ನವದೆಹಲಿ: ನ್ಯಾಯಮೂರ್ತಿ ಶರದ್ ಅರವಿಂದ್ ಬಾಬ್ಡೆ ಅವರನ್ನು ಸುಪ್ರೀಂಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡುವ ಆದೇಶಕ್ಕೆ ರಾಷ್ಟಪತಿ ರಾಮ್ ನಾಥ್ ಕೋವಿಂದ್ ಮಂಗಳವಾರ ಸಹಿ ಹಾಕಿದ್ದಾರೆ.
ನವೆಂಬರ್ 18 ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸುಮಾರು 18 ತಿಂಗಳು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಪ್ರಸ್ತುತ ಸಿಜೆಐ ರಂಜನ್ ಗೊಗೊಯ್ ನಂತರ ನ್ಯಾಯಮೂರ್ತಿ ಬಾಬ್ಡೆ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ.
63 ವರ್ಷದ ನ್ಯಾಯಮೂರ್ತಿ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದು, ಮುಂಬೈನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ನಾಗ್ಪುರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು 23 ಏಪ್ರಿಲ್ 2021 ರಂದು ನಿವೃತ್ತರಾಗಲಿದ್ದಾರೆ.
ನಾಗ್ಪುರ ಮೂಲದವರಾಗಿರುವ ಬಾಬ್ಡೆ, ನಗರದ ಎಸ್ಎಫ್ಎಸ್ ಕಾಲೇಜಿನಿಂದ ಪದವಿ ಪಡೆದರು ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು. ನಂತರ ಅವರು 1998 ರಲ್ಲಿ ಹಿರಿಯ ವಕೀಲರಾದರು. ನ್ಯಾಯಮೂರ್ತಿ ಬಾಬ್ಡೆ ಅವರನ್ನು 2000 ರಲ್ಲಿ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 2012 ರಲ್ಲಿ ಮಧ್ಯಪ್ರದೇಶದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇರಿಕೊಂಡರು. ತದನಂತರ 2013 ರಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಅಕ್ಟೋಬರ್ ತಿಂಗಳಲ್ಲಿ ಸಿಜೆಐ ರಂಜನ್ ಗೊಗೊಯ್ ಅವರು ನ್ಯಾಯಮೂರ್ತಿ ಬಾಬ್ಡೆ ಅವರ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಂಪ್ರದಾಯದ ಪ್ರಕಾರ ಮುಖ್ಯ ನ್ಯಾಯಮೂರ್ತಿ ಅವರ ಉತ್ತರಾಧಿಕಾರಿಯ ಹೆಸರನ್ನು ಸರ್ಕಾರಕ್ಕೆ ಬರೆದು ಶಿಫಾರಸು ಮಾಡಬೇಕು.