ನವದೆಹಲಿ: ದೇಶಾದ್ಯಂತ ಅನ್ಲಾಕ್ ಮಾಡುವ ಪ್ರಕ್ರಿಯೆಯಿಂದ ನೀವು ಸ್ವಲ್ಪ ಪರಿಹಾರವನ್ನು ಅನುಭವಿಸುತ್ತಿದ್ದರೆ ಜಾಗರೂಕರಾಗಿರಿ. ದೇಶದ ಹಲವು ನಗರಗಳಲ್ಲಿ ಲಾಕ್‌ಡೌನ್ (Lockdown) ಅನ್ನು ಮತ್ತೊಮ್ಮೆ ಕಾರ್ಯಗತಗೊಳಿಸಬಹುದು. ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು 8.5 ಲಕ್ಷಕ್ಕೆ ತಲುಪಿದೆ. ಏತನ್ಮಧ್ಯೆ ಮುಂಬರುವ ದಿನಗಳಲ್ಲಿ ಬೆಂಗಳೂರು (Bengaluru) ಮತ್ತು ಪುಣೆ ಸೇರಿದಂತೆ ಹಲವಾರು ನಗರಗಳ ಅಧಿಕಾರಿಗಳು ವಿವಿಧ ಅವಧಿಗಳಿಗೆ ಲಾಕ್‌ಡೌನ್ ಅನ್ನು ಮತ್ತೆ ಅನ್ವಯಿಸಲು ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಿದೆ.
ವಾರಾಂತ್ಯ ಶನಿವಾರ ಮತ್ತು ಭಾನುವಾರದಂದು ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೆ ತರಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಇದಕ್ಕೂ ಮುನ್ನ ಕರ್ನಾಟಕ ಮತ್ತು ತಮಿಳುನಾಡು ಭಾನುವಾರ ಲಾಕ್‌ಡೌನ್ ಜಾರಿಗೆ ತಂದಿದ್ದವು. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಬಿಹಾರದಂತಹ ರಾಜ್ಯಗಳು ವಿವಿಧ ಅವಧಿಗಳಲ್ಲಿ ಪ್ರದೇಶವಾರು ಲಾಕ್‌ಡೌನ್‌ಗಳನ್ನು ಘೋಷಿಸಿವೆ.
ಜುಲೈ 14 ರಿಂದ ಏಳು ದಿನಗಳವರೆಗೆ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಮಧುರೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 14 ರವರೆಗೆ ಲಾಕ್‌ಡೌನ್ ವಿಸ್ತರಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಜುಲೈ 13 ರಿಂದ 23 ರವರೆಗೆ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ವ್ಯಾಪಕ ಲಾಕ್‌ಡೌನ್‌ಗಳನ್ನು ಘೋಷಿಸಿತ್ತು. ಮುಂಬೈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ರೀತಿಯ ಲಾಕ್‌ಡೌನ್ ಅನ್ನು ರಾಜ್ಯ ಸರ್ಕಾರ ಘೋಷಿಸಿತ್ತು.
ಕಾಶ್ಮೀರದ ಅಧಿಕಾರಿಗಳು ಭಾನುವಾರ ಮತ್ತೊಂದು ಹಂತದ ಲಾಕ್‌ಡೌನ್‌ನ ಕಟ್ಟುನಿಟ್ಟಿನ ಅನುಷ್ಠಾನವನ್ನು ಪ್ರಾರಂಭಿಸಿದರು ಮತ್ತು ಐತಿಹಾಸಿಕ ಲಾಲ್ ಚೌಕ್ ಅನ್ನು ಸಂಪೂರ್ಣವಾಗಿ ಮುಚ್ಚಿದರು. ಶ್ರೀನಗರದ ಇತರ 67 ಪ್ರದೇಶಗಳನ್ನು ಸಹ ಮುಚ್ಚಲಾಗಿದ್ದು, ಕೋವಿಡ್ -19 ಪ್ರಕರಣಗಳು ಹಠಾತ್ತನೆ ಹೆಚ್ಚಾದ ನಂತರ ಕಳೆದ ಒಂದು ವಾರದಲ್ಲಿ ಇದನ್ನು ನಿಷೇಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಆದಾಗ್ಯೂ ದೆಹಲಿಯಲ್ಲಿ ಕೆಲವು ಸಕಾರಾತ್ಮಕ ವರದಿಗಳಿವೆ, ಅಲ್ಲಿ ಭಾನುವಾರ ಕೋವಿಡ್ -19 ಪ್ರಕರಣಗಳು ಸತತ ಎರಡನೇ ದಿನ 2,000 ಕ್ಕಿಂತಲೂ ಕಡಿಮೆಯಾಗಿವೆ. ಮಹಾರಾಷ್ಟ್ರದಲ್ಲಿ ಭಾನುವಾರ 7,827 ಹೊಸ ಕರೋನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,54,427ಕ್ಕೆ ಏರಿದೆ.
ತಮಿಳುನಾಡಿನಲ್ಲಿ ಕೆಲವು ದಿನಗಳ ಅಂತರದ ನಂತರ ಭಾನುವಾರ ಮತ್ತೆ 4,000ಕ್ಕೂ ಹೆಚ್ಚು ಹೊಸ ಕರೋನಾವೈರಸ್ ಸೋಂಕು ಸಂಭವಿಸಿದೆ ಮತ್ತು ಈ ಸಾಂಕ್ರಾಮಿಕ ರೋಗದಿಂದ ಇನ್ನೂ 68 ಜನರು ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ ಕರೋನಾವೈರಸ್ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ ಇನ್ನೂ ಏಳು ಜನರು ಸಾವನ್ನಪ್ಪಿದ್ದಾರೆ. ಇದು ಈ ಸಾಂಕ್ರಾಮಿಕ ರೋಗದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ರಾಜ್ಯದಲ್ಲಿ 125ಕ್ಕೆ ಹೆಚ್ಚಿಸಿದೆ.
ಕರೋನಾವೈರಸ್ (Coronavirus) ಸೋಂಕು ಹರಡುವುದನ್ನು ತಡೆಗಟ್ಟಲು ವಾರಾಂತ್ಯದಲ್ಲಿ ಲಾಕ್‌ಡೌನ್ ಜಾರಿಗೆ ತರಲಾಗುವುದು ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಮತ್ತು ಮಾಹಿತಿ) ಅವ್ನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.
ದೇಶದಲ್ಲಿ ಭಾನುವಾರ 28,637 ಕೋವಿಡ್ -19 (Covid-19) ಪ್ರಕರಣಗಳು ದಾಖಲಾದ ನಂತರ, ಒಟ್ಟು ಸೋಂಕಿನ ಪ್ರಕರಣಗಳು 8,49,553ಕ್ಕೆ ಏರಿದೆ. ಅದೇ ಸಮಯದಲ್ಲಿ ಒಂದು ದಿನದಲ್ಲಿ ಈ ಕಾಯಿಲೆಯಿಂದಾಗಿ 551 ಜನರು ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ 22,674ಕ್ಕೆ ಏರಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ ಕರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ 5,34,620ಕ್ಕೆ ಏರಿದರೆ, 2,92,258 ಜನರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ.