಹ್ಯುಮನ್ ರೇಟೆಡ್ ಎಲ್ಎಂವಿ3 ರಾಕೆಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೊದಲು ಇದನ್ನು ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ ಎಂಕೆ 3 ಎನ್ನಲಾಗುತ್ತಿತ್ತು. ಈ ರಾಕೆಟ್ ಫಾಸ್ಟ್ ಆ್ಯಕ್ಟಿಂಗ್ ಸಾಲಿಡ್ ಮೋಟಾರ್‌ಗಳನ್ನು ಹೊಂದಿರುವ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಅನ್ನು ಹೊಂದಿರಲಿದೆ. ಈ ವ್ಯವಸ್ಥೆಯನ್ನು, ಗಗನಯಾನ ಉಡಾವಣಾ ವೇದಿಕೆಯಲ್ಲಿ ಅಥವಾ ಮೇಲೇರುವ ಹಂತದಲ್ಲಿ ತುರ್ತು ಪರಿಸ್ಥಿತಿ ಏನಾದರೂ ಎದುರಾದರೆ, ಕ್ರ್ಯೂ ಮಾಡ್ಯುಲ್ ಹಾಗೂ ಅದರಲ್ಲಿರುವ ಗಗನಯಾತ್ರಿಗಳನ್ನು ಕ್ಷಿಪ್ರವಾಗಿ ಸುರಕ್ಷಿತ ಅಂತರಕ್ಕೆ ಚಲಿಸುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ.

ಭಾರತ ಸರ್ಕಾರ ಗಗನಯಾನ ಯೋಜನೆಗಾಗಿ 9,023 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಭಾರತದ ಬಾಹ್ಯಾಕಾಶ ಯೋಜನೆಯ ಮುಂದಿನ ಹಂತಗಳಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಕುರಿತು ನಿರೀಕ್ಷೆಗಳಿವೆ.

ಇದನ್ನೂ ಓದಿ : ನಾಳೆ ಪ್ರಧಾನಿ ಮೋದಿಯಿಂದ  9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಉದ್ಘಾಟನೆ  

ಭಾರತ ಈ ಯೋಜನೆಗಾಗಿ ತನ್ನ ಗಗನಯಾತ್ರಿಗಳಿಗೆ ತರಬೇತಿ ನೀಡಲು ರಷ್ಯಾದ ಗ್ಲಾವ್‌ಕಾಸ್ಮೋಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ತರಬೇತಿಯನ್ನು ಮೂರು ಹಂತಗಳಾಗಿ ವಿಭಜಿಸಲಾಗಿದೆ. ಮೊದಲ ಎರಡು ಹಂತಗಳು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ನಲ್ಲಿ ನೆರವೇರಿದರೆ, ಕೊನೆಯ ಹಂತ ರಷ್ಯಾದಲ್ಲಿ ನೆರವೇರಿತು. ಮಾರ್ಚ್ 2023ರ ವೇಳೆಗೆ ಗಗನಯಾತ್ರಿಗಳು 40 ಬೋಧಕರ 218 ಉಪನ್ಯಾಸಗಳಿಗೆ ಹಾಜರಾಗಿದ್ದರು. 75 ದೈಹಿಕ ತರಬೇತಿ ಅವಧಿಗಳಲ್ಲಿ ಪಾಲ್ಗೊಂಡಿದ್ದರು, ಮೂರು ಅಧ್ಯಯನ ಪ್ರವಾಸಗಳಿಗೆ ತೆರಳಿದ್ದರು, ಒಟ್ಟು 12 ಗಂಟೆಗಳನ್ನು ಪೂರ್ಣಗೊಳಿಸುವ ಎರಡು ಹಾರಾಟ ಅಭ್ಯಾಸ ನಡೆಸಿದ್ದರು ಮತ್ತು ಎರಡು ವೈದ್ಯಕೀಯ ಪರೀಕ್ಷೆಗಳು ಹಾಗೂ ಎರಡು ತರಬೇತಿ ಮೌಲ್ಯಮಾಪನಗಳಿಗೆ ಹಾಜರಾಗಿದ್ದರು.

ಗಗನಯಾನ ಯೋಜನೆ ಯಶಸ್ವಿಯಾದರೆ, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಸಾಧನೆಗೈದ ರಷ್ಯಾ, ಅಮೆರಿಕಾ, ಮತ್ತು ಚೀನಾಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿ, ಈ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ನಾಲ್ಕನೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಲೇಖಕರು 
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News