ಮಂಡ್ಸೋರ್: ಮಧ್ಯಪ್ರದೇಶದ ಮಂಡ್ಸೋರ್ ಜಿಲ್ಲೆಯ ಫತೇಪುರ್ ಗ್ರಾಮದ ಐವರು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಗ್ರಾಮಸ್ಥರೇ ಹೊಡೆದು ಕೊಂದು ಹಾಕಿದ ಘಟನೆ ನಡೆದಿದೆ.
"ಈ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಒಂದು ಚಿರತೆ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ಪರಿಣಾಮ ಎಲ್ಲರೂ ಸೇರಿ ಅದನ್ನು ಹೊಡೆದು ಕೊಂದು ಹಾಕಿದ್ದಾರೆ. "ಗ್ರಾಮದೊಳಗೆ ಚಿರತೆ ಬರುತ್ತಿದೆ ಎಂಬ ಮಾಹಿತಿ ದೊರೆತ ಕೂಡಲೇ ಅದರ ಫೋಟೋ ತೆಗೆಯಲು ಅಲ್ಲಿಗೆ ಹೋದೆವು. ನಾವೆಲ್ಲರೂ ಒಟ್ಟಿಗೇ ನಿಂತಿದ್ದರೂ ಆ ಚಿರತೆ ಸುಮಾರು 7 ಅಡಿ ಜಿಗಿದು ನನ್ನ ಮೇಲೆ ದಾಳಿ ನಡೆಸಿತು. ಕೂಡಲೇ ಅಲ್ಲಿದ್ದವರು ಆ ಚಿರತೆಯನ್ನು ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಚಿರತೆ ಸಾವನ್ನಪ್ಪಿತು" ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
"ಚಿರತೆಗಳು ಗ್ರಾಮಕ್ಕೆ ನುಗ್ಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದೆವು. ಅಷ್ಟರಲ್ಲಾಗಲೇ ಒಂದು ಚಿರತೆ ಸಾವನ್ನಪ್ಪಿತ್ತು. ಮತ್ತೊಂದು ಚಿರತೆ ಇದೇ ಪ್ರದೇಶದಲ್ಲಿದ್ದು ಶೋಧ ಕಾರ್ಯಾ ಆರಂಭಿಸಲಾಗಿದೆ" ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.