ನವದೆಹಲಿ: ಮಹಾರಾಷ್ಟ್ರ ಸರ್ಕಾರ ಈಗ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ದವಿರುವ ವೈದಕೀಯ ವಿದ್ಯಾರ್ಥಿಗಳಿಗೆ ಸೀಟುಗಳಲ್ಲಿ ಶೇ 10 ರಷ್ಟು ಮೀಸಲಾತಿ ನೀಡುವ ಮಸೂದೆ ಜಾರಿ ತರಲು ಮುಂದಾಗಿದೆ.
ಈ ನೂತನ ಮಸೂದೆ ಅಂಗೀಕಾರವಾದ ನಂತರ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಾವಧಿಯ ಆಧಾರದ ಮೇಲೆ ತಮ್ಮ ಸೇವೆಗಳನ್ನು ಒದಗಿಸಲು ಸ್ವಯಂಪ್ರೇರಣೆಯಿಂದ ಸಿದ್ಧರಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಸ್ಥಾನಗಳನ್ನು ಕಾಯ್ದಿರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತದೆ.
ಈ ಮಸೂದೆಯು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಶೇ 10ರಷ್ಟು ಸೀಟುಗಳನ್ನು ಕಾಯ್ದಿರಿಸಲು ಅವಕಾಶ ನೀಡುತ್ತದೆ. ಈ ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಕೋರ್ಸ್ ಮುಗಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ 5 ವರ್ಷಗಳ ಸೇವೆ ನೀಡುವುದು ಕಡ್ಡಾಯವಾಗಿರುತ್ತದೆ.
ಸರ್ಕಾರಿ ಆಸ್ಪತ್ರೆಗಳು, ವಿಶೇಷವಾಗಿ ಗ್ರಾಮೀಣ ಅಥವಾ ಬುಡಕಟ್ಟು ಪ್ರದೇಶಗಳಲ್ಲಿನ ಆಸ್ಪತ್ರೆಗಳು ಮತ್ತು ಕಷ್ಟಕರವಾದ ಭೂಪ್ರದೇಶ ಹೊಂದಿರುವ ಪ್ರದೇಶಗಳಲ್ಲಿನ ವೈದ್ಯರ ಕೊರತೆಯನ್ನು ನೀಗಿಸಲು ವೈದ್ಯಕೀಯ ಕಾಲೇಜುಗಳಿಗೆ ಈ ಹೊಸ ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.