ತಿರುವನಂತಪುರಂ: ಕೇರಳದಲ್ಲಿ ಕರೋನಾ ವೈರಸ್‌ನ ಮೂರನೇ ಸಕಾರಾತ್ಮಕ ಪ್ರಕರಣ ದೃಡೀಕರಿಸಿದ ನಂತರ ಸರ್ಕಾರ ಇದನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಿದೆ. ರಾಜ್ಯ ಆರೋಗ್ಯ ಸಚಿವರಾದ ಕೆ.ಕೆ.ಶೈಲಜಾ ಈ ಬಗ್ಗೆ ಮಾಹಿತಿ ನೀಡಿದ್ದು, ಕರೋನಾ ವೈರಸ್ ಅನ್ನು 'ರಾಜ್ಯ ವಿಪತ್ತು' ಎಂದು ಸರ್ಕಾರ ಘೋಷಿಸಿದೆ, ಇದರಿಂದಾಗಿ ಈ ಮಾರಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು. ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉನ್ನತ ಸಮಿತಿಯ ಸಭೆಯಲ್ಲಿ ಇದರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಈವರೆಗೆ ಮೂರು ಕರೋನಾ ವೈರಸ್(Corona virus) ಪ್ರಕರಣಗಳು ದೃಢಪಟ್ಟಿದೆ. ಕೇರಳದ ಕಾಸರಗೋಡಿನಲ್ಲಿ ಕರೋನಾ ವೈರಸ್‌ನ ಮೂರನೇ ಸಕಾರಾತ್ಮಕ ಪ್ರಕರಣ ದೃಢಪಡಿಸಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ. ಕಾಸರ್‌ಗೋಡ್ ಜಿಲ್ಲೆಯ ಕನ್‌ಹಗಢದಲ್ಲಿ ಯುವಕರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ವುಹಾನ್‌ನಲ್ಲಿ ವಿದ್ಯಾರ್ಥಿಯಾಗಿದ್ದ ಯುವಕರ ಸ್ಥಿತಿ ಸ್ಥಿರವಾಗಿದೆ ಎಂದು ಶೈಲಾಜಾ ಹೇಳಿದ್ದಾರೆ.
ಇದಕ್ಕೂ ಮುನ್ನ ಎರಡು ಸಕಾರಾತ್ಮಕ ಪ್ರಕರಣಗಳು ಬಂದಿವೆ. ಈ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಕೂಡ ವುಹಾನ್‌ನಲ್ಲಿ ಓದುತ್ತಿದ್ದರು. ಅವರು ಆಲಪ್ಪುಳ ಮತ್ತು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿದ್ದಾರೆ ಮತ್ತು ಸದ್ಯ ಅವರಿಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ.
ರಾಜ್ಯಕ್ಕೂ ಕಾಲಿಟ್ಟಿದೆಯೇ ಮಹಾಮಾರಿ ಕರೋನಾ ವೈರಸ್?
"ಚೀನಾದಲ್ಲಿ ಎನ್-ಕೊರೊನಾವೈರಸ್ ವಿಪರೀತವಾಗಿದೆ ಎಂದು ತಿಳಿದ ಬಳಿಕ ವೈರಸ್ ಅನ್ನು ತಡೆಗಟ್ಟಲು ನಾವು ಹಲವಾರ ರೀತಿ ಕ್ರಮ ಕೈಗೊಂಡಿದ್ದೇವೆ. ಚೀನಾದಲ್ಲಿ ಅನೇಕ ಮಂದಿ ಕೇರಳ ವಿದ್ಯಾರ್ಥಿಗಳು ಇದ್ದಾರೆ. ಅವರು ಹಿಂದಿರುಗಿದ ಬಳಿಕ ರಾಜ್ಯದಲ್ಲಿ ಕರೋನಾ ವೈರಸ್ ಪರಿಣಾಮ ಬೀರಿರಬಹುದು ಎಂಬ ಬಗ್ಗೆ ನಮಗೆ ಅನುಮಾನಗಳಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ ಮೂರು ಸಕಾರಾತ್ಮಕ ಕರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಲು ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ನಾವು ಆರೋಗ್ಯ ಅಧಿಕಾರಿಗಳನ್ನು ರಜೆಯಿಂದ ವಾಪಸ್ ಕರೆಸಿಕೊಳ್ಳುತ್ತಿದ್ದೇವೆ ಮತ್ತು ಈ ವೈರಸ್ ಪರಿಣಾಮ ಬೀರದಂತೆ ಎಲ್ಲಾ ರೀತಿಯ ಸೂಕ್ತ ಕ್ರಮ ಜಾರಿಗೆ ತರಲಾಗುವುದು" ಎಂದು ಶೈಲಾಜಾ ಹೇಳಿದ್ದರು.
ಸದ್ಯ ಇದಕ್ಕಾಗಿ ಯಾವುದೇ ಔಷಧಿ ಇಲ್ಲ ಎಂದು ತಿಳಿಸಿದ ಶೈಲಾಜಾ, ನಾವು ಚೀನಾದಲ್ಲಿ ಕಲಿಯುತ್ತಿರುವ ನಮ್ಮ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಗಳು ಮತ್ತು ಐಸಿಎಂಆರ್ ಸೂಚಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ ನಾವು ಮುಂದುವರೆದಿದ್ದೇವೆ. ಈ ಪರಿಸ್ಥಿತಿಯನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದಾರು ತಿಳಿಸಿದರು.
ಪ್ರಸ್ತುತ 1,925 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಇನ್ನೂ 25 ಜನರು ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ಅವರು ಹೇಳಿದರು.