ರಾಂಚಿ: ಬಹುಕೋಟಿ ಮೇವು ಹಗರಣದ ಆರೋಪಿ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋಟ್ ಗುರುವಾರ ತಿರಸ್ಕರಿಸಿದೆ.
ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿಯನ್ನು ಜನವರಿ 4 ರಂದು ವಿಚಾರಣೆ ನಡೆಸಿದ್ದ ಜಾರ್ಖಂಡ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಇಂದು ಯಾದವ್ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ತಿರಸ್ಕರಿಸಿ ತೀರ್ಪು ನೀಡಿದ್ದಾರೆ ಎಂದು ಸಿಬಿಐ ವಕೀಲ ರಾಜೀವ್ ಸಿನ್ಹಾ ತಿಳಿಸಿದ್ದಾರೆ.
ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಯಾದವ್ ಅವರು ಅನಾರೋಗ್ಯದ ಕಾರಣದಿಂದ ಪ್ರಸ್ತುತ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಐಎಂಎಸ್) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಮೇವು ಹಗರಣ?
1990 ರಲ್ಲಿ ನಡೆದ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರೀ ಖಜಾನೆಯಿಂದ 37.70 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆಯಾದ ಅನುದಾನದ ಹಣವನ್ನು ಮೂಲ ಉದ್ದೇಶಕ್ಕೆ ಬಳಸಿಕೊಳ್ಳದೇ, ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸರ್ಕಾರದ ಪ್ರಭಾವಿಗಳು ದುರುಪಯೋಗಪಡಿಸಿಕೊಂಡಿದ್ದರು.